ಬೆಂಗಳೂರು: ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಕೂಪದಲ್ಲಿ ಕುಳಿತಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಅಲ್ಲದೆ, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದರು.
ಮುಖ್ಯಮಂತ್ರಿಗಳ ಕುಟುಂಬವು ಮುಡಾದ 14 ನಿವೇಶನ ವಾಪಸ್ ಮಾಡಿದ್ದು, ಪ್ರಿಯಾಂಕ್ ಖರ್ಗೆಯವರು 5 ಎಕರೆ ವಾಪಸ್ ಮಾಡಿದ್ದರಿಂದ ಭ್ರಷ್ಟಾಚಾರ ಸಾಬೀತಾಗಿದೆ. ಅದರೆ, ತನಿಖೆ ಏನಿದ್ದರೂ ನಿಮ್ಮ ಕಸರತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ ಯಾವ ಮಟ್ಟಕ್ಕೆ ಹೋಗುತ್ತೀರಿ? ಪ್ರಧಾನಿಯವರ ಯೋಗ್ಯತೆ, ತಮ್ಮ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ವಯಸ್ಸು, ಅಧಿಕಾರದಲ್ಲಿ ನೀವು ಅವರ ಮಟ್ಟಕ್ಕಿದ್ದರೆ ಅವರನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿದೆ. ಸಣ್ಣ ಸಣ್ಣ ವ್ಯಕ್ತಿಗಳೂ ಪ್ರಧಾನಮಂತ್ರಿಗಳನ್ನು ಕೀಳು ಭಾಷೆಯಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಇತ್ತೀಚೆಗಷ್ಟೇ ವೈನ್ ಮರ್ಚೆಂಟ್ ಅಸೋಸಿಯೇಶನ್‍ನವರು ಆರೋಪವೊಂದನ್ನು ಮಾಡಿದ್ದಾರೆ. ಸುಮಾರು 500 ಕೋಟಿಗಳಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾಗಿ ಹೇಳಿದ್ದಾರೆ. ಬಳಿಕ ಸುಲಿಗೆ ನಮ್ಮ ಗಮನಕ್ಕೂ ಬಂದಿದ್ದು, 700 ಕೋಟಿ ಲೂಟಿಯಾಗಿರುವುದು ತಿಳಿದುಬಂದಿದೆ. ಚುನಾವಣೆ ಹಿನ್ನೆಲೆಯ ಈ ವಸೂಲಿ ನಡೆದಿದೆ. ಈ ವಿಚಾರವನ್ನು ನಮ್ಮ ಪ್ರಧಾನಿಗಳು ಮಹಾರಾಷ್ಟ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ.
ವೈನ್ ಮರ್ಚೆಂಟ್‍ಗಳಿಗೆ ಆಗುವ ತೊಂದರೆಗಳನ್ನು ಮುಂದಿಟ್ಟುಕೊಂಡು 25ರಂದು ಇಡೀ ರಾಜ್ಯದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಲೈಸನ್ಸ್ ಪಡೆಯಲು 4.50 ಲಕ್ಷ ರೂ. ಸರಕಾರಿ ಶುಲ್ಕ ಕಟ್ಟಬೇಕಿದೆ. ಹೊಸ ಲೈಸನ್ಸ್ ಪಡೆಯಲು 70-80 ಲಕ್ಷ ಖರ್ಚಾಗುತ್ತದೆ. ಈ ಹಣ ಎಲ್ಲಿ ಹೋಗುತ್ತದೆ ಎಂದು ಪ್ರಶ್ನಿಸಿದರು.
