ಒಂದಲ್ಲ 3 ಡಿಸಿಎಂ ಸ್ಥಾನಕ್ಕೆ ನಾಯಕರ ಪಟ್ಟು: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್'ಗೆ ಹೊಸ ತಲೆನೋವು ಶುರು!

ಲೋಕಸಭೆ ಚುನಾವಣೆ ಸಿದ್ಧತೆ ನಡುವಲ್ಲೇ ರಾಜ್ಯಕ್ಕೆ ಹೆಚ್ಚಿನ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಸಂಪುಟ ಸಚಿವರು ಸೇರಿದಂತೆ ಹಲವು ನಾಯಕರು ಪಟ್ಟು ಹಿಡಿದಿದ್ದು ಇದರಿಂದಾಗಿ ಕಾಂಗ್ರೆಸ್‌ಗೆ ಹೊಸ ತಲೆನೋವು ಶುರುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಸಿದ್ಧತೆ ನಡುವಲ್ಲೇ ರಾಜ್ಯಕ್ಕೆ ಹೆಚ್ಚಿನ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಸಂಪುಟ ಸಚಿವರು ಸೇರಿದಂತೆ ಹಲವು ನಾಯಕರು ಪಟ್ಟು ಹಿಡಿದಿದ್ದು ಇದರಿಂದಾಗಿ ಕಾಂಗ್ರೆಸ್‌ಗೆ ಹೊಸ ತಲೆನೋವು ಶುರುವಾಗಿದೆ.

ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದೆ ಸಿದ್ದರಾಮಯ್ಯ ಸಂಪುಟದ ಸಚಿವರು ಸೇರಿದಂತೆ ಹಲವು ಪಕ್ಷದ ಹಲವು ನಾಯಕರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇಟ್ಟಿದ್ದಾರೆ.

ಹೆಚ್ಚುವರಿ ಡಿಸಿಎಂ ಹುದ್ದೆಯ ಅಗತ್ಯ ಕುರಿತು ಹೈಕಮಾಂಡ್'ಗೆ ತಿಳಿಸುವಂತೆ ಸುರ್ಜೇವಾಲಾ ಅವರ ಬಳಿ ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲಾ ಅವರು ಸೋಮವಾರ ಕೆಲವು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದರಂತೆ ಮಂಗಳವಾರ ಕೂಡ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಂದು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಚಿವರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ಇತರರ ಜತೆ ಸಭೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.

ಈ ನಡುವೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿಯವರು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಪಕ್ಷದ ಕೆಲ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಕೂಡ ಹೆಚ್ಚುವರಿ ಡಿಸಿಎಂ ನೇಮಕ ಮಾಡುವ ಕುರಿತು ಚರ್ಚೆಗಳು ನಡೆದಿದ್ದವು. ಸೋಮವಾರ ಸಭೆ ನಡೆಸದ್ದು, ಬುಧವಾರ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದಲ್ಲದೆ, ಜನವರಿ 11 ರಂದು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಕರೆಯಲಾಗಿದೆ. ನಾವು ನಮ್ಮ ನಿಲುವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಮುಂದಿಟ್ಟಿದ್ದೇವೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡುವುದರಿಂದ ಹಲವಾರು ಸಮುದಾಯಗಳು ಪಕ್ಷಕ್ಕೆ ಬೆಂಬಲ ನೀಡುತ್ತವೆ. ಸಮುದಾಯಗಳನ್ನು ಸಂಪುಟದಲ್ಲಿ ಪ್ರತಿನಿಧಿಸುವ ಅವಶ್ಯಕತೆಯೂ ಇದೆ. ಇದನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಿದ್ದೇವೆ. ಈ ಕ್ರಮವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಸಹಾಯ ಮಾಡಲಿದೆ ಎಂದು ತಿಳಿಸಿದರು.

ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಮಾತನಾಡಿ, ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಸುರ್ಜೇವಾಲಾ ಅವರು ಎಲ್ಲಾ ಸಚಿವರ ಸಭೆಗೆ ಕರೆದಿದ್ದರು. ಈ ವೇಳೆ ಕೆಲ ಸಚಿವರು ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಗೆ ಲಾಭವಾಗಲಿದೆ ಎಂದೂ ಹೇಳಿದ್ದಾರೆ. ಈ ವಿಚಾರವಾಗಿಯೇ ನಾವು ಸುರ್ಜೇವಾಲಾ ಅವರು ಸಭೆ ನಡೆಸಲಿಲ್ಲ. ಚುನಾವಣೆ ಸಿದ್ಧತಾ ಚರ್ಚೆ ವೇಳೆ ಈ ವಿಚಾರವೂ ಪ್ರಸ್ತಾಪಗೊಂಡಿು. ಸಭೆ ವೇಳೆ ಸಲಹೆಗಳನ್ನು ನೀಡಬಹುದು. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್'ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com