ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆ ಬಗೆಹರಿಸುವುದಿಲ್ಲ: ಸರ್ಕಾರಕ್ಕೆ BJP ಚಾಟಿ

ವಿಪಕ್ಷಗಳ ಟೀಕೆ ಮಾಡಿದ ಮೇಲಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗುವ ಬದಲು ವಿಪಕ್ಷಗಳ ಮೇಲೆಯೇ ಹರಿಹಾಯುವುದೂ ಯಾವ ಸೀಮೆ ನ್ಯಾಯ ಸ್ವಾಮಿ?
R Ashok
ಆರ್.ಅಶೋಕ್online desk
Updated on

ಬೆಂಗಳೂರು: ನಿಮ್ಮ ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಕೃಷಿ ಸಚಿವರಾಗಿ ತಾವು ಎಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಿ? ಯಾವ್ಯಾವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೀರಿ? ಬೆಳೆ ಹಾನಿ ಸಮೀಕ್ಷೆ ನಡೆಸಲು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸರ್ಕಾರದ ತಪ್ಪುಗಳನ್ನ, ಆಡಳಿತದಲ್ಲಿರುವ ನ್ಯೂನ್ಯತೆಗಳನ್ನ ಎತ್ತಿ ತೋರಿಸಿ, ಜನರ ದನಿಯನ್ನ ಸರ್ಕಾರಕ್ಕೆ ತಲುಪಿಸುವುದೇ ವಿರೋಧ ಪಕ್ಷದ ಕೆಲಸ. ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ವಿಪಕ್ಷಗಳ ಟೀಕೆ ಮಾಡಿದ ಮೇಲಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗುವ ಬದಲು ವಿಪಕ್ಷಗಳ ಮೇಲೆಯೇ ಹರಿಹಾಯುವುದೂ ಯಾವ ಸೀಮೆ ನ್ಯಾಯ ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುವುದಿರಲಿ. ಸ್ವತಃ ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಅನೇಕ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಪರ ಯಾವುದೇ ವಿಶೇಷ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಸರಕಾರದ ಧೋರಣೆ ನೋಡಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎನಿಸುವಷ್ಟು ಬೇಸರವಾಗಿದೆ ಎಂದು ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಇತ್ತೀಚೆಗಷ್ಟೇ ಬೇಸರ ವ್ಯಕ್ತಪಡಿಸಿದ್ದರು.

ನಿಮ್ಮ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಹಾಗೂ ಲೋಡ್‌ ಶೆಡ್ಡಿಂಗ್‌ ಕಣ್ಣಾಮುಚ್ಚಾಲೆಯನ್ನು ಸಹ ನಿಮ್ಮದೇ ಪಕ್ಷದ ಶಾಸಕ ಕಾಗವಾಡದ ರಾಜು ಕಾಗೆಯವರು ಈ ಹಿಂದೆ ಎಳೆ ಎಳೆಯಾಗಿ ಬಿಚ್ಟಿಟ್ಟಿದ್ದಾರೆ. ಶಾಸಕರಿಗೆ ಕನಿಷ್ಟ ಅನುದಾನ ಸಹ ಸರ್ಕಾರದಿಂದ ಲಭಿಸುತ್ತಿಲ್ಲ, ಕಾಂಗ್ರೆಸ್‌ ಸರ್ಕಾರ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ನೀಡಿದ್ದಕ್ಕಿಂತ ತೆಗೆದದ್ದೇ ಹೆಚ್ಚು ಎಂಬುದನ್ನು ಸಹ ಒಪ್ಪಿಕೊಂಡಿದ್ದಾರೆ. ನವಲಗುಂದದ ಶಾಸಕರಾದ ಶ್ರೀ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಬಹುತೇಕ ರೈತರಿಗೆ ಮುಂಗಾರು ಬರ ಪರಿಹಾರವೇ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ತಮ್ಮ ಸರ್ಕಾರಕ್ಕೆ ಅರಿವಿದೆ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆ ಬಗೆಹರಿಸುವುದಿಲ್ಲ. ಕೃಷಿ ಸಚಿವರಾಗಿ ತಾವು ಎಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಿ? ಯಾವ್ಯಾವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೀರಿ? ಬೆಳೆ ಹಾನಿ ಸಮೀಕ್ಷೆ ನಡೆಸಲು ಯಾವ ಕ್ರಮ ಕೈಗೊಂಡಿದ್ದೀರಿ? ಈ ಹಿಂದೆ ಅನೇಕ ಮುತ್ಸದ್ದಿಗಳು, ಹಿರಿಯರು ನಿರ್ವಹಿಸಿದ ಕೃಷಿ ಇಲಾಖೆಯ ಮಂತ್ರಿ ಆಗಿದ್ದೀರಿ. ಇಲಾಖೆಯ ಗಂಭೀರತೆ ಅರಿತು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ. ಅಭದ್ರವಾಗಿರುವ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯನವರ ಜೊತೆ ಇರಬೇಕೋ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಇರಬೇಕೋ ಎನ್ನುವ ತಳಮಳ, ಗೊಂದಲ ತಮ್ಮನ್ನ ಕಾಡುತ್ತಿದೆ ಎಂದು ಗೊತ್ತಿದೆ. ತಮಗೆ ನನ್ನ ಕಿವಿಮಾತು ಏನೆಂದರೆ ತಾವು ನಾಡಿನ ರೈತರ ಜೊತೆಗೆ ಇರಿ. ಆಗ ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡಿ ರೈತರಿಗೆ ನೆರವಾಗಿ. ಅದೇ ನಿಮ್ಮನ್ನ ಕಾಪಾಡುತ್ತದೆ ಎಂದು ಹೇಳಿದ್ದಾರೆ.

