ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿತ್ತು ಚಿಕ್ಕಮಗಳೂರು: ಮೊದಲ ಬಾರಿಗೆ ಮಹಿಳಾ ಸಂಸದೆಗೆ ಮಣೆ ಹಾಕುತ್ತಾ 'ನಮ್ಮ ಬೆಂಗಳೂರು'?

ಐಟಿ ನಗರದ ಮತದಾರರು ಪ್ರಥಮ ಬಾರಿಗೆ ಮಹಿಳೆಯನ್ನು ಲೋಕಸಭೆಗೆ ಆಯ್ಕೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಶೋಭಾ ಕರಂದ್ಲಾಜೆ ಮತ್ತು ಸೌಮ್ಯಾ ರೆಡ್ಡಿ
ಶೋಭಾ ಕರಂದ್ಲಾಜೆ ಮತ್ತು ಸೌಮ್ಯಾ ರೆಡ್ಡಿ

ಬೆಂಗಳೂರು: ಕಳೆದ 73 ವರ್ಷಗಳಲ್ಲಿ 17 ಲೋಕಸಭಾ ಚುನಾವಣೆಗಳು ನಡೆದಿದ್ದರೂ ಬೆಂಗಳೂರಿನಲ್ಲಿ ಇದುವರೆಗೂ ಒಬ್ಬ ಮಹಿಳಾ ಸಂಸದರೂ ಆಯ್ಕೆಯಾಗಿಲ್ಲ.

ಈಗ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು "ಪ್ರಬಲ" ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಐಟಿ ನಗರದ ಮತದಾರರು ಪ್ರಥಮ ಬಾರಿಗೆ ಮಹಿಳೆಯನ್ನು ಲೋಕಸಭೆಗೆ ಆಯ್ಕೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

2009 ರವರೆಗೆ ಬೆಂಗಳೂರಿನಲ್ಲಿ ಕೇವಲ ಎರಡು ಲೋಕಸಭಾ ಕ್ಷೇತ್ರಗಳಿದ್ದವು. ನಂತರ ಮೂರು ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ಬಿಜೆಪಿ ಬೆಂಗಳೂರು ಉತ್ತರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸಿದ್ದು, ಬೆಂಗಳೂರು ದಕ್ಷಿಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದೆ.

ಶೋಭಾ ಕರಂದ್ಲಾಜೆ ಮತ್ತು ಸೌಮ್ಯಾ ರೆಡ್ಡಿ
ಜಯನಗರ ಶಾಸಕರ ಆಯ್ಕೆ ಅಸಿಂಧು ಕೋರಿ ಸೌಮ್ಯಾ ರೆಡ್ಡಿ ಅರ್ಜಿ: ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್

ತತ್ವಜ್ಞಾನಿ ಬಸವಣ್ಣ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ನಾಯಕತ್ವದ ಅಗತ್ಯವನ್ನು ಒತ್ತಿ ಹೇಳಿದ್ದರು. ಇಂದಿರಾ ಗಾಂಧಿ ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ. ಇದೆಲ್ಲವನ್ನೂ ಪರಿಗಣಿಸಿದರೆ, ನಮ್ಮ ದೇಶದ ಉನ್ನತ ಹುದ್ದೆಗಳನ್ನು ಅನೇಕ ಮಹಿಳಾ ನಾಯಕಿಯರು ಅಲಂಕರಿಸಬೇಕಿತ್ತು. ಆದರೆ, ಎಲ್ಲಾ ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯದ ಸರಿಯಾದ ಪಾಲು ಇನ್ನೂ ಸಿಕ್ಕಿಲ್ಲ ಎಂದು ಮಾಜಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.

