Muda scam: ಧೈರ್ಯವಿದ್ದರೆ CBI ತನಿಖೆಗೆ ಸಹಕರಿಸಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

ಇದರಿಂದ ನೀವು ನನ್ನ ವಿರುದ್ಧ ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತೂ ಇನ್ನೇನನ್ನೂ ಸಾಧಿಸಲಾಗದು.
CM Siddaramaiah, BY Vijayendra
ಸಿಎಂ ಸಿದ್ದರಾಮಯ್ಯ, ಬಿ.ವೈ. ವಿಜಯೇಂದ್ರ
Updated on

ಬೆಂಗಳೂರು: ವಕ್ಪ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿ.ವೈ. ವಿಜಯೇಂದ್ರ ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ಮೋದಿ ಅವರಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಿ ಮೋದಿ ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್'ವೊಂದು ಭಾರೀ ಸದ್ದು ಮಾಡುತ್ತಿದೆ.

ಸಿದ್ದರಾಮಯ್ಯ ಆರೋಪ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರವಾಗಿ ಕಿಡಿಕಾರಿದ್ದು, ಧೈರ್ಯವಿದ್ದರೆ ನಿಮ್ಮ ವಿರುದ್ಧದ ಮುಡಾ ಹಗರಣದ ಸಿಬಿಐ ತನಿಖೆಗೆ ಸಹಕರಿಸಿ ಎಂದು ಸವಾಲು ಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಬಿಐ, ಇಡಿ ತನಿಖೆಗಳಿಗೆ ಬೆಚ್ಚಿಬಿದ್ದಿರುವ ನೀವು ರಾಜ್ಯಪಾಲರು ಪ್ರಾಸಿಕ್ಯೂಷನ್'ಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಘಟಾನುಘಟಿ ಹಿರಿಯ ವಕೀಲರನ್ನು ದೆಹಲಿಯಿಂದ ಕರೆಸಿಕೊಂಡು ಕಾನೂನು ರಕ್ಷಣೆ ಪಡೆಯಲು ವ್ಯರ್ಥ ಪ್ರಯತ್ನ ನಡೆಸಿದಿರಿ, ಉಚ್ಛ ನ್ಯಾಯಾಲಯದ ತೀರ್ಪಿನಿಂದ ಮುಖಭಂಗಕ್ಕೀಡಾದ ನಿಮಗೆ ಇನ್ನೊಬ್ಬರ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹರಣ ಸೇರಿದಂತೆ ಹತ್ತು ಹಲವು ಭ್ರಷ್ಟಾಚಾರದ ಆರೋಪಗಳು ನಿಮ್ಮ ಹಾಗೂ ನಿಮ್ಮ ಸರ್ಕಾರದ ಕೊರಳಿಗೆ ಸುರಳಿಯಾಗಿ ಸುತ್ತಿಕೊಂಡಿದೆ, ಹೇಗಾದರೂ ಮಾಡಿ ಈ ಹಗರಣದಿಂದ ಬಚಾವಾಗಲೇಬೇಕೆಂದು ನಿಮ್ಮ ಕೈ ಕೆಳಗಿನ ಅಧಿಕಾರಿಗಳು ನಡೆಸುವ ಲೋಕಾಯುಕ್ತದ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದುಕೊಳ್ಳಲು ಮುಖ್ಯಮಂತ್ರಿ ಸ್ಥಾನದ ಅಧಿಕಾರವನ್ನೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ.

ಉಚ್ಛ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸದಂತೆ ತಡೆಯಲು ಈ ಕ್ಷಣಕ್ಕೂ ದೆಹಲಿಯ ಸಂವಿಧಾನ ತಜ್ಞ ವಕೀಲರನ್ನೇ ಕರೆಸಿ ಕನ್ನಡಿಗರ ತೆರಿಗೆ ಹಣವನ್ನು ನೀರಿನಂತೆ ಪೋಲು ಮಾಡಿ ವಾದ ಮಾಡಿಸಿಕೊಳ್ಳುತ್ತಿದ್ದೀರಿ, ನಿಮಗೆ ಮೆತ್ತಿಕೊಂಡಿರುವ ಕಪ್ಪುಮಸಿ ಅಳಿಸುವ ಯಾವ ರಾಸಾಯನಿಕವೂ ನಿಮಗೆ ದೊರಕುತ್ತಿಲ್ಲ, ಇದರಿಂದ ನೀವು ಹತಾಶರಾಗಿ ತಳ ಬುಡವಿಲ್ಲದ ಕಪೋಲಕಲ್ಪಿತ ವಿಷಯ ಹಿಡಿದುಕೊಂಡು ಬ್ರಹ್ಮಾಸ್ತ್ರವೆಂದು ಭ್ರಮಿಸಿ ಪ್ರಯೋಗಿಸಲು ಹೊರಟಿದ್ದೀರಿ.

