ಬೆಂಗಳೂರು: ‘ಪಾಕಿಸ್ತಾನ ಪರ’ ಘೋಷಣೆ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಅನ್ನು ಪ್ರತಿಪಕ್ಷ ಬಿಜೆಪಿ ತರಾಟೆಗೆ ತೆಗೆದುಕೊಂಡಿದ್ದು, ಈ ನಡುವಲ್ಲೇ ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್ ಅವರು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಅವರು, ಬಿಜೆಪಿಯ ಕೊಳಕು ಘಟಕ ವಿವಾದ ಹುಟ್ಟುಹಾಕಿದೆ. ಇವೆಲ್ಲವೂ ಸುಳ್ಳು ಹಾಗೂ ಕಾಲ್ಪನಿಕ ಎಂದು ಹೇಳಿದ್ದಾರೆ.
ನಾನು ಸ್ಥಳದಲ್ಲಿದ್ದಾಗ ಯಾರೊಬ್ಬರಿಗೂ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿಸಿರಲಿಲ್ಲ. ವಿಜಯದ ಸಂಭ್ರಮದ ಬಳಿಕ ನಾನು ಹೆಚ್ಚಿನ ಸಂಖ್ಯೆಯ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾದೆ. ಸುಮಾರು 100 ಜನರು ಮತ್ತು 15 ಕ್ಕೂ ಹೆಚ್ಚು ಪತ್ರಕರ್ತರು ನನಗೆ ಒಂದೊಂದಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಯಾರೊಬ್ಬರಿಗೂ ಪಾಕಿಸ್ತಾನದ ಪರ ಘೋಷಣೆಗಳು ಕೇಳಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಪಿತೂರಿ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ತಿಳಿಸಿದ್ದಾರೆ.
ನನ್ನ ಬೆಂಬಲಿಗರು ‘ನಾಸಿರ್ ಸಬ್ ಜಿಂದಾಬಾದ್’ ಮತ್ತು ‘ನಾಸಿರ್ ಸರ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದಾರೆಯೇ ಹೊರತು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿಲ್ಲ. ಟಿವಿಗಳಲ್ಲಿ ಬರುತ್ತಿರುವ ವಿಡಿಯೋಗಳೇ ಇದನ್ನು ಹೇಳುತ್ತಿವೆ. ಇದೊಂದು ಪ್ರೇರಿತ ಪಕ್ಷದ ಪಿತೂರಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಇದೇ ರೀತಿ ಮಾಡಿದೆ. ಇಂತಹ ಆರೋಪಗಳು ಹೊಸತನವನ್ನು ಕಳೆದುಕೊಂಡಿವೆ. ಇದೀಗ ಆ ಪಕ್ಷ ಹೊಸ ಮಾರ್ಗಗಳತ್ತ ಚಿಂತನೆ ನಡೆಸಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.
ಇದೇ ವೇಳೆ ನಿಮ್ಮನ್ನೇ ಏಕೆ ಗುರಿ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಸ್ಪಷ್ಟವಾಗಿದೆ. ಉತ್ತರ ನಿಮಗೂ ತಿಳಿದಿದೆ ಎಂದರು.
ಬಿಜೆಪಿಯ ಕೊಳಕು ಘಟಕ ಪಿತೂರು ಮಾಡಿದೆ. ಅವರಿಗೆ 2 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವರ ಇಬ್ಬರು ಶಾಸಕರು ತಮ್ಮ ಅಭ್ಯರ್ಥಿಗೆ ಮತ ಹಾಕದ ಕಾರಣ ಅವರು ಹತಾಶರಾಗಿದ್ದಾರೆ. ಹತಾಶೆಯಿಂದಲೇ ಈ ರೀತಿ ಮಾಡುತ್ತಿದ್ದಾರೆಂದು ಹೇಳಿದರು.
ಬಿಜೆಪಿ ನಾಯಕರು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ತನಿಖೆ ಕೈಗೊಳ್ಳಳಾಗಿದ್ದು, ಎಫ್ಎಸ್ಎಲ್ ವರದಿಗಾಗಿ ಕಾಯಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸದನದಲ್ಲಿ ಹೇಳಿದ್ದಾರೆಂದರು.
Advertisement