ಕಲಬುರಗಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಅಮಾಯಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಲೀನ್ ಚಿಟ್ ನೀಡಿದ್ದರೆ, ಇವರ ಪರವಾಗಿ (ನ್ಯಾಯಾಲಯದಲ್ಲಿ) ವಾದ ಮಂಡಿಸಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ ಎಂಬುದರಿಂದ ಹಿಡಿದು ವಾಲ್ಮೀಕಿ ಹಗರಣದ ಕೋಟ್ಯಂತರ ರೂ. ಅಕ್ರಮವಾಗಿ ಚುನಾವಣೆಗೆ ಬಳಕೆ ಆಗಿದೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಹಾಗಾಗಿ, ಈ ಬಗ್ಗೆ ರಾಜ್ಯದ ಜನರ ಚಿತ್ತ ಬೇರೆಡೆ ಸೆಳೆಯಲು ಹುಬ್ಬಳ್ಳಿ ಗಲಭೆಕೋರರು ಹಾಗೂ ಹಿಜಾಬ್ ಪರ ಹೋರಾಟಗಾರರ ವಿರುದ್ಧ ಹಾಕಲಾಗಿದ್ದ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಹೇಳಿದರು.
ಮೈಸೂರಿನ ಮುಡಾ ಪ್ರಕರಣ ತಮ್ಮ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ಎಂಬುದು ಸಹ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನದಟ್ಟಾಗಿದೆ. ಇದೆಲ್ಲವನ್ನೂ ವಿಷಯಾಂತರ ಮಾಡಲು ಅವರು ಶತಪ್ರಯತ್ನ ಮಾಡುತ್ತಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರ ಪರವಾಗಿ ತಾವಿರುವುದಾಗಿ ಹೇಳುವ ಸಿಎಂ, ಆಂಜನೇಯಸ್ವಾಮಿಯ ಮೇಲೆ ಕಲ್ಲು ತೂರಾಟ ಮಾಡಿದವರ ಪರವಾಗಿಯೂ ಇದ್ದೇವೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಕುಕ್ಕರ್ ಬ್ಲಾಸ್ಟ್ ಮಾಡಿದವರು ತಮ್ಮ ಬ್ರದರ್ಸ್ ಎನ್ನುತ್ತಾರೆ.
ಬಿಜೆಪಿಯವರು ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಇವರಿಗೆ ಸಿಸಿಟಿವಿ ದೃಶ್ಯಾವಳಿಗಳು ದೇವಸ್ಥಾನ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವುದಕ್ಕೆ ಸಾಕ್ಷಿ ಎನಿಸುತ್ತಿಲ್ಲವೇ? ಪೊಲೀಸರು ಮತ್ತು ದೇವರ ಮೂರ್ತಿಗಳ ಮೇಲೆ ಕಲ್ಲು ತೂರುವವರು ಅಮಾಯಕರು ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಾರೆ. ಹಾಗಾದರೆ, ನೀವು ಮುಖ್ಯಮಂತ್ರಿ ಮಾತ್ರವಲ್ಲ, ನ್ಯಾಯವಾದಿ ಸಹ ಆಗಿರುವುದರಿಂದ ಎಲ್ಲವನ್ನೂ ತನಿಖೆ ಮಾಡಿ ನೋಡೋಣ ಎಂದು ಸವಾಲು ಹಾಕಿದರು.
ಬಹುತೇಕ ಸಚಿವರು ಸಂಪುಟ ಸಭೆಗೆ ಬರುವುದು ಉಪ್ಪಿಟ್ಟು ತಿನ್ನಲು, ಕಾಫಿ ಕುಡಿಯಲು ಮಾತ್ರ, ಸಂಪುಟ ಸಭೆಯಲ್ಲಿ ಬರುವ ವಿಚಾರಗಳ ಬಗ್ಗೆ ಅವರು ಯೋಚಿಸುವುದಿಲ್ಲ. ಯಾವ ದಾಖಲೆಗಳಿಗೆ ಸಹಿ ಹಾಕುತ್ತಿದ್ದಾರೆ ಎಂಬುದನ್ನು ಓದದೆ ಒಪ್ಪಿಗೆ ನೀಡಲು ಸಚಿವ ಸಂಪುಟ ಸಭೆಗೆ ಹಾಜರಾಗುತ್ತಾರೆಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಿ.ಟಿ.ರವಿ ವಿರುದ್ಧದ ಪ್ರಕರಣವನ್ನೂ ಕೈಬಿಡಲಾಗಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಚಾಲೆಂಜ್ ಮಾಡ್ತೀನಿ ನನ್ನ ಮೇಲೆ ಯಾವ ಕೇಸ್ ಇದೆ ಯಾವ ಕೇಸ್ ವಾಪಸ್ ಪಡೆದಿದ್ದರೆಂದು ಹೇಳಲಿ. ನಾನು ಕೇಸ್ ವಾಪಸ್ ಪಡೆಯರಿ ಎಂದು ಅರ್ಜಿ ಹಾಕಿದ್ನಾ,,,? ಕೇಸ್ ವಾಪಸ್ ಪಡೆದಿದ್ದರೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುತ್ತೇನೆ. ಕೇಸ್ ವಾಪಸ್ ಸುಳ್ಳಾದರೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ. ಧೈರ್ಯವಿದ್ದರೆ ನನ್ನ ಚಾಲೇಂಜ್ ಸ್ವೀಕಾರ ಮಾಡಲಿ ಎಂದು ಸವಾಲು ಹಾಕಿದರು.
ಕದ್ದ ಆಸ್ತಿಯನ್ನು ಹಿಂದಿರುಗಿಸುವ ಹೊಸ ಟ್ರೆಂಡ್ ಕರ್ನಾಟಕದಲ್ಲಿ ಆರಂಭವಾಗಿದೆ. ಸಿದ್ದರಾಮಯ್ಯನವರ ಪತ್ನಿ ಕೆಲವು ವಾರಗಳ ಹಿಂದೆ ಮುಡಾಕ್ಕೆ ನಿವೇಶನಗಳನ್ನು ಹಿಂದಿರುಗಿಸಿದ್ದರು. ಇದರ ಬೆನ್ನಲ್ಲೇ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ನ ಅಧ್ಯಕ್ಷರೂ ಐದು ಎಕರೆ ಭೂಮಿಯನ್ನು ಕೆಐಎಡಿಬಿಗೆ ಹಿಂದಿರುಗಿಸಿದ್ದಾರೆ. ಕದ್ದ ಸ್ವತ್ತು ವಾಪಸ್ ಬಂದಿದ್ದರೆ ಅದನ್ನು ಪುರಾವೆಯಾಗಿ ನ್ಯಾಯಾಲಯ ಪರಿಗಣಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
Advertisement