ಹುಬ್ಬಳ್ಳಿ: 50 ಕಾಂಗ್ರೆಸ್ ಶಾಸಕರನ್ನು ತಲಾ 50 ಕೋಟಿ ನೀಡಿ ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವಿಜಯಪುರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿರಾಕರಿಸಿದ್ದು, ಆರೋಪಕ್ಕೆ ಸಾಕ್ಷಿ ಒದಗಿಸಿ ಎಂದು ಆಗ್ರಹಿಸಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಆರೋಪಕ್ಕೆ ಪುರಾವೆ ನೀಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾದ ಯಾವುದೇ ಆಡಿಯೋ, ವಿಡಿಯೋ ಅಥವಾ ಇತರ ಪುರಾವೆಗಳನ್ನು ಸಿಎಂ ಅಡಿಯಲ್ಲಿ ಕಾರ್ಯನಿರ್ವಹಿಸುವ ಗುಪ್ತಚರ ಇಲಾಖೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.
ಆಪರೇಷನ್ ನಮಗೆ ಅವಶ್ಯಕತೆ ಇಲ್ಲ. ವಿರೋಧ ಪಕ್ಷದಲ್ಲೆ ಕೂರುತ್ತೇವೆ. 50-60 ಜನ ತಂದು ಸರ್ಕಾರ ಮಾಡಿದರೆ ನಾವು ಅವರಪ್ಪನಿಗಿಂತ ಭ್ರಷ್ಟರಾಗುತ್ತೇವೆ. ಬೇಕಿದ್ದರೆ ಚುನಾವಣೆಗೆ ಹೋಗುತ್ತೇವೆಯೇ ಹೊರತು ಶಾಸಕರ ಖರೀದಿ ಮಾಡುವುದಿಲ್ಲ. ಒಂದು ವೇಳೆ ಬಿಜೆಪಿಯಲ್ಲಿ ಆಪರೇಷನ್ ಮಾಡುತ್ತಿದ್ದರೂ ಅದಕ್ಕೆ ಬೆಂಬಲ ನೀಡುವುದಿಲ್ಲ. ಜನರ ಮತ್ತು ವಾಲ್ಮೀಕಿ ಹಣ ಲೂಟಿ ಮಾಡಿರುವ ಅಯ್ಯೋಗರ ಜೊತೆಗೆ ನಾವು ಸರ್ಕಾರ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಬಳಿಕ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಾರ್ವಜನಿಕ ಕಾಳಜಿಗಳನ್ನು ತಿಳಿಸುವ ಬದಲು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗೆ ಆದ್ಯತೆ ನೀಡಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಮಾಡಿದಂತೆಯೇ ರಾಜ್ಯವನ್ನು ಲೂಟಿ ಮಾಡಲು ಅವರ ಮಗ ಮುಂದಾಗುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ವಕ್ಫ್ ಬೋರ್ಡ್ ಬಗ್ಗೆ ಕಾಳಜಿ ಇಲ್ಲ. ಮುಡಾ, ವಾಲ್ಮೀಕಿ ಹಗರಣಗಳ ಬಗ್ಗೆ ಕಾಳಜಿ ಇಲ್ಲ. ಅವರ ಕಾಳಜಿ ಸಿಎಂ ಹೇಗೆ ಆಗಬೇಕು? ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕು ಅಂತ ಅಷ್ಟೇ ಎಂದು ಗುಡುಗಿದರು.
ವಕ್ಫ್ ಭೂಮಿ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ಪಕ್ಷವು ಮೂರು ತಂಡಗಳನ್ನು ರಚಿಸಿದೆ. ನಮ್ಮನ್ನು ನೋಡಿ ಅವರು ಮೂರು ತಂಡ ಮಾಡಿದ್ದಾರೆ. ನಾವು ನವೆಂಬರ್ 25 ರಿಂದ ಡಿಸೆಂಬರ್ 25 ರವರೆಗೆ ಪ್ರಚಾರಕ್ಕೆ ಬದ್ಧರಾಗಿದ್ದರೂ ದಿನಾಂಕಗಳನ್ನು ಅಂತಿಮಗೊಳಿಸಲುವಲ್ಲಿ ಪಕ್ಷ ವಿಫಲವಾಗಿದೆ ಎಂದು ಲೇವಡಿ ಮಾಡಿದರು.
Advertisement