Muda Case: ತಪ್ಪೊಪ್ಪಿಗೆಗೆ ಇನ್ನೆಷ್ಟು ಸಾಕ್ಷಿಗಳು ಬೇಕು; ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಇದು ತಮ್ಮ ಕೊನೆಯ ಅವಧಿಯೆಂದು ಗೊತ್ತು ಮಾಡಿಕೊಂಡು ತೀವ್ರ ನಿರ್ಲಜ್ಜೆಯಿಂದ ನಡೆದುಕೊಳ್ಳುತ್ತ ಆಡಳಿತ ನಡೆಸುತ್ತಿದ್ದಾರೆ. ಮೊದಲು ರಾಜಕೀಯ 'ಸ್ಟಂಟ್' ಬಿಟ್ಟು ರಾಜೀನಾಮೆ ಕೊಡಲಿ.
Siddaramaiah And pralhad Joshi
ಸಿದ್ದರಾಮಯ್ಯ ಮತ್ತು ಪ್ರಹ್ಲಾದ್ ಜೋಶಿ
Updated on

ಶಿಗ್ಗಾಂವಿ: ಮುಡಾ ನಿವೇಶನ ಹಗರಣದಲ್ಲಿ ತಪ್ಪೊಪ್ಪಿಕೊಳ್ಳಲು ಇನ್ನೆಷ್ಟು ಸಾಕ್ಷಿಗಳು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸೋಮವಾರ ಪ್ರಶ್ನೆ ಮಾಡಿದ್ದಾರೆ.

ಶಿಗ್ಗಾಂವಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಇದು ತಮ್ಮ ಕೊನೆಯ ಅವಧಿಯೆಂದು ಗೊತ್ತು ಮಾಡಿಕೊಂಡು ತೀವ್ರ ನಿರ್ಲಜ್ಜೆಯಿಂದ ನಡೆದುಕೊಳ್ಳುತ್ತ ಆಡಳಿತ ನಡೆಸುತ್ತಿದ್ದಾರೆ. ಮೊದಲು ರಾಜಕೀಯ 'ಸ್ಟಂಟ್' ಬಿಟ್ಟು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

ಮೂಡಾ ನಿವೇಶನ ಹಂಚಿಕೆಯಲ್ಲಿ ತಮ್ಮ ಪಾತ್ರವಿಲ್ಲ, ಪ್ರಭಾವ ಬೀರಿಲ್ಲ ಎಂದು ಹೇಳುತ್ತಾರೆ. ಆದರೆ ಒಂದೊಂದೇ ಸತ್ಯ ಬಯಲಿಗೆ ಬರುತ್ತಿಲ್ಲವೇ? ತಹಶೀಲ್ದಾರ್ ಎನ್.ಮಂಜುನಾಥ್ ನಿಮ್ಮ ಪರವಾಗಿ ಮುದ್ರಾಂಕ ಶುಲ್ಕ ಪಾವತಿಸಿದ್ದಾರಲ್ಲ, ಅದಕ್ಕೇನು ಹೇಳುತ್ತೀರಿ? ತಮ್ಮ ಚೇಲಾಗಳಿಗೆ 14 ಸೈಟ್ ಹಂಚಿದ್ದು, ಖಡಕ್ ಆಗಿದ್ದ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸಿರುವುದು, ಇದೆಲ್ಲ ನಿಮ್ಮ ಪ್ರಭಾವ ಇಲ್ಲದೇ ಆಯಿತೇ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸುತ್ತ ರೀಡು, ಮೂಡಾ, ಅಬಕಾರಿ ಹಗರಣಗಳ ಹುತ್ತವೇ ಬೆಳೆದಿದೆ. ಹೈ-ಫೈ ವಾಚ್, ಅರ್ಕಾವತಿ, ರಿಡು, ಮೂಡಾ, ವಾಲ್ಮೀಕಿ, ಈಗ ನಿಮ್ಮ ಜೋಳಿಗೆಯಲ್ಲಿ ಅಬಕಾರಿ ಹಗರಣಗಳಿವೆ. ಮೂಡಾ ಹಗರಣದಲ್ಲಿ ಸ್ವತಃ ಎ1 ಆರೋಪಿ ಆಗಿರುವ ತಾವು ಪ್ರಧಾನಿ ಮೋದಿ ವಿರುದ್ಧ ಸವಾಲು ಹಾಕುತ್ತೀರಿ. ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟ ಪ್ರಧಾನಿ ರಾಜೀನಾಮೆ ಕೇಳಲು ನಿಮಗೇನು ಅರ್ಹತೆಯಿದೆ? ಎಂದು ಸಿಎಂ ವಿರುದ್ಧ ಗುಡುಗಿದರು.

