
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸದಿರಲು ಮಾಜಿ ಸಚಿವ, ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ ನಿರ್ಧರಿಸಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ನಂತರ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ನನಗೆ ನನ್ನದೇ ಆದ ಬೆಂಬಲವಿದೆ. ಚುನಾವಣೆ ನಿಲ್ಲಲೇಬೇಕೆಂದು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ಬಹುತೇಕ ಸ್ಪರ್ಧೆ ಮಾಡಲೇಬೇಕು ಎಂದುಕೊಂಡಿದ್ದೇನೆ. ಚಿಹ್ನೆ ಯಾವುದಾದರೂ ಇರಲಿ, ಸ್ಪರ್ಧೆ ಮಾಡುವ ಇಂಗಿತವಿದೆ. ಎಲ್ಲವನ್ನೂ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ ಎಂದು ಹೇಳಿದರು.
ಪಕ್ಷದ ಮುಖಂಡರ ಆದೇಶದ ಮೇಲೆ ತೀರ್ಮಾನ ಮಾಡುತ್ತೇನೆ. ಸ್ಪರ್ಧೆ ಮಾಡಲೇಬೇಕು ಎಂದು ಹೇಳುತ್ತಿದ್ದೆ. ಈಗಲೂ ಅದೇ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಎರಡೂ ಪಕ್ಷಗಳ ಮುಖಂಡರು ಕುಳಿತು ತೀರ್ಮಾನ ಹೇಳಲಿ. ಉಪಚುನಾವಣೆಗಾಗಿ ನನ್ನ ನಿಲುವು ಯಾಕೆ ಬದಲಾಯಿಸಿಕೊಳ್ಳಲಿ. ನನ್ನ ಮೊದಲನೇ ಚುನಾವಣೆ ಫಲಿತಾಂಶ ಬಂದು 26 ವರ್ಷ ಆಯ್ತು. ಕ್ಷೇತ್ರದಲ್ಲಿ ನನಗೆ ನನದೇ ಆದ ಬೆಂಬಲವಿದೆ. ಹೆಗಲಿಗೆ ಹೆಗಲು ಕೊಟ್ಟವರು ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ನಾನೂ ಕೂಡ ಚುನಾವಣೆಗಳಿಂದ ಬೇಸತ್ತಿದ್ದೇನೆ. ಎನ್ಡಿಎ ಮೈತ್ರಿಕೂಟಕ್ಕೆ ನನ್ನಿಂದ ತೊಂದರೆ ಆಗಬಾರದು. ಮೈತ್ರಿ ಮುರಿದ ಎಂಬ ಅಪಕೀರ್ತಿ ಬರಬಾರದು ಎಂದು ತಿಳಿಸಿದರು.
ಏತನ್ಮಧ್ಯೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ನೇತೃತ್ವದ ಬಿಜೆಪಿ ಮುಖಂಡರ ಗುಂಪೊಂದು ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂದು ಲಾಬಿ ನಡೆಸುತ್ತಿದ್ದು, ಬಿಜೆಪಿ ಹೈಕಮಾಂಡ್ ಮಾತ್ರ ಈ ಕುರಿತ ನಿರ್ಧಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟಿದೆ.
ಬಿಜೆಪಿ ಹೈಕಮಾಂಡ್'ನ ಈ ನಿರ್ಧಾರ ಮೈತ್ರಿ ಪಕ್ಷ ಜೆಡಿಎಸ್'ಗೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ. ಹೀಗಾಗಿ ಕುಮಾರಸ್ವಾಮಿಯವರು ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯೋಗೇಶ್ವರ್ ಅವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement