
ಮೈಸೂರು/ಹಾಸನ: ಲೂಟಿಯಲ್ಲಿ ತೊಡಗಿದ್ದಕ್ಕೆ ರಾಜ್ಯದ ಜನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ, ವಿರೋಧ ಪಕ್ಷವನ್ನಾಗಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ದೇವಸ್ಥಾನಗಳ ಹಣವನ್ನು ಲೂಟಿ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರು ಲೂಟಿ ಮಾಡುತ್ತಿದ್ದರೆಂದೇ ರಾಜ್ಯದ ಜನ ಅವರನ್ನು ತಿರಸ್ಕಾರ ಮಾಡಿರುವುದು ಎಂದು ತಿರುಗೇಟು ಕೊಟ್ಟರು.
ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದಾಯ ಹೆಚ್ಚಿರುವ ದೇವಸ್ಥಾನಗಳಿಂದ ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಸುವುದನ್ನು ವಿರೋಧಿಸುತ್ತಾರೆ. ಬೇರೆ ಯಾವ ಧರ್ಮದ ದೇವಾಲಯಗಳಿಗೂ ಇದನ್ನು ಬಳಸುವುದಿಲ್ಲ. ಅವರಿಗೆ ಪರಿಷತ್ತಿನಲ್ಲಿ ಬಹುಮತ ಇದೆ ಎಂದು ಹೀಗೆ ಮಾಡಿದ್ದಾರೆ ಎಂದು ಹೇಳಿದರು.
ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಸರ್ಕಾರ ಎಂದು ಜಾಹೀರಾತು ನೀಡಿದ್ದಾರೆ ಎಂಬ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಜನಪ್ರತಿನಿಧಿ ನ್ಯಾಯಾಲಯ ಆದೇಶ ಮಾಡಿರುವ ಬಗ್ಗೆ, ನಮ್ಮ ವಕೀಲರನ್ನು ನೇಮಿಸುತ್ತೇವೆ. ಅವರು ಸರಿಯಾದ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ ಅಥವಾ ಪ್ರತಿಭಟನಾ ಜಾಹೀರಾತು ನೀಡಿದರೆ ಅದು ತಪ್ಪಲ್ಲ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿಗೆ ತೊಂದರೆ ಇಲ್ಲ. ನಮ್ಮ ಸರ್ಕಾರಕ್ಕೆ ಮಾತ್ರ ಯಾಕೆ ತೊಂದರೆ? ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿ, ಕೇರಳದವರು ಯಾಕೆ ದೆಹಲಿಗೆ ಬಂದು ಪ್ರತಿಭಟಿಸಿದರು? ಅದಕ್ಕೆ ತಮಿಳುನಾಡಿನವರು ಏಕೆ ಬೆಂಬಲ ನೀಡಿದರು? ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಎಲ್ಲಾ ರಾಜ್ಯಗಳಿಗೂ ಅನ್ಯಾಯವಾಗಿದೆ. ದಕ್ಷಿಣ ರಾಜ್ಯಗಳಿಗೆ ಜಾಸ್ತಿ ಅನ್ಯಾಯವಾಗಿದೆ. ಉತ್ತರದ ರಾಜ್ಯಗಳಿಗೆ ಕೊಡಬೇಡಿ ಎನ್ನುವುದಿಲ್ಲ. ನಮಗೆ ಅನ್ಯಾಯ ಮಾಡಬೇಡಿ. ಕೇಂದ್ರದ ಪಾಲಿನಲ್ಲಿಯೇ ಕೊಡಲಿ. ನಮ್ಮ ಪಾಲಿನಿಂದ ಯಾಕೆ ಕಿತ್ತುಕೊಡುತ್ತಾರೆ? 100 ರೂ. ತೆರಿಗೆ ಸಂಗ್ರಹ ಮಾಡಿ ಕೊಟ್ಟರೆ 13 ರೂ. ಮಾತ್ರ ಕೊಡುತ್ತಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.
ಸಂಸದ ಅನಂತ ಕುಮಾರ್ ಹೆಗಡೆಯವರು ಇಂಥ ದರಿದ್ರ ಸರ್ಕಾರ ಎಂದೂ ನೋಡಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ರಾಜ್ಯವನ್ನು ಲೂಟಿ ಮಾಡಿ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರಾದರೂ ವೇತನ ನೀಡಿಲ್ಲ ಎಂದು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಅನಂತ್ ಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನ ಬದಲಾಯಿಸಲು ಎಂದವರು. ಅವರು ಲೋಕಸಭಾ ಸದಸ್ಯರಾಗಲು ಲಾಯಕ್ಕೇ? ಅಂಥವರು ಹೇಳಿಕೆ ನೀಡಿದರೆ ಯಾವ ಕಿಮ್ಮತ್ತು ಇರುತ್ತದೆ ಎಂದರು.
ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು. ಸಂವಿಧಾನ ಕಿತ್ತೊಗೆಯಿರಿ ಎನ್ನುವವರನ್ನೇ ಕಿತ್ತೊಗೆಯಿರಿ ಎಂದು ಹೇಳಿದ್ದರು. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಲೋಕಸಭಾ ಸದಸ್ಯರಾಗಲು ಲಾಯಕ್ಕೇ ಎಂದು ಪ್ರಶ್ನಿಸಿದರು.
Advertisement