
ಬಳ್ಳಾರಿ: ನೂತನ ಸಂಸದರಾಗಿ ಆಯ್ಕೆಯಾಗಿರುವ ಇ ತುಕಾರಾಂ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಹೋಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಆರೋಪದ ಮೇಲೆ ಸಿದ್ದರಾಮಯ್ಯ ಸಂಪುಟದಿಂದ ಬಿ ನಾಗೇಂದ್ರ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ತುಕಾರಾಮ್ ಅವರ ಅನುಯಾಯಿಗಳು ಮತ್ತು ಬೆಂಬಲಿಗರು ಕೆಲವು ದಿನಗಳ ಹಿಂದೆ ನಾಗೇಂದ್ರ ಅವರ ರಾಜೀನಾಮೆಯ ಸೂಚನೆಯನ್ನು ಪಡೆದ ನಂತರ, ಸಭೆ ನಡೆಸಿ ತಮ್ಮ ನಾಯಕನನ್ನು ಸಂಪುಟಕ್ಕೆ ಸೇರ್ಪಡೆ ಮಾಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ತುಕಾರಾಂ ಅವರು ಬಳ್ಳಾರಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ತುಕಾರಾಂ ಅವರು ಇದೀಗ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟದ ಬೇಡಿಕೆಯನ್ನು ಈಡೇರಿಸಿದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ರಿ ಸೌಪರ್ಣಿಕಾಗೆ ಬಳ್ಳಾರಿ ಲೋಕಸಭೆ ಟಿಕೆಟ್ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತುಕಾರಾಂ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಆದರೆ ನಾಗೇಂದ್ರ ಅವರ ಮನವೊಲಿಸಿ, ಶ್ರೀರಾಮುಲು ವಿರುದ್ಧ ಗೆಲ್ಲಿಸುವುದಾಗಿ ಭರವಸೆ ನೀಡಿದರು. ತುಕಾರಾಂ ಅವರು ನಾಲ್ಕು ಬಾರಿ ಶಾಸಕರಾಗಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ (2018-19) ಸಚಿವರಾಗಿದ್ದರು.
ಸದ್ಯಕ್ಕೆ ಅಂತಹ ಯಾವುದೇ ರೀತಿಯ ಪ್ಲಾನ್ ನನ್ನ ಬಳಿಯಿಲ್ಲ ಎಂದು ತುಕಾರಾಂ TNIE ಗೆ ತಿಳಿಸಿದ್ದಾರೆ. ನಾನು ಸಂಸದನಾಗಿ ಮುಂದುವರಿಯಲು ಬಯಸುತ್ತೇನೆ. ನಾನು ವದಂತಿಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ತುಕಾರಾಂ ಹಿರಿಯ ಶಾಸಕರಾಗಿದ್ದಾರೆ. ಸಚಿವರಾಗಿ, ಶಾಸಕರಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಅದರಲ್ಲೂ ಸಂಡೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದೇವೆ. ತುಕಾರಾಂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ತಿಳಿಸಿದ್ದಾರೆ.
Advertisement