ಬಿಜೆಪಿ ಜೊತೆ ಜೆಡಿಎಸ್ ಬಹುತೇಕ ವಿಲೀನ: ಡಿಸಿಎಂ ಡಿ.ಕೆ ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಅನ್ನು ಬಿಜೆಪಿಯೊಂದಿಗೆ ಬಹುತೇಕ ವಿಲೀನಗೊಳಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದರು.
ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಅನ್ನು ಬಿಜೆಪಿಯೊಂದಿಗೆ ಬಹುತೇಕ ವಿಲೀನಗೊಳಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದರು.

ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಕೇಸರಿ ಶಾಲು ಅಥವಾ ಇನ್ನಾವುದೇ ಶಾಲನ್ನು ಹಾಕಿಕೊಳ್ಳಬಹುದು, ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ, ಮಂಡ್ಯದಲ್ಲಿ ಬಿಜೆಪಿ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅಮಾಯಕ ಗ್ರಾಮಸ್ಥರನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಭಾಗದ ಎಲ್ಲಾ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವ ರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲಾ? ಈಗ ಅವರು ಹೊಸ ಪ್ರಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾನೂನುಬಾಹಿರವಾಗಿ ಕೇಸರಿ ಧ್ವಜ ಹಾರಿಸಿರುವ ಕುರಿತು ಮಾತನಾಡಿ, ಪಂಚಾಯ್ತಿಯವರು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಮಾತ್ರ ಹಾರಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಪ್ರತೀಯೊಬ್ಬರೂ ರಾಷ್ಟ್ರ ಮತ್ತು ರಾಜ್ಯ ಧ್ವಜಗಳನ್ನು ಗೌರವಿಸಬೇಕು. ಜನರು ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಹನುಮ ಧ್ವಜ ವಿತರಣೆಗೆ ಯಾರೂ ಆಕ್ಷೇಪಿಸುತ್ತಿಲ್ಲ. “ಬಿಜೆಪಿ ಕೆಲವು ಸಮಯದ ಹಿಂದೆ ತ್ರಿವರ್ಣ ಧ್ವಜಕ್ಕಾಗಿ ಪ್ರಚಾರ ಮಾಡಿತ್ತು. ಈಗ ತ್ರಿವರ್ಣ ಧ್ವಜವನ್ನು ಮರೆತಿದೆಯೇ? ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಏಕೆ ತರಲು ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

ಶಾಂತಿ ಕದಡಲು ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸುತ್ತಿವೆ. ಮಂಡ್ಯದಲ್ಲಿ ಕೇಸರಿ ಬಾವುಟದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ತಮ್ಮ ಮನೆಗಳ ಮೇಲೆ ಧ್ವಜಗಳನ್ನು ಹಾರಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com