ಮುಡಾ ಹಗರಣ ಬಳಿಕ ಸಿಎಂ ಸಿದ್ದರಾಮಯ್ಯ ಏಕಾಂಗಿ: ಹೆಚ್.ವಿಶ್ವನಾಥ್

ಮುಡಾ ಹಗರಣದಲ್ಲಿ ನಾವು ಯಾರು 50:50 ಅನುಪಾತದಲ್ಲಿ ನಿವೇಶನ ಪಡೆದಿಲ್ಲ. ಕಾನೂನು ಪ್ರಕಾರ ನಿವೇಶನ ಪಡೆದಿದ್ದೇವೆ. ರಾಜ್ಯ ಸರ್ಕಾರ ಮುಡಾ ಹಾಗೂ ವಾಲ್ಮೀಕಿ ಹಗರಣದಿಂದ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿಗಳು ಏಕಾಂಗಿಯಾಗಿದ್ದು, ಹೆದರಿ ಏನೇನೋ ಮಾತನಾಡುತ್ತಿದ್ದಾರೆ.
ಎಹೆಚ್ ವಿಶ್ವನಾಥ್
ಎಹೆಚ್ ವಿಶ್ವನಾಥ್
Updated on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಯಭೀತರಾಗಿದ್ದು, ಏಕಾಂಗಿಯಾಗಿ ಹೋಗಿದ್ದಾರೆಂದು ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್ ಅವರು ಮಂಗಳವಾರ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಡಾ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಮಂಡಳಿ ಲಿಮಿಟೆಡ್ ಹಗರಣದಡಿಯಲ್ಲಿ ಸಿಲುಕಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಏಕಾಂಗಿಯಾಗಿ, ಭಯಭೀತರಾಗಿದ್ದಾರೆ, ಹೀಗಾಗಿ ರಕ್ಷಣಾತ್ಮಕವಾಗಿ ಕಾಂಗ್ರೆಸ್ ನಾಯಕರ ಹೆಸರನ್ನು ಬಿಟ್ಟು ಬೇರೆಯವರ ಸಿಲುಕಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಮುಡಾ ಹಗರಣದಲ್ಲಿ ನಾವು ಯಾರು 50:50 ಅನುಪಾತದಲ್ಲಿ ನಿವೇಶನ ಪಡೆದಿಲ್ಲ. ಕಾನೂನು ಪ್ರಕಾರ ನಿವೇಶನ ಪಡೆದಿದ್ದೇವೆ. ರಾಜ್ಯ ಸರ್ಕಾರ ಮುಡಾ ಹಾಗೂ ವಾಲ್ಮೀಕಿ ಹಗರಣದಿಂದ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿಗಳು ಏಕಾಂಗಿಯಾಗಿದ್ದು, ಹೆದರಿ ಏನೇನೋ ಮಾತನಾಡುತ್ತಿದ್ದಾರೆ. ದೇವೇಗೌಡ ಕುಟುಂಬ, ಯಡಿಯೂರಪ್ಪ ಅವರ ಕುಟುಂಬ ಎಲ್ಲರೂ ನಿವೇಶನ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಯಾರು 50:50 ಅನುಪಾತದಲ್ಲಿ ನಿವೇಶನ ಪಡೆದಿಲ್ಲ. ಮುಡಾ ಎಕ್ಕುಟ್ಟು ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ‌. ಇದನ್ನು ಸರಿಪಡಿಸುವ ಬದಲು ನೀವು ಮಾಡಿಲ್ವಾ, ಅವರು ಮಾಡಿಲ್ವಾ ಎಂದು ಹೇಳುತ್ತಿದ್ದಾರೆ. ಆಡಳಿತದಲ್ಲಿ ಇರುವ ಸರ್ಕಾರ ಭಂಡತನ ಮಾಡಬಾರದು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಯಾರನ್ನೋ ರಕ್ಷಣೆ ಮಾಡಲು ಯಾರದೋ ಹೆಸರನ್ನು ಹೇಳುತ್ತಿದ್ದಾರೆ. ಕೇವಲ ಜೆಡಿಎಸ್ ಹಾಗೂ ನಮ್ಮ ಬಗ್ಗೆ ಮಾತನಾಡುತ್ತೀರಿ. ಕಾಂಗ್ರೆಸ್​ನಲ್ಲಿ 50:50 ಸೈಟ್ ಪಡೆದವರ ಬಗ್ಗೆ ಯಾಕೆ ಹೇಳುತ್ತಿಲ್ಲ. ಹಿನಕಲ್ ಪಾಪಣ್ಣ ಮನೆಯವರಿಗೆ ಎಷ್ಟು ಸೈಟ್ ಹೋಗಿದೆ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಹೆಚ್ ವಿಶ್ವನಾಥ್
ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ: ದಿನಾಂಕ ಘೋಷಿಸಿದ ಬಿವೈ ವಿಜಯೇಂದ್ರ

ಮುಡಾದ 50:50 ಅನುಪಾತದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈಗಲೂ ಮುಡಾದಲ್ಲಿ ಅಕ್ರಮ ಮುಂದುವರೆದಿದೆ. ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್ ವರ್ಗಾವಣೆ ಆದ ಬಳಿಕವೂ ವಿಧಾನಸೌದದಲ್ಲಿ ಕುಳಿತು ಈಗಲೂ ಅಕ್ರಮ ಮುಂದುವರಿಸುತ್ತಿದ್ದಾರೆ. ಆತನನ್ನು ಜೈಲಿಗೆ ಹಾಕಿದ್ದರೇ ಈ ರೀತಿ ಆಗುತ್ತಿರಲಿಲ್ಲ. ತಪ್ಪಿತಸ್ಥರಿಗೆ ಸರ್ಕಾರದ ಕೃಪಾಕಟಾಕ್ಷ ಇದೆ. ಇದೇ ಕಾರಣದಿಂದ ತಪ್ಪಿತಸ್ಥರು ಈಗಲೂ ಅಕ್ರಮ ಮುಂದುವರೆಸಿದ್ದಾರೆ. ನಾನು ಮತ್ತು ಶಾಸಕ ಶ್ರೀವತ್ಸ ಹೊರತುಪಡಿಸಿದರೇ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮುಡಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 5 ಸಾವಿರ ಕೋಟಿ ಹಗರಣವಾಗಿದೆ. ಇದಕ್ಕೆ ರಿಯಲ್ ಎಸ್ಟೇಟ್ ಗಿರಾಕಿ, ಸಚಿವ ಬೈರತಿ ಸುರೇಶ್ ಕಾರಣ. ಮೊದಲು ಆತನನ್ನು ಒದ್ದು ಒಳಗೆ ಹಾಕಿ. ಸಿದ್ದರಾಮಯ್ಯನವರೇ ನೀವು ಮುಡಾದಲ್ಲಿ ನಿಮ್ಮ ಹೆಂಡತಿ ಹೆಸರಿನಲ್ಲಿ ಪಡೆದಿರುವ ನಿವೇಶನಗಳನ್ನು ವಾಪಸ್ ನೀಡಿ ತನಿಖೆಗೆ ಸಹಕರಿಸಿ. ವಾಲ್ಮೀಕಿ ನಿಗಮ‌ ಹಗರಣದಲ್ಲಿ ಸಚಿವ ನಾಗೇಂದ್ರ ತಲೆದಂಡವಾಯಿತು. ಇದಕ್ಕೆ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಕೂಡ ಹೊಣೆಗಾರರು. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರಲಿಲ್ಲ ಎಂದರು.

ಇದೇ ವೇಳೆ ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿಯೂ ಘೋಷಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com