ಬೆಂಗಳೂರು: ಸೋಲಿಗೆ ಎದೆಗುಂದಬೇಡಿ. ದುರ್ಮಾರ್ಗಗಳನ್ನು ಬಳಸಿ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ. ಈ ನಿಟ್ಟಿನಲ್ಲಿ ಈ ಚುನಾವಣೆಯ ಅಪಜಯವನ್ನು ನಾವ್ಯಾರೂ ಹಿನ್ನಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಈ ಸಂಬಂಧ ಅವರು ಸಾಮಾಜಿಕ ಜಾಲತಾಣದ ಮೂಲಕ 'ಸಹೃದಯ ಕಾರ್ಯಕರ್ತ ಬಂಧುಗಳೇ' ಎಂದು ಸಂಬೋಧಿಸಿ ಸುದೀರ್ಘ ಬಹಿರಂಗ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?...
ಸಹೃದಯ ಕಾರ್ಯಕರ್ತ ಬಂಧುಗಳೇ, ಉಪ ಚುನಾವಣೆ ಫಲಿತಾಂಶಗಳು ಪಕ್ಷ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿ ಈ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ. ಸದ್ಯ ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಎರಡು ಕ್ಷೇತ್ರಗಳಲ್ಲಿ, ಮಿತ್ರ ಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಪರಾಜಯಗೊಂಡಿರುವ ಕಾರಣದಿಂದ ನಾವ್ಯಾರೂ ಎದೆಗುಂದಬೇಕಿಲ್ಲ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್‌ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎಂಬುದು ನಿಸ್ಸಂಶಯ, ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ, ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ.
ಭಾರತೀಯ ಜನತಾ ಪಾರ್ಟಿ ಅಧಿಕಾರದ ಬೆನ್ನು ಹತ್ತಿ ರಾಜಕಾರಣ ಮಾಡುವುದಕ್ಕಾಗಿ ಜನ್ಮತಾಳಿದ್ದಲ್ಲ. ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಯ ಪ್ರತಿ ಹಂತವೂ ಚಾರಿತ್ರಿಕ ದಾಖಲೆಗಳಾಗಿವೆ. ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಹೆಮ್ಮೆಪಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹೆಬ್ಬಾಗಿಲು ತೆರೆದು ಕೊಟ್ಟ ರಾಜ್ಯ 'ಕರ್ನಾಟಕ'ಎಂಬ ಹೆಗ್ಗಳಿಕೆ ನಮ್ಮದಾಗಿದೆ.
ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದೊಂದಿಗೆ ಹತ್ತು ಹಲವು ಹಗರಣಗಳಲ್ಲಿ ಸಿಲುಕಿಕೊಂಡು ರಾಜ್ಯದ ಗೌರವ ಹಾಗೂ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗುವಂತಾಗಲು ಕಾರಣವಾಗಿದೆ. ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬ್ಯಾಂಕಿನ ಖಾತೆಗೆ ಖನ್ನ ಹಾಕಿ ಲಪಟಾಯಿಸಿದ ಪ್ರಕರಣವೂ ದೇಶದ ಇತಿಹಾಸದಲ್ಲಿಯೇ ಮೊದಲು. ವಕ್ಫ್ ಕಾಯ್ದೆ ಹೆಸರಿನಲ್ಲಿ ರೈತರು, ಮಠಮಾನ್ಯಗಳು ಹಾಗೂ ದೇವಸ್ಥಾನಗಳ ಆಸ್ತಿ ಆಕ್ರಮಿಸಲು ಕಠೋರ ನಿಲುವಿನ ಅಸ್ತ್ರ ಬಳಸಿದ್ದು ಇದೇ ಮೊದಲು.
ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಕಡು ಬಡವರ ಅನ್ನದ ತಟ್ಟೆಯನ್ನು ನಿರ್ದಯವಾಗಿ ಈ ಸರ್ಕಾರ ಕಿತ್ತುಕೊಳ್ಳಲು ಹೊರಟಿದ್ದೇಕೆ?. ತಾವು ತಪ್ಪೇ ಮಾಡದಿದ್ದರೆ, ಅಕ್ರಮವಾಗಿ ನಿವೇಶನಗಳನ್ನು ಪಡೆಯದಿದ್ದರೆ 14 ನಿವೇಶನಗಳನ್ನು ಮುಡಾಗೆ ಒಪ್ಪಿಸಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಇಂದಿಗೂ ಜೀವಂತ. ಕಾನೂನು ವ್ಯವಸ್ಥೆಯಲ್ಲಿ ಇದು ತಾರ್ಕಿಕ ಅಂತ್ಯ ಕಾಣುವವರೆಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕೆಲವು ಮಂತ್ರಿಗಳು ಪ್ರಾಮಾಣಿಕತೆಯ ಮಾತನಾಡುವ ನೈತಿಕತೆ ಹೊಂದಲು ಸಾಧ್ಯವೇ ಇಲ್ಲ. ಹಣ ಬಲ, ಅಧಿಕಾರ ಬಲದ ಜೊತೆಗೆ ಚುನಾವಣೆಯ ಹಿಂದಿನ ದಿನವನ್ನು ಗುರಿಯನ್ನಾಗಿಸಿಕೊಂಡು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮತದಾರರ ಖಾತೆಗೆ ಹಾಕಿದ್ದು ಚುನಾವಣೆಯ ಅನೈತಿಕತೆಯಲ್ಲದೇ ಮತ್ತಿನ್ನೇನು?. ದುರ್ಮಾರ್ಗಗಳನ್ನು ಬಳಸಿ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ, ಈ ನಿಟ್ಟಿನಲ್ಲಿ ಈ ಚುನಾವಣೆಯ ಅಪಜಯವನ್ನು ನಾವ್ಯಾರೂ ಹಿನ್ನೆಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಇದೇ ಕಾಂಗ್ರೆಸ್ ಪಕ್ಷ ತನ್ನ ಆಡಳಿತ ಅವಧಿಯಲ್ಲಿ ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಗೆದ್ದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಏಕೆ ಧೂಳಿಪಟವಾಯಿತು ಎಂಬ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿರಬೇಕಾಗಿದೆ. ತಮ್ಮ ಭ್ರಷ್ಟತೆಯ ಕರಾಳ ಮುಖ ಒರೆಸಿಕೊಳ್ಳಲು ಈ ಫಲಿತಾಂಶ ಯಾವುದೇ ಕಾರಣಕ್ಕೂ ವಸ್ತ್ರವೂ ಆಗುವುದಿಲ್ಲ, ಅಸ್ತ್ರವೂ ಆಗುವುದಿಲ್ಲ.
ಈ ಸರ್ಕಾರದ ಉಳಿದಿರುವ ಅವಧಿಯನ್ನು ಗಮನಿಸಿಯೂ ಜನರು ಕೆಲವು ನಿರೀಕ್ಷೆಗಳೊಂದಿಗೆ ಈ ಉಪ ಚುನಾವಣೆಯಲ್ಲಿ ಮತ ನೀಡಿರುವ ಸಾಧ್ಯತೆಯನ್ನೂ ನಾವು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರು ಉಪ ಚುನಾವಣೆಯ ಗೆಲುವಿಗಾಗಿ ತಮ್ಮ ಬೆನ್ನು ತಟ್ಟಿಕೊಂಡು ಸಂಭ್ರಮಿಸಬೇಕಾಗಿಲ್ಲ, ಅವರ ಮುಂದೆ ದೊಡ್ಡ ಜವಾಬ್ದಾರಿಯಿದೆ, ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಹಾದಿಯಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ತಮ್ಮ ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ನಿರ್ವಹಿಸಲಾಗದ ಸ್ಥಿತಿಯನ್ನು ಸರಿದೂಗಿಸಿಕೊಳ್ಳಲು ಇತರ ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕಿದ್ದಾರೆ. ಹತ್ತು ಹಲವು ಇಲಾಖೆಗಳು ಕೆಲಸವಿಲ್ಲದೇ ನಿಂತಲ್ಲೇ ನಿಂತಿವೆ. ಯುವಕರಿಗಾಗಿ ಉದ್ಯೋಗ ಸೃಷ್ಟಿಯಾಗಿಲ್ಲ, ರೈತರಿಗಾಗಿ ಯಾವುದೇ ಹೊಸ ನೀರಾವರಿ ಯೋಜನೆ ಆರಂಭವಾಗಲಿಲ್ಲ, ಮಹಿಳಾ ಉದ್ಯೋಗಕ್ಕಾಗಿ ಕಾರ್ಯಕ್ರಮ ರೂಪಿಸಲಿಲ್ಲ, ಶಿಕ್ಷಣ ಸುಧಾರಣೆಗಾಗಿ ಕನಿಷ್ಟ ಕಾರ್ಯಕ್ರಮವನ್ನೂ ರೂಪಿಸಲಿಲ್ಲ.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಹಾಗೂ ಹಿಂದುಳಿದವರು, ಅತೀ ಹಿಂದುಳಿದವರು, ಆದಿವಾಸಿಗಳು ಹಾಗೂ ಅಲೆಮಾರಿ ಸಮುದಾಯಗಳ ವಿವಿಧ ಅಭಿವೃದ್ಧಿ ನಿಗಮಗಳ ಚಟುವಟಿಕೆಗಳಿಗೆ ಕನಿಷ್ಟ ಅನುದಾನವನ್ನೂ ನೀಡಲಿಲ್ಲ. ಇಷ್ಟಾಗಿಯೂ ಮೂರು ಉಪಚುನಾವಣೆಯ ಫಲಿತಾಂಶ ತಮ್ಮ ಸಾಧನೆ ಎಂದು ಬೀಗುತ್ತಿರುವ ಕಾಂಗ್ರೆಸ್ಸಿಗರು ಯಾವ ನೈತಿಕತೆಯಿಂದ ಈ ಜಯವನ್ನು ಸಂಭ್ರಮಿಸುತ್ತಾರೆಂದು ಈ ರಾಜ್ಯದ ಜನತೆಗೆ ತಿಳಿಸಬೇಕಿದೆ.
