ಸಾರ್ವಜನಿಕರಿಗೆ ಪಾಸ್ ನೀಡುವಾಗ ಎಚ್ಚರಿಕೆ ವಹಿಸಿ: ಹೊಸ ಶಾಸಕರಿಗೆ ಬಸವರಾಜ ಹೊರಟ್ಟಿ ಸಲಹೆ

ಸದನದ ಕಲಾಪಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರಿಗೆ ಪಾಸ್‌ಗಳನ್ನು ನೀಡುವಾಗ ಜಾಗರೂಕರಾಗಿರಿ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಹಿರಿಯ ಶಾಸಕ ಬಸವರಾಜ ಹೊರಟ್ಟಿ ಅವರು ನೂತನ ಶಾಸಕರಿಗೆ ಮನವಿ ಮಾಡಿದ್ದಾರೆ. 
ಯುಟಿ ಖಾದರ್, ಬಸವರಾಜ ಹೊರಟ್ಟಿ ಮತ್ತಿತರರು
ಯುಟಿ ಖಾದರ್, ಬಸವರಾಜ ಹೊರಟ್ಟಿ ಮತ್ತಿತರರು

ಬೆಂಗಳೂರು: ಸದನದ ಕಲಾಪಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರಿಗೆ ಪಾಸ್‌ಗಳನ್ನು ನೀಡುವಾಗ ಜಾಗರೂಕರಾಗಿರಿ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಹಿರಿಯ ಶಾಸಕ ಬಸವರಾಜ ಹೊರಟ್ಟಿ ಅವರು ನೂತನ ಶಾಸಕರಿಗೆ ಮನವಿ ಮಾಡಿದ್ದಾರೆ. 

 ಶುಕ್ರವಾರ ಬಜೆಟ್ ಅಧಿವೇಶನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೊದಲ ಬಾರಿಯ ಶಾಸಕರನ್ನುದ್ದೇಶಿಸಿ ಉದ್ದೇಶಿಸಿ ಮಾತನಾಡಿದ ಹೊರಟ್ಟಿ ತಮ್ಮ ಅನುಭವವನ್ನು ಮೆಲುಕು ಹಾಕಿದರು. ಕಳೆದ 44 ವರ್ಷಗಳಲ್ಲಿ ಶಾಸಕರಾಗಿ 18 ಮುಖ್ಯಮಂತ್ರಿಗಳು, 12 ಸಚಿವ ಸಂಪುಟಗಳು ಮತ್ತು 2,800 ಕ್ಕೂ ಹೆಚ್ಚು ಶಾಸಕರನ್ನು ಕಂಡಿರುವುದಾಗಿ ತಿಳಿಸಿದರು. 

ಘಟನೆಯೊಂದನ್ನು ನೆನಪಿಸಿಕೊಂಡ ಹೊರಟ್ಟಿ, ಮಾಜಿ ಶಾಸಕ ದಿವಂಗತ ಕಲಕೇರಿ ಅವರು ತಮ್ಮ ತಂದೆಯ ಆಪ್ತರಾಗಿದ್ದರು. "ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ, ಮತ್ತು ಕೆಲವು ಸ್ನೇಹಿತರೊಂದಿಗೆ, ಸದನದ ಕಲಾಪವನ್ನು ವೀಕ್ಷಿಸಲು ಸಾರ್ವಜನಿಕರ ಗ್ಯಾಲರಿ ಪ್ರವೇಶಿಸಲು ಪಾಸ್ ಕೇಳಲು ಹೋಗಿದ್ದೆ. ನನ್ನ ತಂದೆ ಹಾಗೂ ನನ್ನ ಬಗೆ ತಿಳಿದಿದ್ದರೂ ನನ್ನನ್ನು ಯಾರು ಎಂದು ಅವರು ಕೇಳಿದರು. ಪಾಸ್ ನೀಡಲು ಗುರುತಿನ ಪುರಾವೆ ಬೇಕು, ಏನಾದರೂ ಸಂಭವಿಸಿದರೆ ಅವರೇ  ಹೊಣೆಗಾರರಾಗುತ್ತಾರೆ ಎಂದು ಅವರು ಹೇಳಿದರು. ಅಂತಿಮವಾಗಿ ಅವರು ಪಾಸ್ ಅನ್ನು ನೀಡಲಿಲ್ಲ. ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಭದ್ರತಾ ಲೋಪವನ್ನು ನೆನಪಿಸಿಕೊಂಡ ಅವರು, ಪಾಸ್ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದು ಶಾಸಕರಿಗೆ ಸೂಚಿಸಿದರು.

ಅಧಿವೇಶನದ ವೇಳೆ ಶಾಸಕರು ಶಾಸಕರ ಭವನದಲ್ಲಿ ಉಳಿದುಕೊಳ್ಳುತ್ತಾರೆ ಮತ್ತು ಶಾಲಾ ಮಕ್ಕಳಂತೆ ಅಜೆಂಡಾ ಪ್ರತಿಗಳನ್ನು ಹಿಡಿದುಕೊಂಡು ವಿಧಾನಸೌಧಕ್ಕೆ ತೆರಳುತ್ತಾರೆ. ನೂತನ ಶಾಸಕರು ಮಾತನಾಡುವ ಮುನ್ನ ಸದನದ ನಿಯಮಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಬಜೆಟ್ ಅಧಿವೇಶನದಲ್ಲಿ ಇನ್ನೂ ಹಲವು ವಿಷಯಗಳ ಕುರಿತು ಚರ್ಚೆಯಾಗುತ್ತದೆ. ಬಜೆಟ್ ಅನ್ನು ರಸ್ತೆ ಮತ್ತು ಸೇತುವೆಗಳಿಗೆ ಸೀಮಿತಗೊಳಿಸಬಾರದು, ಬಜೆಟ್ ಅನ್ನು ಹೇಗೆ ಮಾಡಲಾಗುತ್ತದೆ, ನಿಮ್ಮ ಕ್ಷೇತ್ರಕ್ಕೆ ಎಷ್ಟು ಹಣ ಹೋಗುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಹಣ ಪಡೆಯಬೇಕು ಎಂಬುದನ್ನು ನೀವು ತಿಳಿದಿರಬೇಕು ಎಂದು ಅವರು ಹೇಳಿದರು.

ಮಾಧ್ಯಮ ಕಾರ್ಯಾಗಾರವನ್ನೂ ಆಯೋಜಿಸಲಾಗಿತ್ತು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿರಿಯ ಪತ್ರಕರ್ತ ರವಿ ಹೆಗಡೆ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಶಾಸಕ ಸಿ.ಎಸ್.ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com