ತಮ್ಮ ಸ್ವಂತ ಅನುಭವವನ್ನು ನೆನಪಿಸಿಕೊಂಡ ಗಂಗಾಂಬಿಕೆ, ಕಳೆದ ವರ್ಷ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೆ. ನಾನು ಬೆಂಗಳೂರು ಮೇಯರ್ ಆಗಿದ್ದೆ ಮತ್ತು ಪಕ್ಷದಲ್ಲಿ ಮಾತ್ರವಲ್ಲದೆ ವಿವಿಧ ಸಂಘಗಳು ಮತ್ತು ಸಂಸ್ಥೆಗಳಲ್ಲಿಯೂ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಮಹಿಳೆ ಎಂಬ ಕಾರಣಕ್ಕೆ ನನಗೆ ಚಿಕ್ಕಪೇಟೆ ಟಿಕೆಟ್ ನೀಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ದುರದೃಷ್ಟವಶಾತ್, ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಯಾವುದೇ ರಾಜಕೀಯ ಪಕ್ಷಗಳು ಉತ್ಸುಕವಾಗಿಲ್ಲ. ವಿವಿಧ ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಸರಿಯಾಗಿ ಜಾರಿಗೊಳಿಸಬೇಕು ಎಂದರು. ಲೋಕಸಭೆಯಲ್ಲಿ ಬೆಂಗಳೂರನ್ನು ಮಹಿಳೆಯರು ಪ್ರತಿನಿಧಿಸಬೇಕು. ಬೆಂಗಳೂರು ವಿಶಿಷ್ಟ ಸಮಸ್ಯೆಗಳನ್ನು ಹೊಂದಿದೆ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಭಾವಿತರಾಗದೆ ಅವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ ಎಂದು ಮಾಜಿ ಮೇಯರ್ ಹೇಳಿದರು.

ಶೋಭಾ ಕರಂದ್ಲಾಜೆ ಮತ್ತು ಸೌಮ್ಯಾ ರೆಡ್ಡಿ
ದ್ವೇಷ ಭಾಷಣ: ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ

ಕರ್ನಾಟಕವು ಉಪಚುನಾವಣೆ ಸೇರಿದಂತೆ ಕಳೆದ 17 ಲೋಕಸಭಾ ಚುನಾವಣೆಗಳಲ್ಲಿ 15 ಮಹಿಳಾ ಸಂಸದರನ್ನು ಆಯ್ಕೆ ಮಾಡಿದೆ. ಇಂದಿರಾ ಗಾಂಧಿಯವರು 1978ರ ಲೋಕಸಭಾ ಉಪಚುನಾವಣೆಯಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದು ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತು.

ಬಿಜೆಪಿ ಈ ಬಾರಿ ಬೆಂಗಳೂರು ಉತ್ತರಕ್ಕೆ ಶೋಭಾ ಹಾಗೂ ದಾವಣಗೆರೆಗೆ ಗಾಯತ್ರಿ ಸಿದ್ದೇಶ್ವರ್ ಅವರನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಕೂಡ ಕೆಲವು ಮಹಿಳಾ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಬೆಂಗಳೂರು ಮತದಾರ ಮಹಿಳಾ ಸಂಸದೆ ಪರ ನಿಲ್ಲುತ್ತಾನಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು.

ರಾಜ್ಯದಿಂದ ಆಯ್ಕೆಯಾಗಿದ್ದ ಮಹಿಳಾ ಸಂಸದರು

  • ಸರೋಜಿನಿ ಮಹಿಷಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ (1962-1980) ನಾಲ್ಕು ಬಾರಿ ಆಯ್ಕೆಯಾದ ಮೊದಲ ಮಹಿಳಾ ಸಂಸದೆ.

  • 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ವಿರುದ್ಧ ಇಂದಿರಾಗಾಂಧಿ ಗೆಲುವು ಸಾಧಿಸಿದ್ದರು.

  • ತೇಜಸ್ವಿನಿ ಗೌಡ 2004ರ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರನ್ನು ಸೋಲಿಸಿದ್ದರು.

  • 1999ರಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯ ಸುಷ್ಮಾ ಸ್ವರಾಜ್ ವಿರುದ್ಧ ಬಳ್ಳಾರಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

  • 2019 ರಲ್ಲಿ ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com