Siddaramaiah And pralhad Joshi
ಜಸ್ಟೀಸ್ ಮೈಕಲ್ ಕುನ್ಹಾ ಕುರಿತು ಹೇಳಿಕೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು

ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯವೆಂದು ಸಾಧಿಸುವಂತ ದಾಷ್ಟ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿದೆ, ವಕ್ಫ್ ಅಸ್ತಿ ಯಾರೊಬ್ಬರ ಸ್ವತ್ತೂ ಆಗಬಾರದು. ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸುತ್ತದೆ. ಕಾಂಗ್ರೆಸ್ಸಿಗರು ಮೊದಲು ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಓದಲಿ ಎಂದು ಸಲಹೆ ನೀಡಿದರು.

ಮೂಲ ವಕ್ಫ್ ಆಸ್ತಿಗಳ ರಕ್ಷಣೆಯನ್ನು ಬಿಜೆಪಿ ಬೆಂಬಲಿಸುತ್ತದೆ ಆದರೆ ಅತಿಕ್ರಮಣವನ್ನು ಬೆಂಬಲಿಸುವುದಿಲ್ಲ. ರಾಜ್ಯದಲ್ಲಿ 2.3 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿಗಳಿದ್ದು, ಕಾಂಗ್ರೆಸ್‌ನ ಕೆಲವು ಮುಸ್ಲಿಂ ಮುಖಂಡರು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ರಾಮಣ್ಣನವರು ಬರೀ ಮುಸ್ಲಿಂರಿಗಾಗಿ ಇದ್ದಾರೋ ಅಥವಾ ಸಮಗ್ರ ನಾಡಿನ ಜನತೆಗಾಗಿ ಇದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ.

ಇಕ್ಬಾಲ್ ಅನ್ಸಾರಿಯವರ ಮಾತನ್ನು ನೋಡಿದರೇ ಎಲ್ಲ ಆಸ್ತಿಯನ್ನು ಬರೆದುಕೊಳ್ಳಿ ಎಂದು ಸಿಎಂ ಅವರೇ ಹೇಳಿರುವ ಹಾಗಿದೆ. ಸಿದ್ದರಾಮಯ್ಯ ಇರುವ ತನಕ ಕೇಸ್​ ಹಿಂತೆಗೆದುಕೊಳ್ಳುವುದು, ದೇಶದ್ರೋಹ ಮಾಡಿದವರ, ಸಮಾಜದ್ರೋಹ ಮಾಡಿದವರ ಕೇಸ್​ ಹಿಂಪಡೆಯುವುದು. ಅವರು ಇರುವ ತನಕ ವಕ್ಫ್​ ಆಸ್ತಿಯನ್ನ ಬೇಕಾಬಿಟ್ಟಿ ಮಾಡುವುದು, ಕೆಲವೇ ಕೆಲವು ಶಾದಿ ಭಾಗ್ಯಗಳನ್ನ ಮಾಡುವುದು, ಇದೇ ನಿಮ್ಮ ಥಿಯರಿಯೇ ಹಾಗಿದ್ರೆ? ಎಂದು ಪ್ರಶ್ನಿಸಿದರು.

ಸಿದ್ಧರಾಮಯ್ಯ ಅವರು ಇರುವ ತನಕ ಏನೇ ಮಾಡಿದರೂ ನಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯನವರದ್ದು ಮೃದು ಧೋರಣೆ ಇದ್ದೇ ಇದೆ. ಯಾವುದೇ ದೇಶದ್ರೋಹದ ಕೇಸ್ ಮಾಡಿದರೂ ಕೇಸ್ ಹಿಂಪಡೆಯುವುದು, ಕೆಜಿ ಹಳ್ಳಿ, ಡಿಜಿ ಹಳ್ಳಿಯಲ್ಲಿನ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡುವುದನ್ನು ನೋಡಿದರೆ, ದೇಶದ್ರೋಹದ ಪ್ರಕರಣದಲ್ಲಿ ಮೃದು ಧೋರಣೆ ಇರುವುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಕುನ್ನಾ ಅವರಿಗೆ ವಿಷಾದ ವ್ಯಕ್ತಪಡಿಸುವೆ

ನ್ಯಾಯಮೂರ್ತಿ ಕುನನಾ ಅವರ ಬಗ್ಗೆ ಗೌರವವಿದೆ. ಅವರು ಸರ್ಕಾರದ ಏಜೆಂಟರು ಎಂದು ಹೇಳಿಲ್ಲ. ಅವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಸರ್ಕಾರ ತರಾತುರಿಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಕೊಟ್ಟಿದೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಎಂದು ಹೇಳಿದ್ದೇನೆ. ಯಡಿಯೂರಪ್ಪ ಅವರಂತಹ ಹಿರಿಯರಿಗೆ ಮಾಹಿತಿ ನೀಡದೇ ಪ್ರಾಸಿಕ್ಯೂಷನ್'ಗೆ ಕೊಡುತ್ತಾರೆಂದರೆ ಹೇಗೆ? ಏಕಪಕ್ಷೀಯವಾಗಿ ಮಾಡಿದ್ದಾರೆ. ಇದು ನಮ್ಮ ಪ್ರಶ್ನೆಯಾಗಿದೆ. ಆದರೂ ನ್ಯಾಯಮೂರ್ತಿ ಕುನ್ನಾ ಅವರಿಗೆ ಬೇಸರವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com