ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ; 3 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು ಎಂದು ಸಿಎಂ ವಿಶ್ವಾಸ

ಹರಿಯಾಣದಲ್ಲಿ ಎಕ್ಸಿಟ್‌ಪೋಲ್‌ನಲ್ಲಿ ಏನಾಯಿತು? ಅದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಉಪಚುನಾವಣೆ ಬಗ್ಗೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಖಚಿತ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಇನ್ನು ಗಂಟೆಗಳು ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ, ಈ ನಡುವೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ನಡುವೆ ಸುದ್ದಿಗಾರರೊಂದಿಗೆ ಚುನಾವಣೋತ್ತರ ಸಮೀಕ್ಷೆ ಕುರಿತು ಮಾತನಾಡಿದರು.

ಹರಿಯಾಣದಲ್ಲಿ ಎಕ್ಸಿಟ್‌ಪೋಲ್‌ನಲ್ಲಿ ಏನಾಯಿತು? ಅದನ್ನು ಈಗಲೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಉಪಚುನಾವಣೆ ಬಗ್ಗೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಖಚಿತ ಎಂದು ಹೇಳಿದರು.

ಬಿಪಿಎಲ್ ಕಾರ್ಡ್ ಪರಿಷ್ಕರಣೆ ವಿಚಾರ ಕುರಿತು ಮಾತನಾಡಿ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ನೌಕರರು ಮತ್ತು ತೆರಿಗೆದಾರರನ್ನು ಹೊರತುಪಡಿಸಿ ಯಾರನ್ನೂ ಬಿಪಿಎಲ್ ಕಾರ್ಡ್ ಸೌಲಭ್ಯದಿಂದ ತೆಗೆದುಹಾಕಬಾರದು ಎಂದು ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

CM Siddaramaiah
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಗೆಲ್ಲೋದ್ಯಾರು? ಚುನಾವಣೋತ್ತರ ಸಮೀಕ್ಷೆ ಇಲ್ಲಿದೆ!

ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನಮೋಹನ್‌ ಸಿಂಗ್‌ ಸರಕಾರವೇ ಹೊರತು ಬಿಜೆಪಿಯವರಲ್ಲ. ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ ಅವರು ಮತ ಭದ್ರತಾ ಕಾಯ್ದೆ ಎಂದು ಟೀಕಿಸಿದ್ದರು. ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ 7 ಕೆ.ಜಿ. ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು 5 ಕೆ.ಜಿ.ಗೆ ಇಳಿಸಿದ್ದು ಬಿಜೆಪಿ ಸರ್ಕಾರ. ಆಹಾರ ಭದ್ರತಾ ಕಾಯ್ದೆ ತಂದಿರುವುದೇ ಬಡವರಿಗಾಗಿ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದನ್ನು ಮಾಡಿದ್ದಾರೆಯೇ? ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಎಲ್ಲಿಯಾದರೂ ಜಾರಿಗೊಳಿಸಲಾಗಿದೆಯೇ? ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ನಮ್ಮ ಸರ್ಕಾರ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿತ್ತು, ಅದನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿದವರು ಬಿಎಸ್ ಯಡಿಯೂರಪ್ಪ. ಅವರ ಸಂಪುಟದಲ್ಲಿ ಆರ್.ಅಶೋಕ ಕೂಡ ಇದ್ದರು ಎಂದು ಹೇಳಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗೆ ಹಣವಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾವು 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಬಿಜೆಪಿ ಅಧಿಕಾರದಲ್ಲಿ ಇರುವ ಯಾವ ರಾಜ್ಯದಲ್ಲಿ ಜಾರಿ ಮಾಡಿದೆ? ಗ್ಯಾರಂಟಿ ಯೋಜನೆಗಳಿಗೆ ದುಡ್ಡಿಲ್ಲ ಎಂದವರು ಯಾರು? ನಾವೇನಾದರೂ ಬಿಜೆಪಿಯವರ ಬಳಿ ಸಾಲ ಕೇಳಿದ್ದೇವಾ? ಎಂದು ಪ್ರಶ್ನಿಸಿದರು.

ಬಜೆಟ್‌ನಲ್ಲಿ 1.2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದರಿಂದ ಗ್ಯಾರಂಟಿ ಯೋಜನೆ, ಅಭಿವೃದ್ಧಿಗೆ ಯಾವುದೇ ಪರಿಣಾಮ ಬೀರಿಲ್ಲ ಎಂದರು.

ಕೆಲವು ಕಾಂಗ್ರೆಸ್ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನದ ಕೊರತೆಯಿಂದ ಅಸಮಾಧಾನಗೊಂಡಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶೇಷ ಹಣ ಕೇಳುತ್ತಿದ್ದಾರೆಂದು ಸಮರ್ಥಿಸಿಕೊಂಡರು.

ಬಜೆಟ್ ಹೊರತುಪಡಿಸಿ ಅವರು ಕೇಳಿದ್ದನ್ನು ನಾವು ನೀಡಿದ್ದೇವೆ, ಆದರೆ, ಅವರು ಕೇಳಿದಷ್ಟು ನೀಡಲು ಸಾಧ್ಯವಾಗದಿರಬಹುದು. ಬಿಜೆಪಿ ಆರೋಪಿಸಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಅಥವಾ ಪರಿಷ್ಕರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com