ಮೋದಿ ಕಾರ್ಯಕ್ರಮಕ್ಕೆ ಚಕ್ಕರ್, ಮಠಗಳಿಗೆ ಹಾಜರ್: ಯಾರಿಗೂ ಬಗ್ಗದ ಈಶ್ವರಪ್ಪ ಪ್ರಚಾರ ಆರಂಭ!

ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದಾರೆ. ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮೋದಿ ಕಾರ್ಯಕ್ರಮಕ್ಕೆ ಚಕ್ಕರ್, ಮಠಗಳಿಗೆ ಹಾಜರ್: ಯಾರಿಗೂ ಬಗ್ಗದ ಈಶ್ವರಪ್ಪ ಪ್ರಚಾರ ಆರಂಭ!
Updated on

ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದಾರೆ. ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮೋದಿ ಅವರ ಪರಮಭಕ್ತ ಈಶ್ವರಪ್ಪ ಅವರು, ಸ್ವತಃ ಮೋದಿ ಅವರ ಕಾರ್ಯಕ್ರಮದಿಂದಲೇ ದೂರ ಉಳಿದಿದ್ದಾರೆ. ಶತಾಯಗತಾಯ ಈಶ್ವರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ಕೇಂದ್ರ ನಾಯಕರು, ರಾಜ್ಯ ನಾಯಕರು ಮಾಡಿದ ಸಂಧಾನ ಸಭೆ ವಿಫಲವಾಗಿದೆ.

ಮೋದಿ ಶಿವಮೊಗ್ಗಕ್ಕೆ ಆಗಮಿಸಿದ್ದರೂ ಈಶ್ವರಪ್ಪ ಅವರು ಮಠಗಳಿಗೆ ಭೇಟಿ ನೀಡಿ ಚುನಾವಣೆಗೆ ಸ್ವಾಮೀಜಿಗಳ ಬೆಂಬಲ ಕೋರಿದ್ದಾರೆ.

ಬಿಳಕಿ, ಗೋಣಿಬೀಡು, ತೊಗರ್ಸಿ, ಹಿರೇಮಾಗಡಿ, ಜಡೆಮುಡಿ, ಶಾಂತಾಪುರ, ಹಾರ್ನಹಳ್ಳಿ, ಚೋಕಿಮಠ, ಮೂಲೆಗದ್ದೆ, ಹೊಸನಗರ ತಾಲೂಕಿನ ಹೊಂಬುಜದ ಜೈನ ಮಠ, ಶಿಕಾರಿಪುರ ತಾಲೂಕಿನ ಸಾಲೂರು ಮಠ ಸೇರಿದಂತೆ ವಿವಿಧ ಮಠಗಳಿಗೆ ಒಂದೇ ದಿನದಲ್ಲಿ ಈಶ್ವರಪ್ಪ ಭೇಟಿ ನೀಡಿದ್ದಾರೆ.

ಇದಲ್ಲದೆ ವೀರಶೈವ ಲಿಂಗಾಯತ ಮಠಗಳು ಮತ್ತು ಜೈನ ಮಠಗಳ ಮಠಾಧೀಶರಿಂದ ಬೆಂಬಲ ಕೋರಿದರು. ಈ ಮೂಲಕ ಯಾವ ಹೈಕಮಾಂಡ್ ಬಂದು ತನ್ನ ಮನವೊಲಿಸಲು ಪ್ರಯತ್ನಿಸಿದರು ತಾನು ಬಗ್ಗುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಪಕ್ಷಕ್ಕೆ ತಲುಪಿಸಿದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾದಂತಾಗಿದೆ.

ಸೋಮವಾರ ಶಿವಮೊಗ್ಗ ನಗರದ ಅಲ್ಲಮಪ್ರಭು ಪಾರ್ಕ್‌ನಲ್ಲಿ ಪ್ರಧಾನಿ ಮೋದಿ ಸಮಾವೇಶ ನಡೆಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಕಿತ್ತುಹಾಕಲು ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಎಲ್‌ಇಡಿ ಪರದೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಈಶ್ವರಪ್ಪ ಇರುವ ಫೋಟೋವನ್ನು ತೋರಿಸಲಾಯಿತು.

ಮೋದಿ ಕಾರ್ಯಕ್ರಮಕ್ಕೆ ಚಕ್ಕರ್, ಮಠಗಳಿಗೆ ಹಾಜರ್: ಯಾರಿಗೂ ಬಗ್ಗದ ಈಶ್ವರಪ್ಪ ಪ್ರಚಾರ ಆರಂಭ!
ಬಿಜೆಪಿ ವರಿಷ್ಠರ ಸಂಧಾನ ವಿಫಲ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳದ ಈಶ್ವರಪ್ಪ, ಸ್ವತಂತ್ರ ಸ್ಪರ್ಧೆ ಖಚಿತ!

ನರೇಂದ್ರ ಮೋದಿ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಬಿಜೆಪಿ ರಾಷ್ಟ್ರೀಯ ನಾಯಕ, ಮಾಜಿ ಸಚಿವ ಸಿ.ಟಿ.ರವಿ, ಶಿವಮೊಗ್ಗ ನಾಮನಿರ್ದೇಶಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮಠಗಳಿಗೆ ಭೇಟಿ ನೀಡಿದ ಬಳಿಕ ಹೇಳಿಕೆ ನೀಡಿದ ಈಶ್ವರಪ್ಪ ಅವರು, ಹಿಂದುತ್ವ ಗೆಲ್ಲುವಂತೆ ಮಾಡಲು ಮತ್ತು ರಕ್ಷಿಸಲು ಮಠಾಧೀಶರು ನನ್ನನ್ನು ಆಶೀರ್ವದಿಸಿದ್ದಾರೆ. ಲಿಂಗಾಯತ, ಬ್ರಾಹ್ಮಣ ಮತ್ತು ಹಿಂದುಳಿದ ವರ್ಗಗಳ ಮಠಗಳು ನನಗೆ ಬೆಂಬಲ ನೀಡಿವೆ. ಹಾವೇರಿಯಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡದೆ ಮೋಸ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಯಡಿಯೂರಪ್ಪ ವಿರೋಧಿ ಅಲೆ ಇದ್ದು, ಇದು ಮಠಗಳ ಭೇಟಿ ವೇಳೆ ನನ್ನ ಗಮನಕ್ಕೆ ಬಂದಿದೆ. ಶಿವಮೊಗ್ಗದಿಂದ ಗೆದ್ದ ನಂತರ ಅಯೋಧ್ಯೆ ಭೇಟಿ ನೀಡಿ ಶ್ರೀರಾಮಚಂದ್ರನ ಆಶೀರ್ವಾದ ಪಡೆಯುತ್ತೇನೆ. ಮೋದಿ ಬಿವೈ ರಾಘವೇಂದ್ರ ಪರ ಮತ ಯಾಚಿಸುತ್ತಿದ್ದಾರೆ. ನಾನು ಆ ರ್ಯಾಲಿಯಲ್ಲ ಭಾಗವಹಿಸಿ ಏನು ಮಾಡಬೇಕು? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com