ಬೆಂಗಳೂರು: ಚನ್ನಪಟ್ಟಣದ ರಾಜಕೀಯ ಗೊಂಬೆಯಾಟದ ಕುತೂಹಲಕ್ಕೆ ಶನಿವಾರ ತೆರೆ ಬಿದ್ದಿದ್ದು, 'ಗೊಂಬೆಗಳ ನಾಡು' ಚನ್ನಪಟ್ಟಣದಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಕೈ ಹಿಡಿದಿದ್ದಾರೆ.
ಯೋಗೇಶ್ವರ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು 25,413 ಮತಗಳ ಅಂತರದಿಂದ ಸೋಲಿಸಿದ್ದಾರೆ. ಯೋಗೇಶ್ವರ 1,12,642 ಮತಗಳನ್ನು ಪಡೆದಿದ್ದರೆ, ನಿಖಿಲ್ 87,229 ಮತಗಳನ್ನು ಪಡೆದಿದ್ದಾರೆ.
ಯೋಗೇಶ್ವರ ಅವರ ಈ ಗೆಲುವು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಲ್ಲದೆ, ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕೈಗಳನ್ನೂ ಬಲಪಡಿಸಿದೆ.
ಕ್ಷೇತ್ರ ಕಂಡಿರುವ 19 ಚುನಾವಣೆಗಳಲ್ಲಿ ಮೊದಲ ಬಾರಿಗೆ ಅಭ್ಯರ್ಥಿಯೊಬ್ಬರು ಒಂದು ಲಕ್ಷಕ್ಕೂ ಹೆಚ್ಚು (1,12,642) ಮತಗಳನ್ನು ಪಡೆದು ಜಯಭೇರಿ ಬಾರಿಸಿದ ಕೀರ್ತಿಗೆ ಯೋಗೇಶ್ವರ್ ಪಾತ್ರರಾಗಿದ್ದಾರೆ.
ಕ್ಷೇತ್ರದ ರಾಜಕಾರಣದಲ್ಲಿ 25 ವರ್ಷಗಳಿಂದ ಸಕ್ರಿಯವಾಗಿರುವ ಯೋಗೇಶ್ವರ್ ಅವರು, 16 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಮತ್ತೆ ‘ಕೈ’ ಬಾವುಟ ಹಾರಿಸಿದ್ದಾರೆ. ಕ್ಷೇತ್ರದ ಶಾಸಕನಾಗಿ 6ನೇ ಸಲ ವಿಧಾನಸೌಧ ಪ್ರವೇಶಿಸಲಿದ್ದಾರೆ.
ಯೋಗೇಶ್ವರ್ ಅವರು ಅಭಿವೃದ್ಧಿ ಮಂತ್ರ ಪಠಿಸುವ ಮೂಲಕ ಮತದಾರರನ್ನು ಸೆಳೆದಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಾತಿ ಅಡೆತಡೆಗಳ ಮುರಿದು ಗೆಲ್ಲುವ ಕುದುರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿಖಿಲ್ ಅವರಿಗೆ ಇದು ಸತತ ಮೂರನೇ ಸೋಲಾಗಿದೆ.
ಯೋಗೇಶ್ವರ ಅವರು ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷ ಬದಲಾಯಿಸಿರಬಹುದು, ಆದರೆ ಪ್ರಚಾರದುದ್ದಕ್ಕೂ, ಅವರು ಶಾಸಕ ಮತ್ತು ಸಚಿವರಾಗಿದ್ದ ಅವಧಿಯಲ್ಲಿ ಚನ್ನಪಟ್ಟಣದಲ್ಲಿ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿದರು. ಇದರಿಂದ ದ್ವೇಷ ರಾಜಕಾರಣಗಳಿಗಿಂತಲೂ ಅಭಿವೃದ್ಧಿಗೆ ಮತ ಸಿಗಲಿದೆ ಎಂದು ಉಪಚುನಾವಣೆಯಿಂದ ಸಾಬೀತಾಗಿದೆ.
ಇನ್ನು ಜಿಲ್ಲೆಯಲ್ಲಿ 1985ರಿಂದ 39 ವರ್ಷ ತಮ್ಮ ಹಿಡಿತ ಹೊಂದಿದ್ದ ದೇವೇಗೌಡರ ಕುಟುಂಬದ ಶಾಸನಸಭೆಯ ಪ್ರಾತಿನಿಧ್ಯ ಮೊದಲ ಬಾರಿಗೆ ಶೂನ್ಯಕ್ಕಿಳಿದಿದೆ. ತಮ್ಮ ಕುಟುಂಬದವರನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗೇರಿಸಿದ್ದ ಜಿಲ್ಲೆಯಲ್ಲಿ ಪುತ್ರನಿಗೆ ರಾಜಕೀಯ ಜನ್ಮ ಕೊಡಿಸಲು ಕುಮಾರಸ್ವಾಮಿ ನಡೆಸಿದ ಹೋರಾಟ ಫಲ ಕೊಟ್ಟಿಲ್ಲ. ಇಳಿ ವಯಸ್ಸಿನಲ್ಲೂ ಮೊಮ್ಮಗನ ಗೆಲುವಿಗಾಗಿ ದೇವೇಗೌಡರು ಹಾಕಿದ ಶ್ರಮ ವ್ಯರ್ಥವಾಗಿದೆ. ಕ್ಷೇತ್ರದಲ್ಲಿ ಗೌಡರ ಕುಟುಂಬ ರಾಜಕಾರಣದ ಬದಲು ಸ್ಥಳೀಯ ನಾಯಕತ್ವಕ್ಕೆ ಮತದಾರರು ಸೈ ಎಂದಿದ್ದಾರೆ.
