ಶಿಗ್ಗಾಂವಿ: ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸುತ್ತೇವೆಂದು ಬಿಜೆಪಿ ಹಿರಿಯ ನಾಯಕ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಹೇಳಿದರು.
ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ದುಂಢಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಾತನಾಡಿದ ಅವರು, ದುಂಢಸಿಯಲ್ಲಿ 19 ಎಕರೆ ಜಮೀನು ವಕ್ಪ್ ಆಸ್ತಿ ಮಾಡಿದ್ದಾರೆ. ನಾನು ವಕ್ಪ್ ಬಗ್ಗೆ ಆಗ ಮಾತನಾಡಲು ವಿಶ್ವೇಶ್ವರ್ ಹೆಗಡೆ, ಬೊಮ್ಮಾಯಿ ಕಾರಣ. ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತಿರಿ, ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟಿಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ಹಾಪ್ ಮ್ಯಾಡ್ ರಾಹುಲ್ ಗಾಂಧಿ ಮಾತು ಕೇಳುತ್ತೀರಾ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ 10 ವರ್ಷದಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಾರೆ. ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಕಾಂಗ್ರೆಸ್‌ನವರು ಸೈನ್ಯಕ್ಕೆ ಎಕೆ 47 ಬಂದೂಕು ಬಳಕೆ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಈಗ ಪ್ರಧಾನಿ ಮೋದಿ ನಮ್ಮ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನೆಹರು ಚೀನಾ ಯುದ್ಧದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಚಸ್ಮಾ ಕೂಡ ಕೊಟ್ಟಿರಲಿಲ್ಲ. ಅವರಿಂದ ನಮ್ಮ ಸೈನಿಕರಿಗೆ ಸಾಕಷ್ಟು ಅನ್ಯಾಯವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿಗೆ ನಮಸ್ಕಾರ ಮಾಡಿಕೊಂಡು ತಿರುಗಾಡಿದರು. ನಮ್ಮ ಪ್ರಧಾನಿ ನಾನು ಪ್ರಧಾನ ಸೇವಕ ಯಾರೂ ಕಾಲಿಗೆ ಬೀಳಬೇಕಿಲ್ಲ.
ವಕ್ಫ್ ಕಾಯ್ದೆ ಎಷ್ಟು ಅಪಾಯಕಾರಿ ಇದೆ ಎಂಬುದು ಈಗೀಗ ಜನರಿಗೆ ಗೊತ್ತಾಗುತ್ತಿದೆ. ಅವರು ಶೇ.30 ಜನಸಂಖ್ಯೆ. ಆದರೆ, ಈಗ ನಮ್ಮವರು ಶಾಸಕರಾಗಲು ಹರಸಾಹಸ ಪಡಬೇಕಿದೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರಿಗೆ ಹೋಲಿಕೆ ಮಾಡಿ ನೋಡಿ, ಅವರ ಅಭ್ಯರ್ಥಿ ಬಗ್ಗೆ ಅಜ್ಜಂಪೀರ್ ಖಾದ್ರಿನೇ ಅವನ ಬಣ್ಣ ಬಿಚ್ಚಿದ್ದಾನೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ ಮುಂತಾದವರು ನಮ್ಮ ಮುಖಾ ನೋಡಿ ಮತ ಹಾಕಿ ಎನ್ನುತ್ತಾರೆ. ನಾವು ಯಾರ ಮುಖ ನೋಡಿ ಹಾಕಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪಿಎ ಮೂಲಕ ಸರ್ಕಾರಿ ಅಧಿಕಾರಿಯನ್ನು ಕೊಂದಿದ್ದೀರಿ. ಸಚಿವ ಆರ್.ಬಿ.ತಿಮ್ಮಾಪುರ 900 ಕೋಟಿ ರೂ. ಲೂಟಿ ಮಾಡಿದ್ದಾರೆ. ನೀವು ಹಿಂಗೆ ಇದ್ದರೆ ಎಲ್ಲ ಆಸ್ತಿ ಹೋಗುತ್ತದೆ. ಎರಡು ಸಾವಿರ ರೂಪಾಯಿ ಮಾತ್ರ ಉಳಿಯುತ್ತದೆ ಎಂದರು.
ನಾವು ಅವರನ್ನು ಅಣ್ಣ ತಮ್ಮಂದಿರು ಎಂದು ತಿಳಿದುಕೊಂಡಿದ್ದೇವೆ. ಆದರೆ, ಅವರ ಧರ್ಮದಲ್ಲಿ ಬೇರೆ ಧರ್ಮದವರನ್ನು ಅಣ್ಣ ತಮ್ಮ ಎನ್ನುವ ಮಾತೇ ಇಲ್ಲ. 2019 ರಲ್ಲಿ ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ನಮ್ಮ ದೇಶದಲ್ಲಿ ಎಷ್ಡು ವಕ್ಪ್ ಆಸ್ತಿ ಇದೆ ಎಂದು ಕೇಳಿದ್ದರು. ಆಗ ಐದು ಲಕ್ಷ ಎಕರೆ ಎಂದು ಹೇಳಿದ್ದರು.ಈಗ ಸುಮಾರು ಒಂಭತ್ತುವರೆ ಲಕ್ಷ ಎಕರೆ ವಕ್ಪ್ ಆಸ್ತಿ ಇದೆಯಂತೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಂಸದರ ಒತ್ತಡದಿಂದ ವಕ್ಪ್ ಕಾಯ್ದೆ ತಿದ್ದುಪಡಿ ಮಾಡಲು ಸಂಸತ್ತಿನ ಜಂಟಿ ಸದನ ಸಮಿತಿ ರಚನೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ 8ಲಕ್ಷ ಎಕರೆ ಐತಿ, ಭಾರತದಲ್ಲಿ 9.5 ಲಕ್ಷ ಎಕರೆ ವಕ್ಪ್ ಆಸ್ತಿ ಇದೆ. ಕಾಂಗ್ರೆಸ್ ನವರು ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿಗ್ಗಾವಿ ಸವಣೂರಿನಲ್ಲಿ ನವಾಬರು ಇದ್ದರು ನಿಮ್ಮ ಎಲ್ಲ ಆಸ್ತಿಗಳು ವಕ್ಪ್ ಆಸ್ತಿಯಾಗುತ್ತವೆ. ನೀವೆಲ್ಲ ಜಾತಿ ಒಳ ಪಂಗಡ ಬಿಟ್ಟು ಒಕ್ಕಟ್ಟಾಗಿ ಇಲ್ಲದಿದ್ದರೆ ನಿಮ್ಮ ಎಲ್ಲ ಆಸ್ತಿಗಳೂ ವಕ್ಪ್ ಆಸ್ತಿ ಆಗುತ್ತವೆ. ಬಿಜೆಪಿ ಅವಧಿಯಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ಎಂದಿದ್ದೆ. ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಮ್ಮ ಸರ್ಕಾರದ ವಿರುದ್ದವೇ ಹೋರಾಟ ಮಾಡಿದ್ದೆ. ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ನಮಗೆ ಪ್ರವರ್ಗ 2ಡಿ ಅಡಿಯಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅದನ್ನು ಪಾಲಿಸಲಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜೋರಾಗಿ ಮಾತನಾಡುತ್ತಿದ್ದರು. ಈಗ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಿದಾರಿದರು.
Advertisement