ಇಂಡಿಯಾ ಕೂಟ ಗೆದ್ರೆ ಮೇಕೆದಾಟು ಯೋಜನೆ ಬಂದ್‌: DMK ಪ್ರಣಾಳಿಕೆ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ BJP ಕಿಡಿ

ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದಕಕೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ
ಬಿಜೆಪಿ

ಬೆಂಗಳೂರು: ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದಕಕೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವಿಪಕ್ಷ ನಾಯಕ ಆರ್​.ಅಶೋಕ್​ ಮಾತನಾಡಿ, ರಾಜ್ಯದಲ್ಲಿ ದುರ್ಬಲ ಸರ್ಕಾರ ಇದೆ, ದುರ್ಬಲ ಸಿಎಂ ಇದ್ದಾರೆ. ಹೀಗಾಗಿಯೇ ಡಿಎಂಕೆ ಮೇಕೆದಾಟು ನಿರ್ಮಿಸಲು ಬಿಡಲ್ಲ ಎಂದು ಹೇಳಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಹೋರಾಡಿದ್ದರು. ಇದಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಪಾದಯಾತ್ರೆ ಮಾಡಿದ್ದರು. ಆಪ್ತ ಸ್ನೇಹಿತ​ ಎಂ.ಕೆ.ಸ್ಟಾಲಿನ್​, ಡಿಕೆ ಶಿವಕುಮಾರ್​ ನದಿಯಲ್ಲಿ ಸ್ನಾನ ಮಾಡಿದ್ದರು. ಆದರೆ, ಬೆಂಗಳೂರಿನಲ್ಲಿ ಮುಖ ತೊಳೆಯಲು ನೀರಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ
ಮೇಕೆದಾಟು ಕಟ್ಟಲೆಂದೇ ನೀರಾವರಿ ಸಚಿವನಾಗಿದ್ದೇನೆ, ಕಟ್ಟುವುದು ಗ್ಯಾರಂಟಿ: ಡಿಕೆ.ಶಿವಕುಮಾರ್

ನಮ್ಮ ಹಣ ನಮ್ಮ ಹಕ್ಕು ಎಂದು ದೆಹಲಿಗೆ ಹೋಗಿದ್ದರಲ್ಲಾ ಹಾಗೇ ತಮಿಳುನಾಡಿಗೆ ಹೋಗಿ ಕಾಫಿ ಕುಡಿದು ಡಿಎಂಕೆ ವಿರುದ್ಧ ಹೋರಾಡಿ. ಇಲ್ಲವಾದಲ್ಲಿ ಜನ ಹಾದಿಬೀದಿಯಲ್ಲಿ ನಿಮ್ಮ ಮಾನ ತೆಗೆಯುತ್ತಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಪ್ರಣಾಳಿಕೆಯಲ್ಲಿ ನಿಲುವು ತಿಳಿಸಬೇಕು. ಇಲ್ಲವಾದಲ್ಲಿ ನಿಮ್ಮ ಪಾದಯಾತ್ರೆ ಗಿಮಿಕ್​​ ಎಂದು ತಿಳಿಯಬೇಕಾಗುತ್ತದೆ. ನೂಕಾಟ ತಳ್ಳಾಟಕ್ಕೆ ಬಿರಿಯಾನಿಗೆ ಸೀಮಿತ ಎಂದು ತಿಳಿಯಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಮಾಡಿರುವ ಅವರು, ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ತಮ್ಮ I.N.D.I. ಮಿತ್ರಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆಯಲ್ಲ ಡಿಸಿಎಂ ಡಿಕೆ.ಶಿವಕುಮಾರ್ ಅವರೇ, ಈಗ 'ನಮ್ಮ ನೀರು, ನಮ್ಮ ಹಕ್ಕು' ಎಂದು ತಮ್ಮ ಶಾಸಕರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೀರಾ ಅಥವಾ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ರಾಜಿ ಮಾಡಿಕೊಳ್ಳುತ್ತೀರಾ? ಬೆಂಗಳೂರಿಗೆ ನೀರು ತರುತ್ತೇವೆ ಎಂದು ಮೇಕೆದಾಟು ಪಾದಯಾತ್ರೆ ಮಾಡಿ ಕನ್ನಡಿಗರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೇರಿದ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಈಗ ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣ: ಡಿಸಿಎಂ ಡಿಕೆ ಶಿವಕುಮಾರ್

ಸಾಮಾಜಿಕ ಜಾಲತಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವುದನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ದುರ್ಬಲ ಎಂಬುದನ್ನು ಪರಿಪೂರ್ಣವಾಗಿ ಮನಗಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಸ್ಟ್ರಾಂಗ್‌ ಎಂಬುದನ್ನು ಸ್ವಬಣ್ಣನೆ ಮಾಡಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ತಮಿಳುನಾಡು ಮುಖ್ಯಮಂತ್ರಿಗಳು ಅವರೆಷ್ಟು ವೀಕ್‌ ಎಂಬುದನ್ನು ಮನಗಂಡಿದ್ದು, ಮೈತ್ರಿಕೂಟ ಗೆದ್ದರೆ ಮೇಕೆದಾಟಿ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೂಡಿ ಮೇಕೆದಾಟು ಯೋಜನೆಗೆ ನಡೆಸಿದ ಪಾದಯಾತ್ರೆಗೆ ಕಾಂಗ್ರೆಸ್‌ ವರಿಷ್ಠರು ಕನಿಷ್ಠ ಕಿಮ್ಮತ್ತು ನೀಡಿಲ್ಲ ಎಂಬುದು ಡಿಎಂಕೆ ಪ್ರಣಾಳಿಕೆ ಸಾಕ್ಷಿ ನುಡಿದಿದೆ. ಅವರ ಬೂಟಾಟಿಕೆಯ ಮೇಕೆದಾಟು ಹೋರಾಟ ‘ಮೊಸಳೆ ಕಣ್ಣೀರಿನದು’ ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ. ಗೋಕಾಕ್ ಚಳವಳಿ, ಕಾವೇರಿ ಚಳವಳಿಗಳನ್ನು ಈ ಹಿಂದೆಯೂ ಹತ್ತಿಕ್ಕಲು ಯತ್ನಿಸಿರುವ ಕುಖ್ಯಾತಿ ಹೊಂದಿರುವ ಕಾಂಗ್ರೆಸ್ ಕನ್ನಡನಾಡು, ನುಡಿ, ಜನರ ಹಿತಾಸಕ್ತಿಯ ಪರ ಎಂದೂ ನಿಂತಿಲ್ಲ, ನಿಲ್ಲವುದೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com