Samyukta Patil
ಸಂಯುಕ್ತಾ ಪಾಟೀಲ್

ಬಾಗಲಕೋಟೆ ಜನತೆ ಬದಲಾವಣೆ ಬಯಸಿದೆ; ಅಭಿವೃದ್ಧಿ ನನ್ನ ಗುರಿ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್

Published on

ಬಾಗಲಕೋಟೆಯಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಆದ್ದರಿಂದ ಕಣದಲ್ಲಿನ‌ ಕಲಿಗಳು ಬಿಡುವಿಲ್ಲದೇ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌ ಮಧ್ಯೆ ನೇರಾನೇರ ಹಣಾಹಣಿ ನಡೆದಿದೆ.

ಪಿಸಿ ಗದ್ದಿಗೌಡರ ಕೇಸರಿ ಪಡೆ ಕಟ್ಟಿಕೊಂಡು ಶ್ರೀರಾಮ, ಹಿಂದು, ಮತ್ತೊಮ್ಮೆ ಮೋದಿ ಎಂದು ಜನರ ಬಳಿ ಮತ ಕೇಳುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಐದು ಗ್ಯಾರಂಟಿ, ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳು, ನಾಲ್ಕು ಬಾರಿ ಸಂಸದರಾದರೂ ಗದ್ದಿಗೌಡರ ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಮೋದಿ ಅವರು ಕೊಟ್ಟ ಭರವಸೆ ಈಡೇರಿಸಿಲ್ಲ. ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ಗ್ಯಾರಂಟಿಗಳನ್ನ ಎಲ್ಲ ಕಡೆ ಉದಾಹರಣೆ ನೀಡುತ್ತಾ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಮತಭೇಟೆ ಶುರು ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಮೂಲತಃ ವಿಜಯಪುರ ಜಿಲ್ಲೆಯವರಾದ ಇವರು, ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಶಾಸಕ ಹಾಗೂ ಸದ್ಯದ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್​ ಅವರ ಪುತ್ರಿ ಸಂಯುಕ್ತಾ ಪಾಟೀಲ್​ ರಾಜಕೀಯ ಕುಟುಂಬದಿಂದ ಬಂದವರು. ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಾಗೂ ಪಿಕೆಪಿಎಸ್ ಬ್ಯಾಂಕಿನಲ್ಲಿ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಚುನಾವಣೆ ಕುರಿತು ಸಂಯುಕ್ತಾ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದು, ಸಂದರ್ಶನದ ಆಯ್ದ ಭಾಗಗಳು ಇಂತಿವೆ...

Q

ಬಾಗಲಕೋಟೆಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಯೋಜಿತ ಆಲೋಚನೆಯೇ ಅಥವಾ ಪರಿಸ್ಥಿತಿ ನಿಮ್ಮನ್ನು ಸ್ಪರ್ಧಿಸುವಂತೆ ಮಾಡಿದೆಯೇ?

A

ಯೋಜಿತ ಆಲೋಚನೆಯಾಗಿರಲಿಲ್ಲ. ಕೆಲ ವಿಷಯಗಳಿಂದಾಗಿ ಸ್ಪರ್ಧೆಗಿಳಿಯರು ನಿರ್ಧರಿಸಿದ್ದೆ. ಕಾಂಗ್ರೆಸ್ ನಾಯಕರಿಂದ ಅಪಾರ ಬೆಂಬಲ ಸಿಕ್ಕಿದ್ದು ಕೂಡ ಸ್ಪರ್ಧೆಗಿಳಿಯುವಂತೆ ಮಾಡಿತು.

Q

ನೀವು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ, ಅದೂ ಕೂಡ 4 ಬಾರಿ ಸಂಸದರಾಗಿದ್ದ ಬಿಜೆಪಿಯ ಪಿಸಿ ಗದ್ದಿಗೌಡರ್ ವಿರುದ್ಧ, ಭಯವಿದೆಯೇ...?

A

ನನಗೆ ಯಾವುದೇ ಭಯ ಅಥವಾ ಹಿಂಜರಿಕೆ ಇಲ್ಲ. ನಾನು ಸ್ಪರ್ಧಿಸಲು ನಿರ್ಧರಿಸಿದಾಗ, ನನ್ನ ದೃಷ್ಟಿ ಮತ್ತು ಅಜೆಂಡಾ ತುಂಬಾ ಸ್ಪಷ್ಟವಾಗಿತ್ತು. ಬಾಗಲಕೋಟೆಯ ಜನರಿಗಾಗಿ ಕೆಲಸ ಮಾಡಬೇಕೆಂದಿದ್ದೇನೆ.

Q

ಟಿಕೆಟ್ ನಿರಾಕರಿಸಿದ ನಂತರ ವೀಣಾ ಕಾಶಪ್ಪನವರ್ ಆರಂಭದಲ್ಲಿ ಬಂಡಾಯವೆದಿದ್ದರು. ಈಗ ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿದ್ದಾರಾ?

