ಹಣ, ಹೆಂಡ ಹಂಚಿಕೆಯಲ್ಲಿ BJPಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಬಿಕೆ ಹರಿಪ್ರಸಾದ್ ಹೇಳಿಕೆ ಚರ್ಚೆಗೆ ಗ್ರಾಸ!

ನಮ್ಮ ಪಕ್ಷ ಹಣ ಖರ್ಚು ಮಾಡಿಲ್ಲ ಎಂಬುದನ್ನು ಅಲ್ಲಗಳೆಯುವುದಿಲ್ಲ, ಎಲ್ಲ ಪಕ್ಷಗಳೂ ಮಾಡಿದೆ. ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದೇವೆ.
ಬಿಕೆ ಹರಿಪ್ರಸಾದ್
ಬಿಕೆ ಹರಿಪ್ರಸಾದ್
Updated on

ಮಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮೂರು ಉಪಚುನಾವಣೆಗಳಲ್ಲಿ ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದು, ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಉಪಚುನಾವಣೆ ಗೆಲ್ಲಲು ಆಡಳಿತಾರೂಢ ಕಾಂಗ್ರೆಸ್‌ ಹಣದ ಹೊಳೆ ಹರಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್‌ ಅವರು, ನಮ್ಮ ಪಕ್ಷ ಹಣ ಖರ್ಚು ಮಾಡಿಲ್ಲ ಎಂಬುದನ್ನು ಅಲ್ಲಗಳೆಯುವುದಿಲ್ಲ, ಎಲ್ಲ ಪಕ್ಷಗಳೂ ಮಾಡಿದೆ ಎಂದು ಹೇಳಿದರು.

ಬೇರೆ ಬೇರೆ ರಾಜ್ಯದ ಚುನಾವಣಾ ಫಲಿತಾಂಶ ನೋಡಿದಾಗ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿ ಮಾಡಿದೆ. ಬಿಜೆಪಿ ಚುನಾವಣೆ ಮೊದಲು ಸುಳ್ಳು ವದಂತಿ ಹಬ್ಬಿಸಿದರು. ಗ್ಯಾರಂಟಿ, ವಕ್ಫ್ ವಿಚಾರ ಮಾಡಿ ಅಪಪ್ರಚಾರ ನಡೆಸಿದರು. ಚುನಾವಣೆಗಾಗಿ ಇ.ಡಿ ಬಳಸಿಕೊಂಡರು. ಜಾರ್ಖಂಡ್‌ನಲ್ಲಿ ಉತ್ತಮ ಗೆಲುವು ಸಿಕ್ಕಿದೆ. ಬಿಜೆಪಿ ನುಸುಳುಕೋರರ ಬಗ್ಗೆ ಅಪಪ್ರಚಾರ ನಡೆಸಿದರು. ನುಸುಳುಕೋರರು ಬಂದಿದ್ದಾರೆ ಎಂದು ಬಿಜೆಪಿ ಸುಳ್ಳು ಹೇಳಿ ಸೈನಿಕರಿಗೆ ಅವಮಾನ ಮಾಡಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಂಟೇನರ್‌ನಲ್ಲಿ ದುಡ್ಡು ಬಂದಿದೆ. ನೋಟ್ ಎಣಿಸೋ ಮಷಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ. ಕರ್ನಾಟಕದಲ್ಲೂ ದುಡ್ಡು ಖರ್ಚು ಮಾಡಿದರು, ಆದರೆ, ಜನ ಅದನ್ನು ತಿರಸ್ಕರಿಸಿದರು. ಕರ್ನಾಟಕದಲ್ಲಿ ಎಲ್ಲೂ ಸಹ ಕೋಮು ಸೌಹಾರ್ದ ಕದಡಲು ಅವಕಾಶ ನೀಡಿಲ್ಲ. ಕರ್ನಾಟಕದಲ್ಲಿ ಹಣ, ಹೆಂಡದಲ್ಲಿ ನಾವು ಕೂಡ ಬಿಜೆಪಿಗೆ ಪೈಪೋಟಿ ನೀಡಿದ್ದೇವೆ ಎಂದು ತಿಳಿಸಿದರು.

