
ಬೆಂಗಳೂರು: ಪಂಜಾಬ್, ಹಿಮಾಚಲ ಪ್ರದೇಶದ ರೀತಿ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿ ಸಹ ದಿವಾಳಿಯಾಗುವ ದಿನ ಅತ್ಯಂತ ಹತ್ತಿರದಲ್ಲಿದೆ ಎಂದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ, ಅವಾಸ್ತವಿಕ ಯೋಜನಗೆಳು, ಅಪ್ರಬುದ್ಧ ನಿರ್ಧಾರಗಳು, ಬೇಜವಾಬ್ದಾರಿ ಆಡಳಿತ, ಭ್ರಷ್ಟ ವ್ಯವಸ್ಥೆಯ ಮಾಡೆಲ್ ಅನ್ನೇ ಆಡಳಿತದ ಧ್ಯೇಯವನ್ನಾಗಿಸಿಕೊಂಡಿದ್ದ ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಸರ್ಕಾರಗಳು ಆ ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿ, ದಿವಾಳಿಯನ್ನಾಗಿಸಿವೆ. ಚುನಾವಣೆ ಗೆಲ್ಲಲ್ಲು ಆ ರಾಜ್ಯಗಳ ಮಾಡೆಲ್ ಅನ್ನೇ ಯಥಾವತ್ತು ನಕಲು ಮಾಡಿದ್ದ ಕಾಂಗ್ರೆಸ್ ಸರ್ಕಾರ, ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿ ಹಳ್ಳ ಹಿಡಿಸಿದೆ. ಪಂಜಾಬ್, ಹಿಮಾಚಲ ಪ್ರದೇಶದ ರೀತಿ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿ ಸಹ ದಿವಾಳಿಯಾಗುವ ದಿನ ಅತ್ಯಂತ ಹತ್ತಿರದಲ್ಲಿದೆ ಎಂದು ಹೇಳಿದೆ.
ಮತ್ತೊಂದು ಪೋಸ್ಟ್ ನಲ್ಲಿ ಅಧಿಕಾರದ ಅಮಲಿನಿಂದ ಕೊಬ್ಬಿರುವ ಕಾಂಗ್ರೆಸ್ ಸರ್ಕಾರ ಅನ್ನದಾತರಿಗೆ ದ್ರೋಹ ಬಗೆಯುವುದನ್ನೇ ಕಾಯಕ ಮಾಡಿಕೊಂಡಿದೆ. ಎಲೆಚುಕ್ಕೆ ಬಾಧೆಯಿಂದ ಕಂಗೆಟ್ಟ ರಾಜ್ಯದ ಏಳು ಜಿಲ್ಲೆಗಳ ಅಡಿಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ಶೇ. 60ರಷ್ಟು ಸಹಾಯಧನ ನೀಡಲು ಈ ವರ್ಷದ ಜೂನ್ ನಲ್ಲೇ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ದಿಕ್ಕೆಟ್ಟ ನೀತಿಗಳಿಂದ ದಿವಾಳಿಯಾಗಿರುವ ಸಿದ್ದರಾಮಯ್ಯ ಸರ್ಕಾರ ಮಾತ್ರ ಉಳಿದ ಶೇ.40ರಷ್ಟು ಮೊತ್ತ ಭರಿಸಲು ಮೀನಾಮೇಷ ಎಣಿಸುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೂಡಲೇ ಲೂಟಿಕೋರ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಶೇ.40 ಮೊತ್ತವನ್ನು ಭರಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಲು ಎಚ್ಚರಿಸುತ್ತೇವೆ. ಅನ್ನದಾತರಿಗೆ ಅನ್ಯಾಯ ಆಗುವುದನ್ನು ಬಿಜೆಪಿ ಎಂದೂ ಸಹಿಸುವುದಿಲ್ಲ. ರೈತರಿಗೆ ನೆರವು ನೀಡದೆ ಹೋದರೆ ರೈತಾಕ್ರೋಶದ ಹೋರಾಟ ಎದುರಿಸಬೇಕಾಗಲಿದೆ ಎಚ್ಚರ ಎಂದು ತಿಳಿಸಿದೆ.
Advertisement