
ಹಾಸನ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ವಿಪಕ್ಷಗಳು ವ್ಯಾಪಕ ಹೋರಾಟ ಮಾಡುತ್ತಿರುವಂತೆಯೇ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, 'ಮುಖ್ಯಮಂತ್ರಿಯಾಗುವ ಬಯಕೆ ಇದೆ' ಎಂದು ಹೇಳಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, 'ಮುಖ್ಯಮಂತ್ರಿ ಸಿದ್ಧರಾಮಯ್ಯ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಅವರ ಬದಲಾವಣೆ ಊಹಾಪೋಹಾ.. ಅಷ್ಟೇ ಆದರೆ ನಾನು 2028ಕ್ಕೆ ಮುಖ್ಯಮಂತ್ರಿಯಾಗುವ ಬಯಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
'ನನ್ನ ಹಲವು ಹಿತೈಷಿಗಳು ನಾನೇ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಆ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ. ನಾನು ಸಿಎಂ ಆಗುವುದು ಸಿದ್ಧರಾಮಯ್ಯ ಅವರ ಅವಧಿ ಮುಗಿದ ನಂತರವೇ. ಅದು ಸಿದ್ಧರಾಮಯ್ಯನವರ ಸಹಕಾರದಿಂದಲೇ ಸಿಎಂ ಆಗುತ್ತೇನೆ. ಇದೇ ಅಭಿಪ್ರಾಯವನ್ನು ನನ್ನ ಮಗಳು ಸಂಸದೆ ಪ್ರಿಯಾಂಕ ಜಾರಕಿಹೊಳಿ ಸಹ ವ್ಯಕ್ತಪಡಿಸಿದ್ದಾರೆ. 2028ರವರೆಗೂ ಕಾಯೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಂತೆಯೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, 'ಸಿದ್ಧರಾಮಯ್ಯ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸಹ ಹೇಳಿದೆ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹಾ ಸಿದ್ಧರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.
ಕೋಳಿವಾಡ ಹೇಳಿಕೆ ಅವರ ವೈಯುಕ್ತಿಕ
ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಪಿ. ಕೋಳಿವಾಡ್ ಹೇಳಿರುವುದು ಅವರ ವೈಯುಕ್ತಿಕ ಹೇಳಿಕೆ ಅಷ್ಟೇ ಎಂದು ಹೇಳಿದ ಸತೀಶ್ ಜಾರಕಿಹೊಳಿ, 'ಜಾತಿ ಗಣತಿ ವಿಚಾರ ಸಚಿವ ಸಂಪುಟದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ. ಸಚಿವ ಸಂಪುಟದ ಮುಂದೆ ಈ ವಿಚಾರ ಬಂದ ನಂತರ ಈ ಬಗ್ಗೆ ಮಾತನಾಡೋಣ. ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಬೇಕು ಎಂಬ ಕೂಗಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲೇ ಈ ಭರವಸೆ ನೀಡಿದೆ. ಅದನ್ನು ಈಡೇರಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿದೆ ಎಂದು ಹೇಳಿದರು.
Advertisement