ವಕ್ಫ್ ವಿವಾದ: ಯತ್ನಾಳ್ ಟೀಮ್ ಗೌಪ್ಯ ಸಭೆ, 2ನೇ ಸುತ್ತಿನ ಹೋರಾಟಕ್ಕೆ ಪ್ಲ್ಯಾನ್..!
ಬೆಂಗಳೂರು: ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬೆಳಕು ಚೆಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿದ್ಧತೆ ನಡೆಸುತ್ತಿರುವ ಸೂಚನೆಗಳು ಸಿಗುತ್ತಿದ್ದಂತೆಯೇ ಪಕ್ಷದಲ್ಲಿರುವ ಬಂಡಾಯ ನಾಯಕರ ಮತ್ತೊಂದು ಬಣ ಪಕ್ಫ್ ವಿವಾದ ಕುರಿತ 2ನೇ ಸುತ್ತಿನ ಹೋರಾಟ ಆರಂಭಿಸಲು ಮುಂದಾಗಿದೆ.
ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಯತ್ನಾಳ್ ಬಣದ ಮುಖಂಡರು ಸುದೀರ್ಘ ಸಮಾಲೋಚನೆ ನಡೆಸಿದರು.
ಯತ್ನಾಳ್ ಸೇರಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಿ.ಪಿ.ಹರೀಶ್, ಮುಖಂಡ ಎನ್.ಆರ್.ಸಂತೋಷ್ ಅವರು ಉಪಸ್ಥಿತರಿದ್ದರು.
ಯತ್ನಾಳ್ ಬಣದ ನಾಯಕರು ಜನವರಿ ತಿಂಗಳಿನಲ್ಲಿ ನವದೆಹಲಿಗೆ ಭೇಟಿ ನೀಡಲಿದ್ದು, ಈ ಸಂದರ್ಭದ್ಲಿ ವಕ್ಫ್ ಮಸೂದೆ ಕುರಿತು ಸಂಗ್ರಹಿಸಿದ ಮಾಹಿತಿಗಳನ್ನು ಜಗದಾಂಬಿಕ ಪಾಲ್ ಅವರಿಗೆ ಸಲ್ಲಿಸಲಿದ್ದಾರೆ. ಇದೇ ವೇಳೆ ಬಿಜೆಪಿ ಹೈಕಮಾಂಡ್ ನ್ನೂ ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ಇದು ಭಿನ್ನಮತೀಯರ ಸಭೆಯಲ್ಲ. ವಿವಾದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವಕ್ಫ್ ಆಸ್ತಿ ವಿವಾದದ ಹೋರಾಟ ಮುಂದುವರೆಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ಸುತ್ತಿನ ಹೋರಾಟ ನಡೆಸಿದ್ದೇವೆ. ಅದರ ಎಲ್ಲ ವಿವರಗಳನ್ನು ದೆಹಲಿಗೆ ತೆರಳಿ ವಕ್ಫ್ ಆಸ್ತಿ ಕುರಿತ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ನೀಡಿದ್ದೇವೆ. ಅವರು ಇನ್ನಷ್ಟು ಮಾಹಿತಿ ಕೊಡಲು ನಮಗೆ ಸೂಚಿಸಿದ್ದಾರೆ. ಈ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಲು ಬರುವವರನ್ನು ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ಅವರೂ ಸ್ವತಂತ್ರವಾಗಿ ಹೋರಾಟ ನಡೆಸಬಹುದು. ಹೊಸ ವರ್ಷದ ಜನವರಿಯಲ್ಲಿ ನಾವು ಪ್ರವಾಸ ಮಾಡುತ್ತೇವೆ. ಬೆಳಗಾವಿ ಅಥವಾ ದಾವಣಗೆರೆಯಲ್ಲಿ ವಕ್ಫ್ ಭಾದಿತರ ಸಮಾವೇಶ ನಡೆಸುವ ಉದ್ದೇಶವಿದೆ ಎಂದು ಹೇಳಿದರು.
ಏತನ್ಮಧ್ಯೆ, ವಿಜಯೇಂದ್ರ ಅವರ ಬೆಂಬಲಿಗರು 'ಬಂಡಾಯ' ನಾಯಕರಿಗೆ ತಿರುಗೇಟು ನೀಡಸು ಪ್ರತ್ಯೇಕ ಸಭೆಯನ್ನು ನಡೆಸಲು ನಿರ್ಧರಿಸಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜತೆ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ವಾಗ್ದಾಳಿ ನಡೆಸಿರುವ ಸಂದರ್ಭ ಬಿಜೆಪಿಯ ವಿವಿಧ ಬಣಗಳನ್ನು ಕಟ್ಟಿಹಾಕಲು ಕಾರಣವಾದಾಗ, ಬೇರೆ ಬೇರೆ ಬಣಗಳ ಪ್ರತ್ಯೇಕ ಸಭೆಗಳು ಪಕ್ಷದೊಳಗಿನ ಪೈಪೋಟಿಯನ್ನು ಸೂಚಿಸುತ್ತದೆ’ ಎಂದು ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಎಂಎಲ್ಸಿ ಸಿ.ಟಿ.ರವಿ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ವಿಚಾರದಲ್ಲಿ ಕೇಳಿಬಂದ ಪ್ರತಿಕ್ರಿಯೆಗಳಿಂದ ಬಿಜೆಪಿ ನಾಯಕರು ಒಗ್ಗೂಡಿದ್ದಾರೆಂಬ ಸಂದೇಶ ರವಾನೆಯಾಗಿತ್ತು. ಆದರೀಗ ಮತ್ತೆ ಪ್ರತ್ಯೇಕ ಸಭೆ ಹಾಗೂ ಪ್ರತ್ಯೇಕ ಹೋರಾಟ ನಡೆಸುತ್ತಿರುವುದು ಪಕ್ಷದಲ್ಲಿನ ಆಂತರಿಕ ಪೈಪೋಟಿಯನ್ನು ಸೂಚಿಸುತ್ತಿದೆ ಎಂದು ಮುಖಂಡರೊಬ್ಬರು ಟೀಕಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