ಯೋಗೇಶ್ವರ್, ಡಿ.ಕೆ ಸಹೋದರರು ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡಿದ ವೈಯಕ್ತಿಕ ಮಟ್ಟದ ಟೀಕೆಗಳನ್ನು ಗೌಡರ ಕುಟುಂಬ ಪ್ರಚಾರದ ಅಸ್ತ್ರ ಮಾಡಿಕೊಂಡರೂ ಮತಗಳ ಫಸಲು ಬಂದಿಲ್ಲ. ಪ್ರಚಾರದ ಕಡೆಯಲ್ಲಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಆಡಿದ ಮಾತುಗಳು, ಒಕ್ಕಲಿಗ ಮತ್ತು ಹಿಂದೂ ಮತಗಳನ್ನು ನಿಖಿಲ್ ಪರ ಕ್ರೋಡೀಕರಿಸಲಿವೆ ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ವಕ್ಫ್ ವಿಷಯವನ್ನು ಮತದಾರರ ಮೇಲೆ ಪರಿಣಾಮ ಬೀರಿಲ್ಲ.
ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಯೋಗೇಶ್ವರ್ ಅವರು, ನನ್ನ ತಂಡ ಮತ್ತು ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿದೆ. ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಆಭಾರಿಯಾಗಿದ್ದೇನೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಸೋಲು ಕಾಣುವಂತೆ ಮಾಡಿದ್ದ ಡಿಕೆ.ಸುರೇಶ್ ಅವರು ಇಂದು ನನಗೆ ಸಹಾಯ ಮಾಡಿದ್ದಾರೆಂದು ಹೇಳಿದ್ದು, ಭವಿಷ್ಯದಲ್ಲಿ ಅವರಿಗೆ ಸಾಥ್ ನೀಡುತ್ತೇನೆಂದು ಪರೋಕ್ಷವಾಗಿ ಹೇಳಿದ್ದಾರೆ.
ಕೇಂದ್ರ ಸಚಿವರಾಗಲು ಕುಮಾರಸ್ವಾಮಿಯವರು ತಮ್ಮ ಮಗನನ್ನು ಬಲಿಪಶು ಮಾಡಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನ್ನನ್ನು ಎನ್‌ಡಿಎಯಿಂದ ಹೊರ ಹಾಕಲು ಪಿತೂರಿ ನಡೆಸಿದ್ದರು, ಆದರೆ, ನಾನು ಈ ಹಿಂದೆ ಅವರಿಗೆ ಸಹಾಯ ಮಾಡಿದ್ದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಇದು ನಿಖಿಲ್ ಅವರ ರಾಜಕೀಯ ಜೀವನಕ್ಕೆ ಅಪಾಯ ತಂದೊಡ್ಡಿದೆ. ಜೆಡಿಎಸ್ ಇಂದು ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂದು ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಯವರು ಮಾತನಾಡಿ, ಒಂದು ನಿರ್ದಿಷ್ಟ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಹೆಚ್ಚಾಗಿ ಹೋಗಿರುವುದು ಸ್ಪಷ್ಟವಾಗಿದೆ, ಜೆಡಿಎಸ್ ಯಾವಾಗಲೂ ಆ ಸಮುದಾಯದ ಕಲ್ಯಾಣಕ್ಕಾಗಿ ನಿಂತಿತ್ತು. ದೇವೇಗೌಡರು ಅವರಿಗೆ ಮೀಸಲಾತಿಯನ್ನು ನೀಡಿದ್ದರು, ನಮ್ಮ ಪಕ್ಷ ಕೊಡುಗೆ ನೀಡಿದರೂ ಅವರು ನಮಗೆ ಮತ ಹಾಕಲಿಲ್ಲ. ನಾನು ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ಮಾಜಿ ಡಿಸಿಎಂ ಹಾಗೂ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು, ಯೋಗೇಶ್ವರ್ ಗೆಲುವಿಗೆ ಕಾರಣ ಅವರ ಸ್ವಂತ ಶಕ್ತಿಯೇ ಹೊರತು ಕಾಂಗ್ರೆಸ್ ಜನಪ್ರಿಯತೆಗೆ ಅಲ್ಲ ಎಂದು ಹೇಳಿದ್ದಾರೆ.
Advertisement