R Ashok
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿ, ಸೂರ್ಯಾಸ್ತದೊಳಗೆ ರಾಜೀನಾಮೆ ನೀಡಬೇಕು: ಸಿಎಂಗೆ ಬಿಜೆಪಿ ಗಡುವು

ಇದಕ್ಕೂ ಮುನ್ನ ಮತ್ತೊಂದು ಪೋಸ್ಟ್ ಮಾಡಿದ್ದ ಅಶೋಕ್ ಅವರು, 'ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು' ಎಂಬಂತೆ, ಕಾಂಗ್ರೆಸ್ ಪಕ್ಷದ ಕುರ್ಚಿ ಗುದ್ದಾಟದಲ್ಲಿ ನಾಡಿನ ರೈತರು ದಿಕ್ಕಿಲ್ಲದೆ ಅನಾಥವಾಗಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಳೆದ ಎಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಆಹಾರ ಧಾನ್ಯಗಳು, ವಾಣಿಜ್ಯ ಬೆಳೆಗಳು, ತರಕಾರಿ, ಹೂವು ಸೇರಿದಂತೆ ಅನೇಕ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಈ ವರ್ಷವಾದರೂ ಉತ್ತಮ ಬೆಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ.

ಹಲವಾರು ಕಡೆ ಕಟಾವಿಗೆ ಬಂದಿದ್ದ ಬೆಳೆಗಳು ಮಳೆಯಿಂದ ನಾಶವಾಗಿವೆ. ಅನೇಕ ಕಡೆ ಬೆಳೆಗಳಿಗೆ ಕೊಳೆರೋಗ, ಸುಟ್ಟರೋಗ ಬಂದು ಹಾಳಾಗಿವೆ. ರೈತರು ಇಂತಹ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದರೂ ಮುಖ್ಯಮಂತ್ರಿಗಳಾಗಲಿ, ಕೃಷಿ ಸಚಿವರಾಗಲಿ, ಕಂದಾಯ ಸಚಿವರಾಗಲಿ ರೈತರ ಸಂಕಷ್ಟದ ಬಗ್ಗೆ ಈವರೆಗೂ ಚಕಾರ ಎತ್ತಿಲ್ಲ. ರೈತರ ಜಮೀನುಗಳಿಗೆ ಹೋಗಿ ಧೈರ್ಯ ಹೇಳಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರುಗಳ, ಶಾಸಕರು ಈವರೆಗೂ ಆಕಡೆ ತಲೆ ಹಾಕಿಲ್ಲ. ಮುಖ್ಯಮಂತ್ರಿಗಳಿಗೆ ಕುರ್ಚಿ ಉಳಿಸಿಕೊಳ್ಳುವ ಯೋಚನೆ ಆದರೆ ಸಚಿವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳುವ ಯೋಚನೆ. ಇನ್ನು ಶಾಸಕರ ಅನುದಾನದ ಚಿಂತೆ. ಒಟ್ಟಿನಲ್ಲಿ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ನಾಡಿನ ರೈತರು ದಿಕ್ಕಿಲ್ಲದ ಅನಾಥರಾಗಿದ್ದಾರೆ.

