
ಉಡುಪಿ: ತಮಿಳುನಾಡು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಆದರೆ, ಮುಂದೆ ನಡೆಯಲಿರುವ ಅಧ್ಯಕ್ಷನ ಚುನಾವಣೆಯಲ್ಲಿ ನಾನು ಸ್ಪರ್ಧಿ ಅಲ್ಲ ಎಂದು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಬುಧವಾರ ಸ್ಪಷ್ಟಪಡಿಲಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಅವಧಿ ಮುಗಿದಿದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಚುನಾವಣೆ ಇನ್ನು ನಡೆದಿಲ್ಲ, ರಾಜ್ಯ ಘಟಕದ ಅಧ್ಯಕ್ಷನ ಚುನಾವಣೆ ಯಾವುದೇ ಸಮಯ ನಡೆಯಬಹುದು, ಆದರೆ, ಮುಂದಿನ ಅವಧಿಗೆ ಅಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಹಾಗೆಂದ ಮಾತ್ರಕ್ಕೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದು ಎಂದಲ್ಲ, ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಘೋಷಣೆಯ ಅನಂತರದಲ್ಲಿ ಯಾವಾಗ ಬೇಕಾದರೂ ರಾಜ್ಯಾಧ್ಯಕ್ಷರ ಚುನಾವಣೆ ಆಗಬಹುದು ಎಂದು ಹೇಳಿದರು.
ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿದೆ. ಬಹಳ ವರ್ಷದಿಂದ ನಾವು ತಾಳ್ಮೆಯಿಂದ ಕಾದಿದ್ದೇವೆ, ಕಾಯುತ್ತೇವೆ. ಇನ್ನೂ 20, 30 ವರ್ಷ ಬೇಕಾದರೂ ಆಗಲಿ, ಅಧಿಕಾರಕ್ಕೆ ಬರುತ್ತೇವೆ. ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತರಾಗಿ ಒಪ್ಪಿಗೆ ಕೊಡಬೇಕು. ನಮ್ಮ ಮುಂದಿರುವ ಏಕೈಕ ಗುರಿ ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದು. ಹೀಗಾಗಿ ಎಐಡಿಎಂಕೆ ಕೂಡ ಬಿಜೆಪಿ ಜತೆಗೆ ಮೈತ್ರಿ ಬಯಸಿದೆ. ಹಾಗೆಯೇ ಬಿಜೆಪಿ ಕೂಡ ಮೈತ್ರಿಯ ಬಗ್ಗೆ ಒಲವು ತೋರಿಸಿದೆ. ಗೃಹ ಮಂತ್ರಿ ಅಮಿತ್ ಶಾ ಹಾಗೂ ತಮಿಳುನಾಡು ವಿಪಕ್ಷ ನಾಯಕ ಯಡಪ್ಪಾಡಿ ಕೆ. ಪಳನಿಸ್ವಾಮಿಯವರು ಈಗಾಗಲೇ ಭೇಟಿಯಾಗಿ ಮಾತುಕತೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಯಾರು ಯಾವ ಜವಾಬ್ದಾರಿ ನಿಭಾಯಿಸಬೇಕು, ಮೈತ್ರಿ ಮಾಡಿಕೊಂಡರೆ ಯಾರು ಸೂಕ್ತ ಎಂಬುದರ ನೆಲೆಯಲ್ಲಿ ತೀರ್ಮಾನಿಸಲಿದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಬದ್ಧ ಎಂದು ತಿಳಿಸಿದರು.
ಕರ್ನಾಟಕ ಶ್ರೀಮಂತ ಸಂಸ್ಕೃತಿಯ ನಾಡು. ಇಲ್ಲಿನ ಕಾಂಗ್ರೆಸ್ ಸರಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ದೇಶದ ಜನರು ನೋಡುತ್ತಿದ್ದಾರೆ. ಸಿಡಿ ಮತ್ತು ಹನಿಟ್ರ್ಯಾಪ್ ಹಗರಣವು ಪ್ರಬಲ ನಾಯಕನೊಬ್ಬ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಹತಾಶೆಯ ಸ್ಪಷ್ಟ ಸಂಕೇತವಾಗಿದೆ ಎಂದು ಹೇಳಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಕುರಿತು ಮಾತನಾಡಿ, ಜನರು ಈ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ಈಗಲೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಥವಾ ಶೇ.100 ರಷ್ಟು ಯಶಸ್ಸು ಸಿಗುತ್ತದೆ ಎನ್ನಲಾಗದು. ಆದರೆ, ಜನ ಬಿಜೆಪಿ ಜತೆಗೆ ಸೇರಿ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಎಲ್‌ಪಿಜಿ ಬೆಲೆ ಏರಿಕೆ ಕುರಿತು ಮಾತನಾಡಿ, ಪಿ.ಚಿದಂಬರ್ ಸಹಿತ ಕಾಂಗ್ರೆಸ್ ಹಿರಿಯ ನಾಯಕರು, ತಜ್ಞರು ಜಾಗತಿಕ ಮಟ್ಟ ದಲ್ಲಿನ ಅನಿಲದರ ಏರಿಕೆಯ ಬಗ್ಗೆ ಮಾತನಾಡುತ್ತಿಲ್ಲ. ಅಡುಗೆ ಅನಿಲವನ್ನು ನಾವು ವಿದೇಶದಿಂದಲೇ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದು, ನಮ್ಮ ದೇಶದಲ್ಲೂ ಬಹುಪಾಲು ಮನೆಗಳಲ್ಲಿ ಗ್ಯಾಸ್ ಬಳಸಲಾಗುತ್ತಿದೆ. ಈ ಏರಿಕೆ ತಾತ್ಕಾಲಿಕ ಮಾತ್ರ. ಜನರಿಗೆ ಹೆಚ್ಚುವರಿ ಹೊರೆಯಾಗದಂತೆ ಕೇಂದ್ರ ಸರಕಾರ ಗಮನ ಹರಿಸಲಿದೆ ಎಂದರು.
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ಈ ಹಿಂದೆಯೂ 1995ರಲ್ಲಿ 2013ರಲ್ಲಿ ದೊಡ್ಡ ತಿದ್ದುಪಡಿಗಳಾಗಿವೆ, ಈಗ ಅತಿದೊಡ್ಡ ಬಹಳ ಅದ್ಭುತ ಬದಲಾವಣೆ ತರಲಾಗಿದೆ. ಇದರಿಂದ ಇಸ್ಲಾಂ ಧರ್ಮದಲ್ಲಿರುವ ಅಕ್ಕಂದಿರಿಗೆ, ತಾಯಂದಿರಿಗೆ ಅನುಕೂಲವಾಗಲಿದೆ. ಮುಸ್ಲಿಮರಿಗೆ ಇದರಿಂದ ಬಡ ಅನುಕೂಲವಾಗಲಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನು ಮುಂದೆ ಯಾರೋ ಬಂದು ಇದು ನನ್ನ ಭೂಮಿ ಎಂದು ಹೇಳುವಂತಿಲ್ಲ. ಇದರಲ್ಲಿ ಜಿಲ್ಲಾಧಿಕಾರಿ ಪಾತ್ರ ಏನು ಅನ್ನುವುದು ಮುಖ್ಯ. ಇದು ಸಂವಿಧಾನ ವಿರೋಧಿ ಅಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನ್ಯಾಯಾಲಯದ ಮೊರೆ ಹೋಗಿದ್ದು, ಎಲ್ಲಾ ಪ್ರಕರಣಗಳು ವಜಾಗೊಳ್ಳಲಿದೆ ಎಂದರು.
Advertisement