ಮೈಸೂರು: ಮುಡಾ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿ.ನರಸೀಪುರದಲ್ಲಿ 470 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು, ಅಭಿವೃದ್ಧಿ ಕಾರ್ಯವನ್ನು ಹಿಡಿದು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ತಮ್ಮ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಷಯಾಧಾರಿತ ದ್ವೇಷ, ಅಸೂಯೆ, ಸಂವಿಧಾನ ವಿರೋಧದ ನಡೆಗಳು ಮುನ್ನೆಲೆಗೆ ಬಂದು ವ್ಯಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವುದು ವಿಷಾದ ವಿಚಾರ ಎಂದು ಹೇಳಿದರು.
ಇತ್ತೀಚಿನ ರಾಜಕಾರಣ ನೋಡಿದರೆ, ನಾವೇ ಅನುದಾನವನ್ನು ತಂದೆವು ಅಂದುಕೊಂಡು ಪೋಸ್ ಕೊಡುತ್ತಿರುತ್ತಾರೆ. ಅಲ್ಲದೇ ಸಿದ್ದರಾಮಯ್ಯ ಅವರ ಜನಪ್ರಿಯತೆಯಿಂದ ಅಸಮಾಧಾನಗೊಂಡಿರುವ ಕೆಲವರು, ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯ ಮುಖಕ್ಕೆ ಮಸಿ ಬಳಿದು ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ಮಾಡುತ್ತಿರುವ ಪ್ರಯತ್ನ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಕರಾಳ ದಿನವನ್ನು ಬಿಂಬಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲೆಕ್ಷನ್ ಹತ್ತಿರ ಬಂದಾಗ ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ನಂತರ ಆ ಬಗ್ಗೆ ಮಾತನಾಡುವುದೇ ಇಲ್ಲ. ಸಿದ್ದರಾಮಯ್ಯ ಈ ರಾಜ್ಯ ಕಂಡ ಶ್ರೇಷ್ಠ ಮುತ್ಸದ್ದಿ. ಜನರಿಂದ ಆಯ್ಕೆಯಾದ ಸರ್ಕಾರ ಅಸ್ಥಿರಗೊಳಿಸಲು ಮುಂದಾಗೋದು ಸಂವಿಧಾನದ ವಿರೋಧಿ ನಡೆ. ವಿಪಕ್ಷಗಳು ಅಭಿವೃದ್ಧಿ ಎಲ್ಲಿದೆ ಎಂದು ಕೇಳುತ್ತಿವೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಇದೆಲ್ಲವನ್ನ ನೀವೇ ನೋಡಿ. ಸರ್ಕಾರದ ವಿವಿಧ ಇಲಾಖೆಗಳಿಗೆ ಬಜೆಟ್ ನಲ್ಲಿ ಅನುದಾನ ಕೊಟ್ಟಿಲ್ವಾ. ನೀರಾವರಿ ಯೋಜನೆಗೆ ಅನುದಾನ ಕೊಟ್ಟಿಲ್ವಾ. ಕುಡಿಯುವ ನೀರಿಗಾಗಿ ಗ್ರಾಮೀಣಭಿವೃದ್ಧಿ ಇಲಾಖೆ ದುಡ್ಡು ಕೊಟ್ಟಿಲ್ವಾ. 13 ಸಾವಿರ ಮನೆಗಳನ್ನ ನರಸೀಪುರ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ಕಾಲೇಜು, ಹಾಸ್ಟೆಲ್, ವಸತಿ ಶಾಲೆಗಳು ಕೊಟ್ಟಿದ್ದೇವೆಂದು ಹೇಳಿದರು.
ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಮೊದಲ ಕಾರ್ಯಾಲಯದಲ್ಲಿ ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ದಾರೆ. ಆದರೆ 2018 ರಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇದೀಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದರೂ ಕರ್ನಾಟಕದ ಆರ್ಥಿಕತೆಯು ಸದೃಢವಾಗಿದೆ ಎಂದು ಹೇಳಿದರು.
ಚುನಾವಣೆ ಬಳಿಕ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಲಿದೆ ಎಂಬ ಭಯ ವಿಪಕ್ಷಗಳಲ್ಲಿ ಶುರುವಾಗಿದ್ದು, ಹೀಗಾಗಿ ನಮ್ಮ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಆರಂಭಿಸಿವೆ. ಆದರೆ, ತನಿಖೆ ಎದುರಿಸಲು ನಾವು ಸಿದ್ಧವಿದ್ದೇವೆ. ತನಿಖಾ ಸಂಸ್ಥೆಗಳು ಬಿಜೆಪಿ ಮುಷ್ಠಿಯಲ್ಲಿರಬಹುದು. ಆದರೆ, ನಮ್ಮ ಬಳಿ ಜನತಾ ನ್ಯಾಯಾಲಯವಿದೆ ಎಂದು ತಿಳಿಸಿದರು.
ಇದೇ ವೇಳೆ ಬಡವರ ಕಲ್ಯಾಣಕ್ಕೆ ಬದ್ಧವಾಗಿರುವ ಸಿದ್ದರಾಮಯ್ಯ ಸರಕಾರಕ್ಕೆ ರಾಜ್ಯದ ಜನತೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯನವರು ಸ್ವಚ್ಛತೆಯ ರಾಜಕಾರಣಿ. ಆದರೆ, ಲೋಕಸಭೆ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸೇರಿ ಅವರಿಗೆ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿವೆ. ಗ್ಯಾರಂಟಿ ಯೋಜನೆ ಜಾರಿಯಾದ ನಂತರ ಇದೆಲ್ಲ ಶುರುವಾಗಿದ್ದು, ಮುಡಾ ವಿಚಾರದಲ್ಲಿ ಸಿಎಂ ಪತ್ನಿ ಪಾರ್ವತಿ ಯಾವುದೇ ತಪ್ಪು ಮಾಡಿಲ್ಲ ಎಂದರು.
Advertisement