ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಭೀತಿ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಸರಣಿ ಆರೋಪಗಳ ಮಾಡಿದ್ದು, 'ಮಜಾವಾದಿ ಮುಖ್ಯಮಂತ್ರಿಯ ಸರಣಿ ಭ್ರಷ್ಟಾಚಾರಗಳು' ಎಂದು ಟೀಕೆ ಮಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 'ಮುಡಾ ಹಗರಣದ ಬಳಿಕ ಸಿದ್ದರಾಮಯ್ಯರ ಅರ್ಕಾವತಿ ಡಿನೋಟಿಫಿಕೇಷನ್ ಅಕ್ರಮದ ಬಗ್ಗೆ ರಾಜ್ಯಪಾಲರು ಮಾಹಿತಿ ಕೋರಿ ಕಾಂಗ್ರೆಸ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದ ವೇಳೆ ಅರ್ಕಾವತಿ ಬಡಾವಣೆಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದು, ಸುಮಾರು 8 ಸಾವಿರ ಕೋಟಿಯ ಬೃಹತ್ ಹಗರಣ ನಡೆದಿತ್ತು.
ಅರ್ಕಾವತಿ ಬಡಾವಣೆಗಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನ ಪೈಕಿ 541 ಎಕರೆಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದರು. ಈ ಪ್ರಕರಣ ಸಂಬಂಧ ನಿವೃತ್ತ ನ್ಯಾ. ಕೆಂಪಣ್ಣ ಅವರ ವಿಚಾರಣಾ ಆಯೋಗದ ತನಿಖಾ ವರದಿಯನ್ನು ನೀಡುವಂತೆ ರಾಜ್ಯಪಾಲರು ಕೇಳಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ಅಲ್ಲವೇ..? ಎಂದು ಪ್ರಶ್ನಿಸಿದೆ.
ಅಲ್ಲದೆ 'ಮುಡಾದಲ್ಲಿ ಅಕ್ರಮವಾಗಿ 14 ಸೈಟು ಪಡೆದು, ಈಗಾಗಲೇ ಪ್ರಾಸಿಕ್ಯೂಷನ್ ಎದುರಿಸ್ತಿರುವ ಸಿದ್ದರಾಮಯ್ಯ ಅವರೇ, ನೈತಿಕತೆ ಬಗ್ಗೆ ಪಾಠ ಮಾಡುವ ನೀವು ಮೊದಲು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದೆ.
ಶಾಂತಿಭಂಗದ ಹೆಸರಲ್ಲಿ ಗಣೇಶೋತ್ಸವಕ್ಕೆ ತಡೆ!
ಮತ್ತೊಂದು ಟ್ವೀಟ್ ನಲ್ಲಿ ಶಾಂತಿಭಂಗದ ಹೆಸರಲ್ಲಿ ಗಣೇಶೋತ್ಸವಕ್ಕೆ ಸರ್ಕಾರ ತಡೆ ನೀಡಿದೆ ಎಂದು ಆರೋಪಿಸಿರುವ ಜೆಡಿಎಸ್, 'ಸಿದ್ದರಾಮಯ್ಯ ಅವರೇ ಶಾಂತಿ ಭಂಗದ ಹೆಸರಲ್ಲಿ ಗಣೇಶೋತ್ಸವದ ಸಂಭ್ರಮವನ್ನು ತಡೆಯುವುದು ಒಂದು ಸಮುದಾಯದ ತುಷ್ಟೀಕರಣದ ರಾಜಕೀಯವೇ..? ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗಣೇಶ ಉತ್ಸವದ ಮೆರವಣಿಗೆಗಳನ್ನು ಹತ್ತಿಕ್ಕುವ ಕುತಂತ್ರ ವ್ಯವಸ್ಥಿತವಾಗಿ ನಡೆಸುತ್ತಿದೆ.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ಗಣೇಶೋತ್ಸವದ ಮೆರವಣಿಗೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ನಿರ್ಬಂಧಿಸಿರುವುದು ಖಂಡನೀಯ. ತುಮಕೂರು ವಿ.ವಿ. ಹೊರಡಿಸಿರುವ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕು. ಧಾರ್ಮಿಕ ಶ್ರದ್ಧೆಯುಳ್ಳ ವಿದ್ಯಾರ್ಥಿಗಳು ಗಣೇಶೋತ್ಸವಗಳಲ್ಲಿ ಭಾಗವಹಿಸುತ್ತಾರೆ, ಅವರನ್ನು ತಡೆಯುವ ಪ್ರಯತ್ನ ಸರಿಯಲ್ಲ.
ಆಕಸ್ಮಿಕ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರೇ ಇನ್ನಾದರೂ ಗಣೇಶೋತ್ಸವಗಳಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆ ಒದಗಿಸಿ ಎಂದು ಜೆಡಿಎಸ್ ಒತ್ತಾಯಿಸಿದೆ.
Advertisement