ಮೈಸೂರು: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದು, 'ಕಳ್ಳರು ಕಳ್ಳರು ಒಂದಾಗಿದ್ದಾರೆ' ಎಂದು ವ್ಯಂಗ್ಯ ಮಾಡಿದ್ದಾರೆ.
ಮುಡಾ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಮೈಸೂರಿನಲ್ಲಿ ಹಗರಣದ ಕೇಂದ್ರ ಬಿಂದುವಾಗಿರುವ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಹಂಚಿಕೆ ಮಾಡಲಾಗಿರುವ 14 ಸೈಟ್ ಗಳ ಪರಿಶೀಲನೆ ನಡೆಸಿದರು. ಈ ವೇಳೆ ದೂರುದಾರ ಸ್ನೇಹಮಯಿ ಕೃಷ್ಣ ಕೂಡ ಅಧಿಕಾರಿಗಳ ಸೂಚನೆಯಂತೆ ವಿವಾದಿತ ಸ್ಥಳಕ್ಕೆ ಆಗಮಿಸಿದ್ದರು.
ಈ ವೇಳೆ ಲೋಕಾಯುಕ್ತ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, 'ಜಿಟಿ ದೇವೇಗೌ ಸಹ 50:50 ಅನುಪಾತದ ಫಲಾನುಭವಿಯಾಗಿದ್ದಾರೆ. ಅವರಿಗೂ ತನಿಖೆಯ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಭಯದಿಂದ ಹೀಗೆ ಮಾತನಾಡುತ್ತಿದ್ದಾರೆ. ಮತ್ತೊಂದಿಷ್ಟು ಕಳ್ಳರು ಮುಂದಿನ ದಿನಗಳಲ್ಲಿ ಇದೇ ರೀತಿ ಮಾತಾಡುತ್ತಾರೆ ಎಂದು ಹೇಳಿದರು.
ಅಲ್ಲದೆ ಕಳ್ಳರು ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಜಿಟಿ ದೇವೇಗೌಡ ಕಳೆದ 3 ತಿಂಗಳಿನಿಂದ ಏನು ಮಾಡುತ್ತಿದ್ದರು? ದಸರಾದಂತ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಜಿ.ಟಿ ದೇವೇಗೌಡರ ಅಕ್ರಮ ಇರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಆ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.
ಅಂತೆಯೇ ಕಾಂಗ್ರೆಸ್ ನಾಯಕ ಹೆಚ್.ಸಿ ಮಹದೇವಪ್ಪ ಅವರ ಸಹೋದರನ ಮಗನಿಗೆ ಸೈಟ್ ಕೊಡಲಾಗಿದೆ ಎಂಬ ಮಾಹಿತಿ ಇದೆ. ಮರಿಗೌಡ ಸಹೋದರ ಶಿವಣ್ಣ ಅವರಿಗೆ ಸೇಲ್ ಡೀಡ್ ಮೂಲಕ ಸೈಟ್ ಕೊಡಲಾಗಿದೆ. ಎಲ್ಲದರ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇನೆ. ನಾನು ಕೇವಲ ಸಿದ್ದರಾಮಯ್ಯ ಅಲ್ಲ. ಇಡೀ ಅಕ್ರಮದ ವಿರುದ್ಧ ಹೋರಾಡುವೆ ಎಂದಿದ್ದಾರೆ.
Advertisement