ನಿಖಿಲ್ ಸೋಲು: JDS ಕಿತ್ತೊಗೆಯುವ ಸಿದ್ದು ರಣತಂತ್ರಕ್ಕೆ ಮತ್ತಷ್ಟು ಪುಷ್ಠಿ?

ಸಿದ್ದರಾಮಯ್ಯ ಅವರು ದೇವೇಗೌಡರ ಭದ್ರಕೋಟೆ ಎಂದೇ ಹೇಳಲಾಗುವ ಹಾಸನದಲ್ಲಿ ಡಿಸೆಂಬರ್ 5 ರಂದು ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಹಾಗೂ ದೇವೇಗೌಡ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಹಾಗೂ ದೇವೇಗೌಡ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯದಲ್ಲಿ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಣಣ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರೂ ಕೂಡ ರಾಜ್ಯ ಹಾಗೂ ದೇಶದ ಗಮನಸೆಳೆದಿದ್ದು ಮಾತ್ರ ಚನ್ನಪಟ್ಟಣ ಉಪಚುನಾವಣೆ. ಅದಕ್ಕೆ ಹಲವು ಕಾರಣಗಳಿವೆ. ಅದರಲ್ಲೂ ವಿಶೇಷವಾಗಿ ಈ ಚುನಾವಣೆಯನ್ನು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಸಮರ ಎಂದೇ ಬಿಂಬಿಸಲಾಗಿತ್ತು. ಸದ್ಯ, ಚನ್ನಪಟ್ಟಣ ಪ್ರತಿಷ್ಠೆಯ ಕಣದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ನಿಖಿಲ್ ಕುಮಾರಸ್ವಾಮಿ ಅವರು ಸತತ ಮೂರನೇ ಬಾರಿಗೆ ಸೋಲು ಕಂಡಿದ್ದಾರೆ.

ಈ ಮೂಲಕ ಜೆಡಿಎಸ್ ಕಿತ್ತೊಗೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಣತಂತ್ರಕ್ಕೆ ನಿಖಿಲ್ ಕುಮಾರ್ ಅವರ ಸೋಲು ಉತ್ತೇಜನ ನೀಡಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಚನ್ನಪಟ್ಟಣ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಬ್ಬೇ ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸುತ್ತಾರೆ. ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪುಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ. ಬುದ್ದಿವಂತ ಒಕ್ಕಲಿಗರು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ. ಆದರೆ, ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ. ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಸಿದ್ದೀನಿ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು ಇನ್ನು ಯೋಗೇಶ್ವರ್ ಅವರನ್ನು ಸಹಿಸ್ತಾರಾ ಎಂದು ಹೇಳಿದ್ದರ. ಅಲ್ಲದೆ, ದೇವೇಗೌಡ ಅವರು ಒಕ್ಕಲಿಗರ ಪರಮೋಚ್ಚ ನಾಯಕರಲ್ಲ ಎಂದೂ ಹೇಳಿದ್ದರು.

ದೇವೇಗೌಡರ ಕುಟುಂಬದ ವಿರುದ್ಧದ ಸಿದ್ದರಾಮಯ್ಯ ಅವರ ಈ ಸಮರಕ್ಕೆ ಚುನಾವಣೆ ವೇಳೆ ಈ ಭಾಗದಲ್ಲಿರುವ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ನಾಯಕರು ಮತ್ತು ಜೆಡಿಎಸ್ ಪಕ್ಷದ ಮೇಲೆ ಬಂಡಾಯ ಎದ್ದಿರುವ ನಾಯಕರೂ ಕೂಡ ಕೈಜೋಡಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಸಿದ್ದರಾಮಯ್ಯ ಹಾಗೂ ದೇವೇಗೌಡ (ಸಂಗ್ರಹ ಚಿತ್ರ)
ಚುನಾವಣೆಯಲ್ಲಿ ಸೋತಿದ್ದಾನೆ ಹೊರತು ಮನುಷ್ಯನಾಗಿ ಅಲ್ಲ: ನಿಖಿಲ್ ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ ಅನಿತಾ ಕುಮಾರಸ್ವಾಮಿ ಪೋಸ್ಟ್

ಇದಲ್ಲದೆ, ಈ ಹಿಂದೆ ಜೆಡಿಎಸ್ ನಲ್ಲಿದ್ದ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವು ನಾಯಕರೂ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಹಿರಿಯ ನಾಯಕ ಹಾಗೂ ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಕೂಡ ಶೀಘ್ರದಲ್ಲೇ ಸಿದ್ದು ಜೊತೆ ಕೈಜೋಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

