ಮುಂದಿನ ಗ್ಯಾರಂಟಿ ಮನೆ ಮನೆಗೆ 'ಬಾರ್ ಭಾಗ್ಯ': ಕಾಂಗ್ರೆಸ್ ಕಾಲೆಳೆದ BJP

ಉಡುಪಿಯ ಕಾಂಗ್ರೆಸ್ ಮುಖಂಡನ ಮನೆಯಲ್ಲಿ 70 ಲಕ್ಷ ರೂ. ಮೌಲ್ಯದ ವಿಸ್ಕಿ ಪತ್ತೆಯಾಗಿದೆ. ಇದು ಕೇವಲ ಒಬ್ಬ ಕಾಂಗ್ರೆಸ್ ನಾಯಕ, ಇತರರು ಎಷ್ಟು ಬಚ್ಚಿಟ್ಟಿದ್ದಾರೆ?
ಉಡುಪಿ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ವಶಪಡಿಸಿಕೊಂಡಿರುವ ಮದ್ಯದ ಬಾಟಲಿಗಳು.
ಉಡುಪಿ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ವಶಪಡಿಸಿಕೊಂಡಿರುವ ಮದ್ಯದ ಬಾಟಲಿಗಳು.
Updated on

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ...? ಎಂದು ಪ್ರಶ್ನಿಸುವ ಮೂಲಕ ರಾಜ್ಯ ಬಿಜೆಪಿ ಕಾಂಗ್ರೆಸ್ ಕಾಲೆಳೆದಿದೆ.

ಕಾರ್ಕಳ ಕಾಂಗ್ರೆಸ್‌ ಮುಖಂಡನ ಮನೆಯಲ್ಲಿ 2360 ಲೀಟರ್ ಅಕ್ರಮ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು, ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತದ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರ ಹೆಸರೆತ್ತಲೂ ನೈತಿಕತೆ ಇಲ್ಲದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ? ಎಂದು ಪ್ರಶ್ನಿಸಿದ್ದಾರೆ.

ಹಗರಣಗಳ ಸರಮಾಲೆಯನ್ನೇ ಧರಿಸಿರುವ ಕಾಂಗ್ರೆಸ್ ಸರ್ಕಾರ 700 ಕೋಟಿ ರೂ. ಮೌಲ್ಯದ ಅಬಕಾರಿ ಹಗರಣದ ಮಧ್ಯೆಯೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂಗ್ರೆಸ್ ಮುಖಂಡ, ಬೋಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬೋಳ ಸೊಸೈಟಿಯ ನಿರ್ದೇಶಕ ಹಾಗೂ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಪರಮಾಪ್ತ ಎನಿಸಿಕೊಂಡಿರುವ ಬೋಳದ ಅವಿನಾಶ್ ಮಲ್ಲಿ ಮನೆಯಲ್ಲಿ 70 ಲಕ್ಷಕ್ಕೂ ಅಧಿಕ ಮೌಲ್ಯದ 200ಕ್ಕೂ ಅಧಿಕ ವಿಸ್ಕಿ ಬಾಟಲಿಗಳ ಸಂಗ್ರಹ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಅಬಕಾರಿ ಉಪ ಆಯುಕ್ತೆ ಬಿಂದು ಅವರ ನೇತೃತ್ವದಲ್ಲಿ ಅವಿನಾಶ್ ಮಲ್ಲಿ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪ್ರಕರಣ ರಾಜ್ಯ ಕಾಂಗ್ರೆಸ್ ಸರಕಾರದ ಸಾಚಾತನದ ಮುಖವಾಡವನ್ನು ಕಳಚಿದೆ.

ಉಡುಪಿ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ವಶಪಡಿಸಿಕೊಂಡಿರುವ ಮದ್ಯದ ಬಾಟಲಿಗಳು.
ರಾಜ್ಯದಲ್ಲಿ ನಿಮ್ಮದೇ ಸರ್ಕಾರ, ತನಿಖಾ ಸಂಸ್ಥೆಗಳಿವೆ, 50 ಕೋಟಿ ರೂ ಆಮಿಷದ ಮೂಲ ತಿಳಿಸಿ: ಸಿಎಂಗೆ ವಿಜಯೇಂದ್ರ ಟಾಂಗ್

ಅಬಕಾರಿ ಹಗರಣ ಸುಳ್ಳು ಎಂದು ಬೊಗಳೆ ಬಿಡುತ್ತಿರುವ ಸಿದ್ದರಾಮಯ್ಯನವರೇ, ಒಬ್ಬ ವ್ಯಕ್ತಿಯ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಮದ್ಯ ಬಾಟಲಿಗಳು ಕಳ್ಳಸಂಗ್ರಹಣೆಯಾಗಿದೆ ಎಂದರೆ ಏನರ್ಥ? ಈ ರೀತಿ ದಾಸ್ತಾನು ಮಾಡುವುದಕ್ಕೆ ನೀವು ಅನಧಿಕೃತ ಪರವಾನಿಗೆ ನೀಡಿದ್ದೀರಾ? ಇಂತಹ ‘ದೋ ನಂಬರ್’ ಮದ್ಯದ ವಹಿವಾಟು ಎಷ್ಟು ಕೋಟಿ ರೂಪಾಯಿ ಮೊತ್ತದ ಹಗರಣ? ಇದು ಅನ್ಯ ರಾಜ್ಯದ ಚುನಾವಣೆಗೋಸ್ಕರವೋ ಅಥವಾ ತಮ್ಮದೇ ಪಕ್ಷದ ಶಾಸಕರ ಖರೀದಿಗೆ ನಡೆಸುತ್ತಿರುವ ಅಕ್ರಮ ಚಟುವಟಿಕೆಯೋ? ಕಾಂಗ್ರೆಸ್ ಸರಕಾರದಲ್ಲಿ ಮನೆ ಮನೆಗೆ ಬಾರ್ ಭಾಗ್ಯ ಕೊಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಆರೋಪಿ ತಲೆ ಮರೆಸಿಕೊಂಡಿದ್ದು, ಕಾಂಗ್ರೆಸ್ ಮುಖಂಡರಿಂದ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಈಗಾಗಲೇ ಮುಡಾ ಹಗರಣ, ವಾಲ್ಮೀಕಿ ನಿಗಮದ ಕೋಟ್ಯಾಂತರ ರೂಪಾಯಿ ದುರ್ಬಳಕೆ ಪ್ರಕರಣದ ಸಹಿತ ವಿವಿಧ ಇಲಾಖೆಗಳಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಜೊತೆಗೆ ಮಠ ಮಂದಿರ, ದೇವಸ್ಥಾನ ಮತ್ತು ರೈತರ ಭೂ ಕಬಳಿಕೆ ಹುನ್ನಾರದ ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಪ್ರಕರಣಗಳಿಂದ ರೋಸಿ ಹೋಗಿರುವ ಜನತೆಗೆ ರಾಜ್ಯ ಕಾಂಗ್ರೆಸ್ ಸರಕಾರವನ್ನು ತೊಲಗಿಸಲು ಸರ್ವ ಸನ್ನದ್ಧರಾಗಿದ್ದು, ಪೊಲೀಸ್ ಇಲಾಖೆ ಸದ್ರಿ ಪ್ರಕರಣದ ಜಾಡು ಹಿಡಿದು ಕೂಲಂಕುಶ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ನಡುವೆ ರಾಜ್ಯ ಬಿಜೆಪಿ ಕೂಡ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಉಡುಪಿಯ ಕಾಂಗ್ರೆಸ್ ಮುಖಂಡನ ಮನೆಯಲ್ಲಿ 70 ಲಕ್ಷ ರೂ. ಮೌಲ್ಯದ ವಿಸ್ಕಿ ಪತ್ತೆಯಾಗಿದೆ. ಇದು ಕೇವಲ ಒಬ್ಬ ಕಾಂಗ್ರೆಸ್ ನಾಯಕ, ಇತರರು ಎಷ್ಟು ಬಚ್ಚಿಟ್ಟಿದ್ದಾರೆ? ಅಬಕಾರಿ ಹಗರಣ 700 ಕೋಟಿ ರೂ. ಮೀರಿದೆ. ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕದಿಂದ ಇನ್ನೂ ಎಷ್ಟು ಹಣ ಬೇಕು ಮಿಸ್ಟರ್‌ ಬಾಲಕ್‌ ಬುದ್ಧಿ ರಾಹುಲ್ ಗಾಂಧಿ? ದಯವಿಟ್ಟು ಉತ್ತರಿಸಿ, ಹೆದರಬೇಡಿ ಎಂದು ಹೇಳಿದೆ. ಅಲ್ಲದೆ, ಅದಿಕಾರಿಗಳು ವಶಪಡಿಸಿಕೊಂಡ ಅಕ್ರಮ ಮದ್ಯದ ವೀಡಿಯೋವನ್ನೂ ಪೋಸ್ಟ್‌ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com