ಚನ್ನಪಟ್ಟಣ: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಂಟಿಯಾಗಿ ಎನ್'ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬುಧವಾರ ಮತಯಾಚನೆ ನಡೆಸಿದ್ದು, ಈ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವೈಫಲ್ಯ ಎತ್ತಿಹಿಡಿದರು.
ರಾಜ್ಯ ಖಜಾನೆ ಖಾಲಿ ಆಗಿದೆ, ರಾಜ್ಯ ದಿವಾಳಿ ಆಗಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲದಂತಾಗಿದೆ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೆಚ್'ಡಿ.ದೇವೇಗೌಡ ಅವರು ಆರೋಪ ಮಾಡಿದರು.
ಕಾಂಗ್ರೆಸ್ ನವರೇ ಹಠ ಮಾಡಿ ನನ್ನ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಕೊನೆಗೆ ಅವರೇ ಮೈತ್ರಿ ಸರ್ಕಾರ ಉರುಳಿಸಿದರು. ಕಳೆದ 10 ವರ್ಷಗಳಿಂದ ರೈತರ ಖಾತೆಗೆ ಮೋದಿ ಸರ್ಕಾರ ರೂ.2000 ಜಮಾ ಮಾಡುತ್ತಾ ಬರುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸ್ಥಗಿತಗೊಳಿಸಿದೆ. ಈಗ 5 ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರಲ್ಲಿಯೇ ಗ್ಯಾರಂಟಿಗಳ ಕುರಿತು ಅಪಸ್ವರ ಎದ್ದಿದೆ ಎಂದು ಟೀಕಿಸಿದರು.
ನನಗೆ ನಿಂತು ಮಾತನಾಡುವುದಕ್ಕೆ ಆಗುತ್ತಿಲ್ಲ. ಕಾಲಲ್ಲಿ ನೋವಿದೆ. ಹೀಗಾಗಿ ಕುಳಿತು ಮಾತನಾಡುತ್ತಿದ್ದೇನೆ. ನಾನು ರೈತನ ಮಗ. 90 ವರ್ಷ ವಯಸ್ಸಾಗಿದೆ ನನಗೆ ಸರಿಸಮನಾಗಿ ಎಸ್.ಎಂ.ಕೃಷ್ಣ ಒಬ್ಬರೇ ಇರುವುದು. ಅವರು ಎಲ್ಲೂ ಬರಲ್ಲ. ದೇವೇಗೌಡ ಅವರು ಯಾಕೆ ಬರುತ್ತಾರೆ? ಮೊಮ್ಮಗನ ಗೆಲ್ಲಿಸಲು ಬರುತ್ತಾರೆ. 90 ವಯಸ್ಸಾದರೂ ಬರ್ತಾನಲ್ಲ, ಹುಚ್ಚು ಹಿಡಿದಿದ್ಯಾ ಎಂದು ಎದುರಾಳಿಗಳು ಮಾತನಾಡುತ್ತಿದ್ದಾರೆ. 50 ವರ್ಷಗಳ ಹಿಂದೆ ಚನ್ನಪಟ್ಟಣಕ್ಕೆ ಬಂದು ಕಾಂಗ್ರೆಸ್ ಸೋಲಿಸಿದ ವ್ಯಕ್ತಿ ನಾನು. ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾನೆ. ಹಾಗಂತ ನಾನು ಮೊಮ್ಮಗನನ್ನು ಗೆಲ್ಲಿಸಲು ಇಲ್ಲಿಗೆ ಬಂದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಬಂದಿದ್ದೇನೆಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ; ಚನ್ನಪಟ್ಟಣದಲ್ಲಿ ಎನ್'ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡ ಪ್ರಮಾಣದ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದರಲ್ಲಿ ನನಗೆ ಯಾವುದೇ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2006ರಲ್ಲಿ ನಾನು ಮತ್ತು ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಇದೆಲ್ಲವನ್ನು ಜನತೆ ಮರೆಯಬಾರದು ಎಂದು ಮನವಿ ಮಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡ ನಿಖಿಲ್ ಪರ ಪ್ರಚಾರ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) 12 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸುವ ಮೂಲಕ ಕಾಂಗ್ರೆಸ್ ಬಡವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರವು 12 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಯೋಜಿಸುತ್ತಿದೆ. ಇದು ಬಡವರು ಮತ್ತು ಹಿಂದುಳಿದವರ ಮೇಲಿನ ದಾಳಿಯಾಗಿದೆ. ಕೂಡಲೇ ಈ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಬಡವರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉನ್ನತಿಗೆ ಅವಿರತವಾಗಿ ಶ್ರಮಿಸಿದ್ದರು. ನಿಖಿಲ್ ರಾಜ್ಯದ ಭವಿಷ್ಯದ ಬಗ್ಗೆ ಅದೇ ದೃಷ್ಟಿಯನ್ನು ಹೊಂದಿದ್ದಾರೆಂದು ಹೇಳಿದರು.
Advertisement