A

ಅವರು ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ನಾನು ನಾಮಪತ್ರ ಸಲ್ಲಿಸುವಾಗ ನನ್ನ ಜೊತೆಗಿದ್ದರು.

Q

ನೀವು ವಿಜಯಪುರದವರಾಗಿರುವುದರಿಂದ ಆರಂಭದಲ್ಲಿ ನಿಮ್ಮನ್ನು ಹೊರಗಿನವರೆಂದು ಬಿಂಬಿಸಲಾಯಿತು...?

A

ನಿಜ ಹೇಳಬೇಕೆಂದರೆ ಬಿಜೆಪಿ ಕಾರ್ಯಕರ್ತರೂ ಈಗ ಹಾಗೆ ಹೇಳುತ್ತಿಲ್ಲ. ಜನರು ನನ್ನನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ನನಗೆ ಜನರಿಂದ ಅಪಾರ ಬೆಂಬಲ ಸಿಗುತ್ತಿದೆ. ಅವರು ನನ್ನನ್ನು ತಮ್ಮ ಮಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದ್ದರಿಂದ ನಾನು ಹೊರಗಿನವಳಲ್ಲ. ಜತೆಗೆ ನನ್ನ ತಂದೆ (ಸಚಿವ ಶಿವಾನಂದ ಪಾಟೀಲ) ಜಿಲ್ಲೆಯ ನಾಯಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ.

Q

ನಿಮ್ಮ ತಂದೆಯ ಪ್ರಭಾವ ನಿಮ್ಮ ಪರವಾಗಿ ಕೆಲಸ ಮಾಡಿದೆ ಎಂದು ನಂಬಲಾಗಿದೆ...?

A

ಹೌದು, ಅವರ ಪ್ರಭಾವ ಹಾಗೂ ಇಲ್ಲಿನ ಜನರೊಂದಿಗಿನ ನಂಟು ನನಗೆ ಟಿಕೆಟ್ ಸಿಗುವುದಲ್ಲದೆ ಮತ ಕ್ರೋಢೀಕರಣಕ್ಕೂ ಸಹಕಾರಿಯಾಗಿದೆ. ನನ್ನ ತಂದೆ ಬಾಗಲಕೋಟೆ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿರುವುದರಿಂದ ಇಲ್ಲಿನ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

Q

ಒಬ್ಬ ಮತದಾರ ನಿಮಗೆ ಯಾಕೆ ಮತ ಹಾಕಬೇಕು ಎಂದು ಕೇಳಿದರೆ ನಿಮ್ಮ ಉತ್ತರವೇನು?

A

ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರ ಅವಧಿಯಲ್ಲಿ ಬಾಗಲಕೋಟೆ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಬಾಗಲಕೋಟೆ-ಕುಡಚಿ ರೈಲು ಮಾರ್ಗದಂತಹ ಮಹತ್ವದ ಯೋಜನೆಗಳು ಮೂರು ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಿವೆ. ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆಗಳು ಬಂದಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇಷ್ಟೆಲ್ಲಾ ನಡೆದಿದೆ. ಅಭಿವೃದ್ಧಿಯಲ್ಲಿ ಜಿಲ್ಲೆಗೆ ಅರ್ಹ ಪಾಲನ್ನು ನೀಡಲು ಬಯಸುತ್ತಿದ್ದೇನೆ.

Q

ನೀವು ಬಾಗಲಕೋಟೆಯ ವಿಷಯಕ್ಕೆ ಸೀಮಿತವಾಗಿದ್ದೀರಾ ಅಥವಾ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತೀರಾ?

A

ಕೇಂದ್ರ ಸರ್ಕಾರ ರಚನೆಗೆ ಚುನಾವಣೆ ನಡೆಯುತ್ತಿರುವುದರಿಂದ ರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಉದ್ಯೋಗ ಸೃಷ್ಟಿಸುವುದು, ರೈತರ ಆದಾಯ ದ್ವಿಗುಣಗೊಳಿಸುವುದು, ಹಣದುಬ್ಬರ ನಿಯಂತ್ರಣ ಇತ್ಯಾದಿ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ಹೇಗೆ ವಿಫಲವಾಗಿದೆ ಎಂಬುದನ್ನು ಜನರಿಗೆ ತಿಳಿಸುತ್ತಿದ್ದೇನೆ. ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನೂ ಜನರಿಗೆ ತಿಳಿಸುತ್ತಿದ್ದೇನೆ. ಕೇಂದ್ರದಲ್ಲಿ ಸರ್ಕಾರ ಮತ್ತು ಬಾಗಲಕೋಟೆಯಲ್ಲಿ ಸಂಸದರನ್ನು ಬದಲಾಯಿಸಲು ಜನರು ನಿರ್ಧರಿಸಿದ್ದಾರೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com