ಕಾಂಗ್ರೆಸ್ಗೆ ಮಾತ್ರ ಭವಿಷ್ಯ ಎಂದು BJP-JDS ಕಾರ್ಯಕರ್ತರು ನಂಬಿದ್ದಾರೆ: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅರಿವಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸೋಮವಾರ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಎನ್'ಡಿಎ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ಈ ಉಪಚುನಾವಣೆಯೇ ಸಾಕ್ಷಿ. ಕಳೆದ ವಿಧಾನಸಭಾ ಚುನಾವಣೆ ಮತ್ತು ಇತ್ತೀಚಿನ ಉಪಚುನಾವಣೆಯಲ್ಲಿನ ಮತದಾನದ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ 15 ಸಾವಿರ ಮತ ಗಳಿಸಿದ್ದರು. ಆದರೆ, ಈ ಬಾರಿ 1.12 ಲಕ್ಷ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮತದಾರರ ಬೆಂಬಲವಿಲ್ಲದೆ ಇಂತಹ ಬದಲಾವಣೆ ಹೇಗೆ ಸಾಧ್ಯ? ಎಂದು ಹೇಳಿದರು.
ವಕ್ಫ್ ವಿಚಾರದಲ್ಲಿ ಬಿಜೆಪಿಯ ಪ್ರತಿಭಟನೆ ಕುರಿತು ಮಾತನಾಡಿ, ಆ ಪಕ್ಷವು ಪ್ರಚಾರವನ್ನು ಮಾತ್ರ ಬಯಸುತ್ತದೆ. ಅವರು ಎಷ್ಟು ಹೆಚ್ಚು ಪ್ರತಿಭಟಿಸುತ್ತಾರೋ ಅಷ್ಟು ನಮಗೇ ಲಾಭ. ಏಕೆಂದರೆ ನಾವು ಅವರ ಮನಸ್ಥಿತಿಯನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತದೆ. ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ಮುಚ್ಚಿಹಾಕಲು ಬಿಜೆಪಿ ಈ ರೀತಿ ಮಾಡುತ್ತಿದೆ. ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ಹಿರಿಯ ನಾಯಕರು. (ಜೆಡಿಎಸ್) ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಅವರು ಜೆಡಿಎಸ್‌ಗೆ ಗಣನೀಯ ಕೊಡುಗೆ ನೀಡಿದ್ದಾರೆ. ನಾವು ಅವರಿಗೆ ಆಹ್ವಾನ ನೀಡಿದ್ದೆವು, ಆದರೆ, ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಪ್ರಸ್ತಾಪವನ್ನು ನೀಡಿದ್ದರಿಂದ ಅವರು ಬರಲಿಲ್ಲ. ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅವರು ಮನನೊಂದಿದ್ದಾರೆ ಎಂದರು.