
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸುವ ಮೂಲಕ ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ ಅಂಗಡಿ ಅವರ ಕುಟುಂಬಕ್ಕೆ ಬಿಜೆಪಿ ಅನ್ಯಾಯ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಹರಕೆಯ ಕುರಿ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸೋಮವಾರ ಹೇಳಿದರು.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿ ಅವರು ಬೆಳಗಾವಿಯಿಂದ ನಾಲ್ಕು ಬಾರಿ ಗೆದ್ದಿದ್ದರು. ಅವರ ನಿಧನದ ನಂತರ ಅವರ ಪತ್ನಿ ಮಂಗಳಾ ಅವರು ಉಪಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಬಿಜೆಪಿ ಮಂಗಳಾ ಅವರನ್ನು ಮತ್ತೆ ಕಣಕ್ಕಿಳಿಸಬೇಕಿತ್ತು. ಆದರೆ ಪಕ್ಷ ಟಿಕೆಟ್ ನಿರಾಕರಿಸುವ ಮೂಲಕ ಸುರೇ್ ಅಂಗಡಿ ಅವರ ಕುಟುಂಬಕ್ಕೆ ಅವಮಾನ ಮಾಡಿದೆ ಎಂದು ಕಿಡಿಕಾರಿದರು.
ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನಿರಾಕರಿಸುವ ಸುಳಿವು ಸಿಕ್ಕ ಬೆನ್ನಲ್ಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯಲ್ಲಿ ಹಲವು ಆಕಾಂಕ್ಷಿಗಳಿದ್ದರು. ಕೆಲವರು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ ಆದರೆ, ಅವರನ್ನು ಪರಿಗಣಿಸದೆ, ಬದಿಗೊತ್ತಲಾಗಿದೆ.
ಬಿಜೆಪಿಯಲ್ಲಿ ಮೂರು ಬಲಿ ಕಾ ಬಕ್ರಾ ತಯಾರು ಮಾಡಲಾಗಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್, ತುಮಕೂರಲ್ಲಿ ವಿ.ಸೋಮಣ್ಣ, ಕೊಪ್ಪಳದಲ್ಲಿ ಡಾ.ಬಸವರಾಜ್ ಕ್ಯಾವಟರ್ ಬಲಿ ಕಾ ಬಕ್ರಾ ಆಗುತ್ತಾರೆ. ಬಿಜೆಪಿ ಪಕ್ಷ ಯಾವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ ಮಾಡುತ್ತದೆ ಗೊತಿಲ್ಲ. ನಾನು 25 ವರ್ಷ ಬಿಜೆಪಿ ಪಕ್ಷದಲ್ಲಿ ಇದ್ದ ಕಾರಣ ನನಗೂ ಸದ್ಯದ ಆ ವ್ಯವಸ್ಥೆ ನೋಡಿ ಮರುಕು ಹುಟ್ಟಿದೆ. ಮನಸಿಗೆ ಒಂದು ರೀತಿಯ ಘಾಸಿ ಆಗುತ್ತದೆ. ಆದರೆ, ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದ ಈ ಪಕ್ಷವನ್ನು ಬೆಳೆಸುತ್ತೇನೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement