ಮಂಗಳೂರು: ಚನ್ನಪಟ್ಟಣ ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲು ಆಹ್ವಾನ ನೀಡದ ಕಾರಣ ಪ್ರಚಾರ ಮಾಡಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಎಂಎಲ್ಎ ಜಿಟಿ ದೇವೇಗೌಡ ಅವರು ಶನಿವಾರ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ ಪ್ರಚಾರ ಪಟ್ಟಿಯಲ್ಲಿ ನನ್ನು ಹೆಸರು ಸೇರ್ಪಡೆಯಾಗಿಲ್ಲ. ನಾನು ಪಕ್ಷ ಕಟ್ಟುವ ಕೆಲಸ ಮಾಡಿದ್ದು, ಪ್ರಚಾರ ಪಟ್ಟಿಯಿಂದ ನನ್ನನ್ನೇಕೆ ತೆಗೆದು ಬಾಕಿದರು ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ವಿವರಿಸಬೇಕು ಎಂದು ಹೇಳಿದರು.
135 ಶಾಸಕರ ಬೆಂಬಲದೊಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. 2 ಲಕ್ಷ ಮತಗಳಿಂದ ಗೆದ್ದು ಎಚ್ ಡಿ ಕುಮಾರಸ್ವಾಮಿ ಸಂಸದರಾಗಿದ್ದಾರೆ. ಬಿಜೆಪಿಯಿಂದ ಆರ್ ಅಶೋಕ್ ಕೂಡ ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್ ನ ಕೆಲವು ನಾಯಕರು ಹೆಚ್ ಡಿ ಕುಮಾರಸ್ವಾಮಿಯವರ ರಾಜೀನಾಮೆಯನ್ನು ಕೇಳುತ್ತಿದ್ದು, ಬಿಜೆಪಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿದೆ. ಆದರೆ, ನ್ಯಾಯಾಲಯದ ತೀರ್ಪು ನೀಡದ ಹೊರತು ಯಾರೂ ರಾಜೀನಾಮೆ ನೀಡುವ ಅಗತ್ಯವಿಲ್ಲ. ಹಾಗೆ ನೀಡಲೇಬೇಕಾದರೆ ಕೇಂದ್ರ ಹಾಗೂ ರಾಜ್ಯದ ಹಲವು ನಾಯಕರೂ ಕೂಡ ಆರೋಪ ಎದುರಿಸುತ್ತಿದ್ದು, ಎಲ್ಲರೂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಜಿಟಿ ದೇವೇಗೌಡ ಪ್ರಭಾವ ಬಳಸಿ ಸಂಬಂಧಿಯೊಬ್ಬರು ಮುಡಾ ನಿವೇಶನ ಪಡೆದಿದ್ದಾರೆ ಎಂಬ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಒಂದು ಎಕರೆ ಜಮೀನು ಸ್ವಾಧೀನಪಡಿಸಿಕೊಂಡರೆ ಪರಿಹಾರವಾಗಿ ಒಂದು ನಿವೇಶನ ನೀಡಲಾಗುತ್ತದೆ. ಪರಿಹಾರ ನೀಡದಿದ್ದರೆ 50ರ ಅಡಿಯಲ್ಲಿ ನಿವೇಶನ ನೀಡಬೇಕು ಎಂಬುದು ನಿಯಮವಾಗಿದೆ. 50:50 ಅನುಪಾತದ ಅಡಿಯಲ್ಲಿ ಪರಿಹಾರ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೂ ಯಾರೇ ಆದರೂ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
Advertisement