2004ರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದಿದ್ದಾಗ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಸಿಎಂ ಸ್ಥಾನ ನೀಡುವುದಾಗಿ ಹೇಳಿ, ಮೈತ್ರಿಗೆ ಆಹ್ವಾನಿಸಿತ್ತು. ಆ ವೇಳೆ ದೇವೇಗೌಡರ ಜೊತೆಗಿದ್ದ ಸಿದ್ದರಾಮಯ್ಯ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಬಳಿಕ ದೇವೇಗೌಡ ಅವರು ಮೈತ್ರಿ ಸರ್ಕಾರದ ಸಿಎಂ ಆಗಿ ಕಾಂಗ್ರೆಸ್‌ನ ಎನ್‌ ಧರಂ ಸಿಂಗ್‌ ಅವರನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಅವಮಾನಿಸಿದ್ದರು. ಅಂದಿನಿಂದ ಸಿದ್ದರಾಮಯ್ಯ ಅವರು ದೇವೇಗೌಡ ಹಾಗೂ ಅವರ ಕುಟುಂಬವನ್ನು ದ್ವೇಷಿಸುತ್ತಿದ್ದಾರೆ. ಇದಲ್ಲದೆ, 2004-05ರ ಅವಧಿಯಲ್ಲಿ ಅಹಿಂದ ರ್ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಜೆಡಿಎಸ್ ನಿಂದ ಉಚ್ಛಾಟಿಸಿದ್ದೂ ಕೂಡ ಅವರಿಗೆ ನೋವು ಮಾಡಿದೆ ಎಂದು ಸಿದ್ದರಾಮಯ್ಯ ಅವರ ಬಗ್ಗೆ ತಿಳಿದ ಹಾಗೂ ಜೆಡಿಎಸ್ ಮಾಜಿ ಮುಖಂಡರೊಬ್ಬರು ಹೇಳಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ಅವರು ದೇವೇಗೌಡರ ಭದ್ರಕೋಟೆ ಎಂದೇ ಹೇಳಲಾಗುವ ಹಾಸನದಲ್ಲಿ ಡಿಸೆಂಬರ್ 5 ರಂದು ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದು, ಈ ಮೂಲಕ ದೇವೇಗೌಡ ಅವರಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಹಾಗೂ ದೇವೇಗೌಡ (ಸಂಗ್ರಹ ಚಿತ್ರ)
ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಮುಂದು; ಡಿಸೆಂಬರ್ 5 ಕ್ಕೆ ಕಾಂಗ್ರೆಸ್ ಮೆಗಾ ರ‍್ಯಾಲಿಗೆ ಸಿದ್ಧತೆ!

ಸೋರೆನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಡಿಕೆಶಿ ಭಾಗಿ

ಏತನ್ಮಧ್ಯೆ ಮಹದಾಯಿ ವಿವಾದ ಕುರಿತು ಚರ್ಚಿಸಲು ಕೇಂದ್ರ ಸಚಿವರು ಮತ್ತು ಸಂಸದರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಜಾರ್ಖಾಂಡ್ ರಾಜ್ಯದ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ,ಶಿವಕುಮಾರ್ ಅವರು, ನಾನು ದೆಹಲಿಗೆ ಭೇಟಿ ನೀಡುತ್ತಿರುವುದು ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಹಾಗೂ ಆ ಭಾಗದ ಸಂಸದರನ್ನು ಭೇಟಿಯಾಗಲು. ಜೊತೆಗೆ ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುವುದು. ಇನ್ನು ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ನೂರು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದ ರೂಪುರೇಷೆ ವಿಚಾರವಾಗಿ ಚರ್ಚೆ ಮಾಡಲು ತೆರಳುತ್ತಿದ್ದೇನೆ ಎಂದು ಹೇಳಿದರು.

ಹೈಕಮಾಂಡ್ ನಾಯಕರ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿಯೂ ಭೇಟಿ ಮಾಡುತ್ತೇನೆ. ಕಾಂಗ್ರೆಸ್ ಕಚೇರಿ ನಮ್ಮ ಪಾಲಿನ ದೇವಾಲಯ. ಅಲ್ಲಿಗೆ ಹೋದ ಮೇಲೆ ನಾಯಕರನ್ನು ಭೇಟಿ ಮಾಡುತ್ತೇವೆ" ಎಂದು ತಿಳಿಸಿದರು.

ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಾದಾಗ ಮಾತನಾಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ಕೇಳಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com