ಇದರಿಂದ ನೀವು ನನ್ನ ವಿರುದ್ಧ ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತೂ ಇನ್ನೇನನ್ನೂ ಸಾಧಿಸಲಾಗದು. ನಿಮ್ಮ ವಿರುದ್ಧದ ಆರೋಪಗಳಿಗೆಲ್ಲ ಸಾಕ್ಷಿಗಳು ದಿನನಿತ್ಯವೂ ಸರಣಿ ರೂಪದಲ್ಲಿ ಮೇಲೆದ್ದು ನಿಮ್ಮ ಮುಖಕ್ಕೆ ರಾಚುತ್ತಲೇ ಇವೆ, ಇಷ್ಟಾಗಿಯೂ ಭಂಡತನದಿಂದ ವರ್ತಿಸುತ್ತಿರುವ ನೀವು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ ಏಕೈಕ ಮುಖ್ಯಮಂತ್ರಿ ಎಂಬುದು ಇತಿಹಾಸದಲ್ಲಿ ಈಗಾಗಲೇ ದಾಖಲಾಗಿಹೋಗಿದೆ.

CM Siddaramaiah, BY Vijayendra
ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು ವಿಜಯೇಂದ್ರರಿಂದ 150 ಕೋಟಿ ರೂ ಆಮಿಷ: ಸಿಬಿಐ ತನಿಖೆಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿರುವುದು ಕಾಂಗ್ರೆಸ್ಸಿಗರು ಆಕ್ರಮಿಸಿರುವ ವಕ್ಫ್ ಆಸ್ತಿಗಳ ಕುರಿತೇ ಹೊರತು ಬಿಜೆಪಿಯವರನ್ನು ಕುರಿತು ಅಲ್ಲ, ಕಾಂಗ್ರೆಸಿಗರ ವಿರುದ್ಧ ಇರುವ ಆರೋಪಕ್ಕೆ ಯಾರಾದರೂ ₹150 ಕೋಟಿ ರೂಪಾಯಿಗಳ ಆಮಿಷವನ್ನು ಒಡ್ಡಲು ಸಾಧ್ಯವೇ ? ಎಂಬ ಕನಿಷ್ಠ ವಿವೇಕವೂ ನಿಮಗಿಲ್ಲವಲ್ಲ?

ತಳಬುಡ ವಿಲ್ಲದ ಆರೋಪವನ್ನು ನೀವು ಹಾಗೂ ನಿಮ್ಮ ಸಂಪುಟದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಭ್ರಮಿಸುತ್ತಿರುವ ಪರಿ ನಿಮ್ಮ ಬಾಲಿಶತನವನ್ನು ತೋರಿಸುತ್ತಿದೆಯೇ ಹೊರತು ನಿಮ್ಮ ರಾಜಕೀಯ ಜಾಣ್ಮೆಯನ್ನಲ್ಲ, ನಿಮಗೆ ಧೈರ್ಯವಿದ್ದರೆ, ಉಚ್ಛ ನ್ಯಾಯಾಲಯದಲ್ಲಿರುವ ನಿಮ್ಮ ವಿರುದ್ಧದ ಮುಡಾ ಹಗರಣವನ್ನು ಸಿಬಿಐ ತನಿಖೆ ಕೋರಿದ ರಿಟ್ ಅರ್ಜಿಗೆ ಆಕ್ಷೇಪವೆತ್ತದೇ ಸಿಬಿಐ ತನಿಖೆ ನಡೆಯಲು ಅವಕಾಶಮಾಡಿಕೊಡಿ ನೋಡೋಣ? ಎಂದು ಸವಾಲು ಹಾಕಿದ್ದಾರೆ.

ನಿಮ್ಮ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರು ಹಾಗೂ ಹಿಂದೂ ಧಾರ್ಮಿಕ ಸ್ಥಳಗಳನ್ನು ಕಬಳಿಸಲು ಹೊರಟಿರುವ ಪ್ರಕರಣ, ಪಂಚಮಸಾಲಿ ಮೀಸಲಾತಿಯ ಹೋರಾಟಗಾರರ ಮೇಲೆ ಅಮಾನುಷವಾಗಿ ನಡೆದ ಪೊಲೀಸ್ ದಬ್ಬಾಳಿಕೆಯ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಘಟನೆಯನ್ನು, ಬಾಣಂತಿಯರ ಸರಣಿ ಸಾವಿನ ಪ್ರಕರಣ, ದಿನವೂ ಸರಣಿ ರೂಪದಲ್ಲಿ ಹೊರಬರುತ್ತಿರುವ ಮುಡಾದ ಹಗರಣ ಗಂಭೀರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಚರ್ಚೆಯನ್ನು ದಿಕ್ಕುತಪ್ಪಿಸಲು ಹಾಗೂ ರಾಜ್ಯದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕ್ಷುಲ್ಲಕ ಕಪೋಲಕಲ್ಪಿತ ವಿಷಯವನ್ನು ರಂಧ್ರ ಪೂರಿತ ದೋಣಿಯಂತೆ ತೇಲಿಬಿಟ್ಟಿರುವುದು ನಿಮ್ಮ ರಾಜಕೀಯ ಪ್ರಬುದ್ಧತೆಗೆ ತುಕ್ಕು ಹಿಡಿದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com