ಬೆಂಗಳೂರು: ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ಈ ಜನ್ಮದಲ್ಲಿ ನೀವು ಪಡೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಭಾನುವಾರ ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು, ಸಿದ್ದರಾಮಯ್ಯ ಅವರನ್ನು ಭಂಡ, ಭ್ರಷ್ಟ ಮತ್ತು ವಲಸಿಗ ಕಾಂಗ್ರೆಸ್ಸಿಗ ಎಂದು ಕರೆದಿದ್ದು, ನೀವು ನಿಮ್ಮ ಹಿಂದಿನ ಅವಧಿಯಲ್ಲಿ ಬಲಿಷ್ಠ ಲೋಕಾಯುಕ್ತ ಸಂಸ್ಥೆಗೆ ಬೀಗ ಜಡಿದು ದುರ್ಬಲ ಎಸಿಬಿ ಸ್ಥಾಪಿಸಿದ್ದು ನೀವು ಪರಪ್ಪನ ಅಗ್ರಹಾರದ ಖಾಯಂ ನಿವಾಸಿಯಾಗುವುದನ್ನು ತಪ್ಪಿಸಿಕೊಳ್ಳಲು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ತಿರುಗೇಟು ನೀಡಿದೆ.
ಅರ್ಕಾವತಿ ರೀಡೂ ಹಗರಣದ ಬಗ್ಗೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೀಡಿದ ವರದಿಯನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದು ಸಹ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಎಂಬುದು ಸಹ ಎಲ್ಲರಿಗೂ ತಿಳಿದಿರುವ ವಿಚಾರ. ನೀವು ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆಸಿದ ಭ್ರಷ್ಟಾಚಾರದಿಂದಲೆ ಕಾಂಗ್ರೆಸ್ ಹರಿಯಾಣದಲ್ಲಿ ಸೋತಿದೆ ಎಂದು ನಿಮ್ಮ ಪಕ್ಷದ ಕೆ.ಬಿ.ಕೋಳಿವಾಡ ಅವರೆ ಹೇಳಿದ್ದಾರೆ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಬೇಕೋ ಬೇಡವೋ ಎಂಬುದನ್ನು ಇನ್ನೊಮ್ಮೆ ಆಲೋಚಿಸಿ ಎಂದು ಹೇಳಿದೆ.
ಪೋಕ್ಸೋ ಕೇಸ್ ದಾಖಲಿಸಿದ ಮಹಿಳೆ ಒಬ್ಬ ಮಾನಸಿಕ ಅಸ್ವಸ್ಥೆ ಎಂಬುದನ್ನು 2013ರಲ್ಲಿ ನಿಮ್ಮ ಷಡ್ಯಂತ್ರಕ್ಕೆ ಬಲಿಯಾಗಿ ಕೊರಟಗೆರೆಯಲ್ಲಿ ಸೋಲನ್ನು ಅನುಭವಿಸಿದ ಮೂಲ ಕಾಂಗ್ರೆಸ್ಸಿಗ ಹಾಗೂ ಹಾಗೂ ಹಾಲಿ ಗೃಹ ಸಚಿವ ಪರಮೇಶ್ವರ್ ಅವರೆ ಹೇಳಿದ್ದಾರೆ. ನಿಮ್ಮ ಗೃಹ ಸಚಿವರ ಹೇಳಿಕೆ ಬಗ್ಗೆ ನಿಮಗೆ ನಂಬಿಕೆ ಇಲ್ಲವೋ ಅಥವಾ ಅವರು ನಿಮ್ಮನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುತ್ತಾರೆ ಎಂಬ ಅಸೂಯೆಯೋ..?ಅಷ್ಟಕ್ಕೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪೂರ್ವಾಗ್ರಹ ಪೀಡಿತರಾಗಿ ಮಾತನಾಡಬಾರದು ಎಂಬ ಸಾಮಾನ್ಯ ಜ್ಞಾನ ಸಂಡೇ ಲಾಯರ್ ಆದ ನಿಮಗೆ ಇಲ್ಲವೇ..? ನಿಮ್ಮ ಕುಚಿಕು ಹೆಚ್.ವೈ ಮೇಟಿ ನಡೆಸಿದ ರಾಸಲೀಲೆಯನ್ನು ಇಡೀ ಜಗತ್ತೇ ನೋಡಿದೆ.
ಪ್ರಸ್ತುತ ನಿಮ್ಮ ಆರಾಧ್ಯ ದೈವ, ಸೊಂಟನೋವು ಖ್ಯಾತಿಯ ಕೆ ಸಿ.ವೇಣುಗೋಪಾಲ್ ಅವರ ರೇಪ್ ಕೇಸ್ ಪ್ರಕರಣದ ವಿಚಾರಣೆ ಎಲ್ಲಿಗೆ ಬಂತು..? ಮಹಿಳೆಯರ ಸುರಕ್ಷತೆ ಬಗ್ಗೆ ಬೇರೆಯವರಿಗೆ ಪಾಠ ಮಾಡುವ ನಿಮ್ಮ ಆಡಳಿತದಲ್ಲಿ ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲುಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಏಕೆ..ಹನಿ ಟ್ರ್ಯಾಪ್ ಕೇಸುಗಳಲ್ಲಿ ಬಂಧನಕ್ಕೊಳಗಾಗುವ ಮಹಿಳೆಯರೆಲ್ಲರೂ ನಿಮ್ಮ ಜೊತೆ ಆಪ್ತವಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುತ್ತಾರಲ್ವಾ...? ನಿಮಗೂ ಆ ಹನಿಟ್ರ್ಯಾಪ್ ಮಾಡುವ ಮಹಿಳೆಯರಿಗೂ ಎತ್ತಣಿಂದೆತ್ತಣ ಸಂಬಂಧ..?ಎಂದು ಪ್ರಶ್ನೆ ಮಾಡಿದೆ.
Advertisement