ಒಂದು ವರ್ಷಕ್ಕೆ ಲೈಸನ್ಸ್ ನವೀಕರಿಸಲು 4.60 ಲಕ್ಷ ರೂ. ಕಟ್ಟಬೇಕು. 6 ಲಕ್ಷ ಲಂಚ ಕೊಡಬೇಕು. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇದಾದ ನಂತರ ಏನೇ ದೂರುಗಳಿಲ್ಲದಿದ್ದರೂ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಅಥವಾ ಒಂದು ಮದ್ಯದ ಅಂಗಡಿಯವರ ಮೇಲೆ ಇಲಾಖೆಯು 2 ಕೇಸ್ ಕಡ್ಡಾಯವಾಗಿ ಹಾಕುತ್ತದೆ. ಆಪಾದನೆ ತಪ್ಪಿಸಲು ಕೇಸ್ ಹಾಕುವುದಲ್ಲದೆ, 2 ಸಾವಿರ ರೂ. ದಂಡ, 25 ಸಾವಿರ ಲಂಚ ಕೇಳುತ್ತಾರೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆ ಹಗರಣವನ್ನು ಅಲ್ಲಗಳೆಯುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀವು ಭ್ರಷ್ಟಾಚಾರ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಗುತ್ತಿಗೆದಾರರ ಸಂಘದವರು ಬಿಜೆಪಿ ಸರಕಾರ ಶೇ 40 ವಸೂಲಿ ಮಾಡುತ್ತಿದೆ ಎಂದು ಆಪಾದಿಸಿದ್ದರಲ್ಲವೇ? ಅದನ್ನು ಅವರು ಸಾಬೀತು ಪಡಿಸಿದ್ದಾರಾ? ನೀವು ಅದನ್ನು ಚುನಾವಣಾ ಮುಖ್ಯ ವಿಷಯ ಮಾಡಿಕೊಂಡಿರಲ್ಲವೇ? ಇದುವರೆಗೂ ಅದನ್ನು ಸಾಬೀತುಪಡಿಸಲು ನಿಮಗೆ ಆಗಿದೆಯೇ? ಗುತ್ತಿಗೆದಾರರ ಸಂಘ ಸತ್ಯ ಹೇಳಿದ್ದೆಂದು ತಿಳಿಸುವ ಮತ್ತು ನಂಬುವ ಮುಖ್ಯಮಂತ್ರಿಗಳು ವೈನ್ ಮರ್ಚೆಂಟ್ ಅಸೋಸಿಯೇಶನ್‍ನ ಆರೋಪವನ್ನು ಅಲ್ಲಗಳೆಯಲು ಕಾರಣ ಏನಿದೆ? ಎಂದು ಪ್ರಶ್ನೆಗಳನ್ನು ಕೇಳಿದರು.
ಸಿದ್ದರಾಮಯ್ಯನವರು ಭ್ರಷ್ಟಾಚಾರದ ಪಿತಾಮಹ. ಮಾಡುವುದನ್ನು ಮಾಡಿ ಅದನ್ನು ಮರೆಮಾಚುವ ಪರಿಪಾಠವನ್ನು ಮೈಗೂಡಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಮಾಡುವುದೇ ಅಬಕಾರಿ ಇಲಾಖೆ- ಸಚಿವರ ಕೆಲಸ. ಡಿ.ಸಿ.ಗಳು, ಎ.ಸಿಗಳಿಗೆ ವರ್ಗಾವಣೆಗೂ ಹಣ ನಿಗದಿಯಾಗಿದೆ. ಮದ್ಯಪಾನ ಸಂಯಮ ಮಂಡಳಿ ಕುಡಿಯಬಾರದೆಂದು ಗಾಂಧೀಜಿ ತತ್ವಗಳನ್ನು ಮುಂದಿಟ್ಟರೆ, ಸರಕಾರ ಅಬಕಾರಿ ಇಲಾಖೆಗೆ ಹೆಚ್ಚು ಮಾರಾಟದ, ಹಣ ಸಂಗ್ರಹದ ವಿಚಾರದಲ್ಲಿ ತನ್ನ ಗುರಿ ನಿಗದಿ ಮಾಡುತ್ತದೆ ಎಂದು ವ್ಯಂಗ್ಯವಾಡಿದರು.
Advertisement