ಪರಿಷತ್​ ಚುನಾವಣೆ: 3 ಸ್ಥಾನಕ್ಕೆ 40ಕ್ಕೂ ಹೆಚ್ಚು ಆಕಾಂಕ್ಷಿಗಳು, BJP ಕೋರ್ ಕಮಿಟಿ ನಿರ್ಣಯವೇನು?

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ವಿಜಯೇಂದ್ರ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ ನಡೆಯಿತು. ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಕೋರ್ ಕಮಿಟಿ ಸದಸ್ಯರ ಪಾಲ್ಗೊಂಡಿದ್ದರು.
ರಾಜ್ಯ ಬಿಜೆಪಿ ನಾಯಕರು (ಸಂಗ್ರಹ ಚಿತ್ರ)
ರಾಜ್ಯ ಬಿಜೆಪಿ ನಾಯಕರು (ಸಂಗ್ರಹ ಚಿತ್ರ)
Updated on

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಸಿಗುವ 3 ಸ್ಥಾನಗಳಿಗೆ 40ಕ್ಕೂ ಹೆಚ್ಚು ಹೆಸರುಗಳು ಚರ್ಚೆಗೆ ಬಂದಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿ ಆಯ್ಕೆ ತೀರ್ಮಾನವನ್ನು ಅವರಿಗೇ ಬಿಡಲು ಬುಧವಾರ ನಡೆದ ಪಕ್ಷದ ಪ್ರಮುಖ ನಾಯಕರ ಸಮಿತಿ ಸಭೆ ನಿರ್ಧರಿಸಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ವಿಜಯೇಂದ್ರ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ ನಡೆಯಿತು. ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಕೋರ್ ಕಮಿಟಿ ಸದಸ್ಯರ ಪಾಲ್ಗೊಂಡಿದ್ದರು.

ವಿಧಾನ ಪರಿಷತ್​ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನ ಸಿಕ್ಕಿದ್ದು, ಆ ಮೂರು ಸ್ಥಾನಕ್ಕೆ ಪಟ್ಟಿ ಸಿದ್ದಪಡಿಸುವ ಕುರಿತು ಆಕಾಂಕ್ಷಿಗಳ ಪಟ್ಟಿಯೊಂದಿಗೆ ಚರ್ಚಿಸಲಾಯಿತು. ಆಕಾಂಕ್ಷಿಗಳ ಪಟ್ಟಿಯಲ್ಲಿ ಇಲ್ಲದ ಹೆಸರುಗಳ ಬಗ್ಗೆಯೂ ಪ್ರಸ್ತಾಪಿಸಿ ಚರ್ಚೆ ನಡೆಸಲಾಗಿದೆ.

ಬಿಜೆಪಿಯ ಮೂರು ಸ್ಥಾನಗಳಿಗೆ 40ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು, ಎಲ್ಲಾ ಹೆಸರುಗಳ ಕುರಿತು ಚರ್ಚಿಸಲಾಯಿತು. ಹಾಲಿ ಸದಸ್ಯ ರವಿಕುಮಾರ್ ಮುಂದುವರಿಕೆ ಮತ್ತು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಅವಕಾಶ ನೀಡುವ ಕುರಿತು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಇದರಲ್ಲಿ ರವಿಕುಮಾರ್ ಹೆಸರಿಗೆ ಆಕ್ಷೇಪಣೆ ಇಲ್ಲದೇ ಇದ್ದರೂ ಮಾಧುಸ್ವಾಮಿ ಬಗ್ಗೆ ವಿರೋಧ ಇರುವ ಕುರಿತು ಚರ್ಚೆ ನಡೆಯಿತು. ಸಿಟಿ ರವಿ ಹೆಸರೂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು. ಸಂಘಟನಾ ವಿಭಾಗದಿಂದ ಹೆಸರು ಪ್ರಸ್ತಾಪವಾಗಿದೆ. ಇನ್ನೊಂದು ಸ್ಥಾನ ಮಹಿಳೆಗೆ ನೀಡುವ ಕುರಿತು ಆಕಾಂಕ್ಷಿಗಳ ಪಟ್ಟಿಯೊಂದಿಗೆ ಚರ್ಚಿಸಲಾಯಿತು.