ಬಿಕೆ ಹರಿಪ್ರಸಾದ್
ಜಾತ್ಯಾತೀತ ಎಂದು ಹೇಳುವಾಗ 'ಜಾತಿ ಗಣತಿ' ಅಗತ್ಯ ಏನಿದೆ?; ಹರಿಪ್ರಸಾದ್ 'ಪುಡಿ ರೌಡಿ' ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು

ನಾವೇನು ಸನ್ಯಾಸಿ ಅಲ್ಲ, ನಾವು ಕೂಡ ಅವರಿಗೆ ಸರಿಯಾಗಿ ಖರ್ಚು ಮಾಡಿದ್ದೇವೆ. ಶಿಗ್ಗಾಂವಿಯಲ್ಲಿ ನಾವು ಕೊಟ್ಟಿರುವ ಕಾರ್ಯಕ್ರಮ ಗೆಲ್ಲಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಏನೇನೋ ಹೇಳಿ ನಂಬಿಸಲು ಪ್ರಯತ್ನ ಮಾಡುತ್ತಿದ್ದರು. ಕಾಂಗ್ರೆಸ್‌ಗಿಂತ ಡಬಲ್ ಕುಟುಂಬ ರಾಜಕಾರಣ ಇರೋದು ಬಿಜೆಪಿಯಲ್ಲಿ. ಒಂದೊಂದು ಕುಟುಂಬದಲ್ಲಿ ಹತ್ತತ್ತು ಜನ ರಾಜಕಾರಣದಲ್ಲಿ ಇದ್ದಾರೆ. ಸುಮ್ಮನೆ ಗೂಬೆ ಕೂರಿಸೋದು ಕಾಂಗ್ರೆಸ್‌ ಮೇಲೆ. ಅವರ ತಟ್ಟೆಯಲ್ಲಿ ಇರುವ ಹೆಗ್ಗಣ ನೋಡದೆ, ನಮ್ಮ ತಟ್ಟೆಯ ನೋಣ ನೋಡುತ್ತಿದ್ದಾರೆ. ನಾವು ಗೂಬೆ ಅಲ್ಲ ಅಂತ ಬಿಜೆಪಿಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ಕರ್ನಾಟಕದಲ್ಲಿ ಇ.ಡಿ, ಐ.ಟಿ ಉಪಯೋಗಿಸಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡಿದೆ. ಮಾಧ್ಯಮದವರು ಎರಡೂವರೆ ವರ್ಷದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಹೇಳುತ್ತಿದ್ದರು. ಸಿದ್ದರಾಮಯ್ಯ ಸಿಎಂ ಬದಲಾಗುತ್ತಾರೆ ಎಂದು ಕೆಲವರು ತಿರುಕನ ಕನಸು ಕಾಣುತ್ತಿದ್ದರು. ಅಪ್ಪನ ತೆಕ್ಕೆಯಲ್ಲಿ ಬೆಳೆದವರು ಹೇಳಿದ ಹಾಗೆ ಆಗುವುದಿಲ್ಲ. ಯಡಿಯೂರಪ್ಪನವರ ಸಹಿ ಮಾಡಿದ ಹಾಗೆ ಅಲ್ಲ ಸಿಎಂ ಬದಲಾವಣೆ ಎಂದು ಹೇಳಿದರು.

ದಲಿತರು, ಅಲ್ಪಸಂಖ್ಯಾತರು ಮತ್ತು ಮರಾಠರು ಗಣನೀಯ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತದಾನ ಮುಗಿದ ಬಳಿಕವೂ ಆ ರಾಜ್ಯದಲ್ಲಿ ಶೇ.15ರಷ್ಟು ಮತದಾನ ಹೆಚ್ಚಳವಾಗಿದೆ, ಕಂಟೈನರ್‌ಗಳಲ್ಲಿ ಹಣ ಸಾಗಿಸಲಾಗಿದೆ. ಮಹಾರಾಷ್ಟ್ರದ ಬಿಜೆಪಿ ಜೊತೆಗೆ ಭಾರತ ಚುನಾವಣಾ ಆಯೋಗ ಕೈಜೋಡಿಸಿದೆ ಎಂದು ಆರೋಪಿಸಿದರು.

ಪಕ್ಷದ ಏಳು ಗ್ಯಾರಂಟಿಗಳು ಜನರು ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಸರ್ಕಾರವನ್ನು ಬೆಂಬಲಿಸಲು ಕಾರಣವಾಗಿವೆ. ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಇದು ಸಹಾಯ ಮಾಡಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com