
ಬೆಂಗಳೂರು: ಚಲುವರಾಯಸ್ವಾಮಿಯನ್ನು ಸಚಿವರನ್ನಾಗಿ ಮಾಡಲು ಶ್ರಮ ಪಟ್ಟಿದ್ದಕ್ಕೆ ಪಶ್ಚಾತ್ತಾಪವಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಚಲುವರಾಯಸ್ವಾಮಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಅಪಾರ ಪ್ರಯತ್ನ ಮಾಡಿದ್ದೇನೆ. ಮಂತ್ರಿಯಾಗುವುದಕ್ಕಾಗಿ ನನಗೆ ಮೂರು ಗಂಟೆವರೆಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಆತನನ್ನು ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೇನೆ. ನಾನು ಪಟ್ಟಿರುವ ಶ್ರಮವನ್ನು ಅವರು ಮರೆಯೋದು ಬೇಡ. ಈ ವಿಷಯವಾಗಿ ನಾನು ಎಲ್ಲಿ ಬೇಕಾದರೂ ಆಣೆ- ಪ್ರಮಾಣ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಚಲುವರಾಯಸ್ವಾಮಿಗೆ ಇರುವ ಚಟಗಳು ನನಗಿಲ್ಲ. ಅವರಿಗಿರುವ ಚಟಗಳ ಬಗ್ಗೆ ಮಂಡ್ಯದಲ್ಲಿ ಕೇಳಿದರೆ ಹೇಳುತ್ತಾರೆ. ಚಲುವರಾಯಸ್ವಾಮಿಯಿಂದ ಎಷ್ಟು ಮನೆ ಹಾಳಾಗಿವೆ ಎನ್ನುವುದೂ ಗೊತ್ತಿದೆ. ಚಟಗಳ ಬಗ್ಗೆ ಚರ್ಚೆ ಮಾಡೋದು ಬೇಡ, ಅದು ಕೀಳುಮಟ್ಟದ ಅಭಿರುಚಿ ಎಂದು ತಿಳಿಸಿದರು.
ನಾನು ರಾಜಕೀಯದಲ್ಲಿ ದುಡ್ಡು ಮಾಡಬೇಕೆಂದು ಎಂದೂ ಆಸೆಪಟ್ಟವನಲ್ಲ. ನಾನು ಜನರ ಮಧ್ಯ 24 ಗಂಟೆ ಕೆಲಸ ಮಾಡಿದ್ದೇನೆ. ಜನತಾ ದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಸಮಸ್ಯೆ.ಎಲ್ಲವನ್ನೂ ದೇವರು ನೋಡುತ್ತಾನೆ ಎಂದು ಹೇಳಿದರು.
ಇದೇ ವೇಳೆ ಸ್ವ ಚರಿತ್ರೆ ಬಗ್ಗೆ ಚಲುವರಾಯಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವ ಚರಿತ್ರೆ ಬಗ್ಗೆ ಚರ್ಚೆ ಮಾಡೋದು ಮುಖ್ಯವೋ? ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಮುಖ್ಯವೋ? ಪ್ರತಿಯೊಬ್ಬ ಮನುಷ್ಯ ಕೆಲವರ ಜೊತೆ ಇದ್ದಾಗ ಹಲವಾರು ಸಮಸ್ಯೆಗಳನ್ನು ಮಾಡಿಕೊಳ್ಳುತ್ತೇವೆ. ಯಾವ ಮನುಷ್ಯನೂ ಪರಿಶುದ್ಧ ಅಲ್ಲ. ತಪ್ಪನ್ನು ಸರಿಪಡಿಸಿಕೊಳ್ಳಲು ಭಗವಂತ ಅವಕಾಶ ಕೊಡುತ್ತಾನೆ.
ನಾನು ವಿಧಾನಸಭೆಯ ಕಲಾಪದಲ್ಲಿ ಹೇಳಿದ್ದೇನೆ. ನಾನು ತಪ್ಪು ಮಾಡಿದ್ದೇನೆ, ಇಲ್ಲ ಎಂದು ಹೇಳುತ್ತಿಲ್ಲ. ಚಲುವರಾಯಸ್ವಾಮಿ ಏನೇನು ಮಾಡಿದ್ದಾರೆ ಎನ್ನುವುದೂ ಗೊತ್ತಿದೆ. ಇಂತಹ ವಿಚಾರಗಳನ್ನು ಬಿಟ್ಟು ಜನರ ಬದುಕಿನ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿದರು.
Advertisement