ಮೂರು ಸ್ಥಾನಕ್ಕೆ 9 ಹೆಸರುಗಳನ್ನು ಅಂತಿಮಗೊಳಿಸಲು ಇಂದು ಕೋರ್ ಕಮಿಟಿ ಸಭೆ ನಡೆದರೂ ಹೆಸರು ಅಂತಿಮಗೊಳಿಸಲಾಗಲಿಲ್ಲ. ಆಕಾಂಕ್ಷಿಗಳ ಪಟ್ಟಿ ದೊಡ್ಡದು ಮತ್ತು ಹಿರಿಯ ನಾಯಕರ ಒತ್ತಡವೂ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಜವಾಬ್ದಾರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರಿಗೆ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಹೈಕಮಾಂಡ್ ನಾಯಕರ ಸಂಪರ್ಕ ಮಾಡಿ ಪಟ್ಟಿ ಅಂತಿಮಗೊಳಿಸುವ ನಿರ್ಣಯವನ್ನು ಕೋರ್ ಕಮಿಟಿ ಅಂಗೀಕಾರ ಮಾಡಿತು.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಅವರು, ಬಿಜೆಪಿ ಸಂಖ್ಯಾಬಲದ ಆಧಾರದಲ್ಲಿ ವಿಧಾನ ಪರಿಷತ್​ನ 3 ಸ್ಥಾನಗಳು ನಮಗೆ ಲಭಿಸಲಿವೆ. ಇದನ್ನು ಆಧರಿಸಿ 3 ಸ್ಥಾನಗಳಿಗೆ ಅಂತಿಮವಾಗಿ ಅಭ್ಯರ್ಥಿಗಳನ್ನು ನಿರ್ಣಯಿಸುವ ಕಾರ್ಯವನ್ನು ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮಾಡುತ್ತಾರೆ ಎಂದು ಹೇಳಿದರು.

ರಾಜ್ಯ ಬಿಜೆಪಿ ನಾಯಕರು (ಸಂಗ್ರಹ ಚಿತ್ರ)
ವಿಧಾನ ಪರಿಷತ್ ಚುನಾವಣೆ: ಬಂಡಾಯ ಅಭ್ಯರ್ಥಿಗಳು ಕಣಕ್ಕೆ; ಕುತೂಹಲಕಾರಿ ತ್ರಿಕೋನ ಸ್ಪರ್ಧೆ!

3 ಸ್ಥಾನಗಳಿಗೆ 40ಕ್ಕೂ ಹೆಚ್ಚು ಹೆಸರುಗಳು ಚರ್ಚೆ ಆಗಿವೆ. ಆಕಾಂಕ್ಷಿಗಳನ್ನು ಮಾತ್ರ ನಾವು ಚರ್ಚೆಗೆ ಪರಿಗಣಿಸಿಲ್ಲ. ಆಕಾಂಕ್ಷಿಗಳಲ್ಲದವರನ್ನೂ ಚರ್ಚೆಗೆ ತೆಗೆದುಕೊಂಡಿದ್ದೇವೆ. ರಾಜ್ಯದ ವಿವಿಧ ಭಾಗಗಳ ಸುಮಾರು 40ಕ್ಕೂ ಹೆಚ್ಚು ಹೆಸರುಗಳ ಕುರಿತು ಚರ್ಚೆ ಮಾಡಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ನಾಯಕರ ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಣಯ ಮಾಡುವ ಅಧಿಕಾರವನ್ನು ಕೋರ್ ಸಮಿತಿ ಕೊಟ್ಟಿದೆ ಎಂದು ತಿಳಿಸಿದರು.

ಕೇಂದ್ರದ ಜೊತೆ ಸಮಾಲೋಚನೆ ನಡೆಸಿ ಪಕ್ಷದ ಕಡೆಯಿಂದ ಪರಿಷತ್ತಿನ ಅಭ್ಯರ್ಥಿಗಳು ಯಾರೆಂದು ನಿಶ್ಚಯಿಸುತ್ತಾರೆ. ಜೊತೆಗೆ ಪರಿಷತ್ತಿಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಗೆಲುವಿನ ದೃಷ್ಟಿಯಿಂದ ಕೆಲವು ಸಲಹೆ, ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com