ನಮ್ಮ ಭಾರತೀಯ ಜನತಾ ಪಾರ್ಟಿಯಲ್ಲಿ ಅಭಿಪ್ರಾಯ ಭೇದಗಳಿಗೆ ಮುಕ್ತ ಅವಕಾಶ ಇದ್ದೇ ಇದೆ, ಅದೇ ರೀತಿಯಲ್ಲಿ ಶಿಸ್ತು, ಸಂಯಮಗಳು ಎಲ್ಲೆ ಮೀರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ನಮ್ಮಲ್ಲಿದೆ. ಈ ಕ್ಷಣಕೂ ಪ್ರತಿಯೊಬ್ಬ ಕಾರ್ಯಕರ್ತರು, ಪ್ರಮುಖರು ಹಾಗೂ ಹಿರಿಯರೊಂದಿಗೆ ವಿಶ್ವಾಸ, ಪ್ರೀತಿಯನ್ನು ಬೆಳೆಸಿಳಿಸಿಕೊಂಡು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಹಂಬಲ ಹಾಗೂ ಸಂಕಲ್ಪ ನನ್ನದಾಗಿದೆ. ಕಾರ್ಯಕರ್ತರಲ್ಲಿ ವಿನಮ್ರ ವಿನಂತಿ ಏನೆಂದರೆ ರಾಜ್ಯದ ಉಪಚುನಾವಣೆಯ ಫಲಿತಾಂಶದ ಪರಿಣಾಮ ನಮ್ಮ ಸಂಘಟನೆಯ ಮೇಲೆ ಯಾವ ಪ್ರಭಾವವನ್ನೂ ಬೀರಲು ಸಾಧ್ಯವಿಲ್ಲ. ಇದನ್ನು ಸಂಪೂರ್ಣವಾಗಿ ಉಪೇಕ್ಷಿಸೋಣ.
ಪಕ್ಕದ ಮಹಾರಾಷ್ಟ್ರದ ಐತಿಹಾಸಿಕ ಮಹಾ ವಿಜಯವನ್ನು ನಾವು ಪ್ರೇರಣೆಯಾಗಿ ಸ್ವೀಕರಿಸಿ, ಭವಿಷ್ಯದ ದಿನಗಳಲ್ಲಿ ಒಂದು ದಿನವೂ ವ್ಯಯ ಮಾಡದೇ ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿಯ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಕಲ್ಪ ತೊಡೋಣ. ಮುಂದೆಯೂ ಮಿತ್ರ ಪಕ್ಷ ಜೆಡಿಎಸ್ ಜತೆಗೆ ಸಹಕಾರದ ಹೆಜ್ಜೆಗಳನ್ನು ಇಡೋಣ. ನಮ್ಮಗುರಿ ಏನಿದ್ದರೂ ಸಂಘಟನೆ ಜತೆಗೆ ಕಾಂಗ್ರೆಸ್ ಸರ್ಕಾರದ ಬಹುಸಂಖ್ಯಾತ ಜನರ ವಿರೋಧಿ ಧೋರಣೆ ಹಾಗೂ ಭ್ರಷ್ಟ ಆಡಳಿತವನ್ನು ಕೊನೆಗಾಣಿಸುವುದಕ್ಕಾಗಿ ಎಂಬ ಶಪಥ ಮಾಡೋಣ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು 'ನಂಬರ್ -1 ಸ್ಥಾನದಲ್ಲಿ ಕಾಣುವ ಮಹಾಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಅವರ ಹಾದಿಯಲ್ಲಿ ಸದೃಢ ಮನಸ್ಸಿನಿಂದ ಸಾಗೋಣ. ಭಾರತೀಯ ಜನತಾ ಪಾರ್ಟಿಯ ಸುಭದ್ರ ಕೋಟೆಯ ನಡುವೆ ಬಿರುಕು ಮೂಡಿಸಲು ಯತ್ನಿಸುವ ಶಕ್ತಿಗಳನ್ನು ಮೆಟ್ಟಿನಿಂತು ನಮ್ಮೆಲ್ಲರ 'ಒಗ್ಗಟ್ಟಿನ ಮುಷ್ಠಿ ದೇಶ ಕಟ್ಟುವ ಶಕ್ತಿಯಾಗಲೆಂದು ನಿಮ್ಮೆಲ್ಲರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಭಿನ್ನವಿಸಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಪ್ರಮುಖರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಸಂಘಟನೆಯನ್ನು ಬಲವೃದ್ಧಿಗೊಳಿಸೋಣ. ಬದ್ಧತೆ-ಅಚಲತೆ, ಸಫಲತೆಯ ಪ್ರತೀಕ ಗುರಿಯಿಟ್ಟು - ಛಲ ಹೊತ್ತು, ಧೈಯ ಮಾರ್ಗದಲ್ಲಿ ಸಾಗೋಣ ಎಂದು ಕರೆ ನೀಡಿದ್ದಾರೆ.
Advertisement