ಕಳೆದ ವರ್ಷ ಬರ ಪರಿಸ್ಥಿತಿ ಇದ್ದಾಗ ಸರಿಯಾದ ಸಮಯಕ್ಕೆ ಸಮೀಕ್ಷೆ ನಡೆಸದೆ, ರಾಜಕೀಯ ಮಾಡುವುದರಲ್ಲೇ ಕಾಲಹರಣ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಈಗಲಾದರೂ ಮತ್ತೆ ಅದೇ ತಪ್ಪು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1,500ಕ್ಕು ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಇನ್ನಷ್ಟು ರೈತರು ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡುವ ಮುನ್ನ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಒತ್ತಾಯಿಸುತ್ತೇನೆಂದು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಚಲುವರಾಯಸ್ವಾಮಿಯವರು, ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದವರು ಎಲ್ಲವನ್ನು ವಿರೋಧಿಸುವುದೇ ತಮ್ಮ ಕಾಯಕ ಎಂದುಕೊಂಡಂತಿದೆ. ನಮ್ಮ ಸರ್ಕಾರದ ಮೊದಲ ವರ್ಷದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ಬರಗಾಲ ಬಂದಿದೆ ಎನ್ನುತ್ತಿದ್ದವರು ಈ ವರ್ಷ ಉತ್ತಮ ಮಳೆ ಆಗಿರುವುದನ್ನು ಸಹಿಸಲಾಗದೇ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಮಾಡುತ್ತಿದ್ದಾರೆ.

ಎಲ್ಲ ವಿಷಯದಲ್ಲಿಯೂ ರಾಜಕೀಯ ಮಾಡುವ ಸಂಕುಚಿತ ಮನಸ್ಥಿತಿಯನ್ನು ದಯವಿಟ್ಟು ಬಿಡಿ. ಪ್ರಕೃತಿಯ ಸಹಜ ಗುಣದಿಂದಾಗಿ ಇಂತಹ ಹವಾಮಾನ ವ್ಯತ್ಯಾಸಗಳಾಗುವುದು ಸಹಜ. ಅಕಾಲಿಕ ಮಳೆಯಿಂದಾದ ಪರಿಣಾಮದ ಬಗ್ಗೆ ನಮ್ಮ ಸರ್ಕಾರಕ್ಕೆ ಹಾಗೂ ಕೃಷಿ ಇಲಾಖೆಗೆ ಅರಿವಿದೆ. ಅಗತ್ಯ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ.ಇಂತಹ ಯಾವುದೇ ತುರ್ತು ಸಮಸ್ಯೆಗಳನ್ನು ನಮ್ಮ ಜನತೆ ಧೈರ್ಯದಿಂದ ಎದುರಿಸಬೇಕು ಎನ್ನುವ ಉದ್ದೇಶದಿಂದಲೇ ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಶೋಕ್ ಅವರೇ, ಇಂತಹ ಆರೋಪ ಮಾಡಿ, ಕಾಲ ಹರಣ ಮಾಡುವ ಬದಲು ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾದ ಸಂದರ್ಭದಲ್ಲಿ ನಿಮ್ಮದೇ ಕೇಂದ್ರ ಸರ್ಕಾರ ತೋರಿದ ಅಸಹಕಾರದ ಬಗ್ಗೆಯೂ ಧ್ವನಿಯೆತ್ತಿ. ಕಾಂಗ್ರೆಸ್‌ ಸರ್ಕಾರ ನಾಡಿನ ಜನತೆ ಹಾಗೂ ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com