
ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಈ ವಿವಾದಾತ್ಮಕ ಸಮೀಕ್ಷೆ ಕುರಿತು ವಿಸ್ತೃತವಾಗಿ ಚರ್ಚಿಸಲು ಇದೇ 17 ರಂದು ವಿಶೇಷ ಸಂಪುಟ ಸಭೆಯನ್ನು ಕರೆಯಲಾಗಿದೆ.
ಈ ಕ್ರಮವು ರಾಜಕೀಯ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಹಿಂದುಳಿದ ಜಾತಿ ನಾಯಕರು ರಾಜ್ಯದಲ್ಲಿ ಅಧಿಕಾರ ಬದಲಾಯಿಸಲು ಸಿದ್ಧವಾಗಿರುವವರಿಗೆ ಸಿದ್ದರಾಮಯ್ಯ ನೀಡಿರುವ "ಐತಿಹಾಸಿಕ ಮಾಸ್ಟರ್‌ಸ್ಟ್ರೋಕ್" ಎಂದು ಬಣ್ಣಿಸಿದ್ದಾರೆ.
ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ಎಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಮೀಕ್ಷೆಯ ಹೊಣೆಯನ್ನು ವಹಿಸಿದ್ದರು. ಇದು ದೀನದಲಿತರು, ದಮನಿತರು ಮತ್ತು ಬಡವರನ್ನು ಸಬಲೀಕರಣಗೊಳಿಸಲು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ ಎಂದು ಸಮೀಕ್ಷೆಯ ಹಿಂದಿನ ವ್ಯಕ್ತಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಹೇಳಿದ್ದಾರೆ.
ಇದಲ್ಲದೆ, ಇನ್ನೇನು ಮಾಡಬಹುದು? ಎಂದು ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಪ್ರಶ್ನಿಸಿದ್ದಾರೆ. 2015ರ ವರದಿ ಇದಾಗಿದ್ದು, ಬಹಳ ಹಿಂದಿನಿಂದಲೂ ಬಾಕಿ ಇದೆ. ಸರ್ಕಾರ ವಿಳಂಬ ಮಾಡುವುದನ್ನು ನಿಲ್ಲಿಸಿ ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಇನ್ನೂ ಜಾತಿ ಗಣತಿ ವರದಿ ಜಾರಿಗೆ ಲಿಂಗಾಯತ ನಾಯಕರಾದ ಈಶ್ವರ್ ಖಂಡ್ರೆ ಮತ್ತು ಎಂ.ಬಿ. ಪಾಟೀಲ್ ಸೇರಿದಂತೆ ಕೆಲವು ಸಚಿವರು ಒಗ್ಗಟ್ಟಿನಿಂದ ನಿಂತರೆ, ಡಿಸಿಎಂ ಡಿಕೆ ಶಿವಕುಮಾರ್ ವಿಭಿನ್ನ ಹಾದಿ ಹಿಡಿದಿದ್ದಾರೆ. ಸಮೀಕ್ಷೆಯ ವೈಜ್ಞಾನಿಕ ಸಿಂಧುತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ, ವಿಶೇಷವಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಭಾರೀ ಆಕ್ರೋಶದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ,.
ಆದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದು , ತಮ್ಮ ಆಪ್ತರ ಸಂಪೂರ್ಣ ಬೆಂಬಲದೊಂದಿಗೆ ಮುಂದುವರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಹಮದಾಬಾದ್‌ನಲ್ಲಿನಡೆದ ಎಐಸಿಸಿ ಕಾರ್ಯಕಾರಿಯಲ್ಲಿ ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸಬೇಕು ಎಂಬ ವಿಷಯ ಪ್ರಸ್ತಾಪವಾದಾಗ ನಾವು ಈ ವಿಚಾರದ ಬಗ್ಗೆ ಚರ್ಚಿಸಿದೆವು.
ದುರ್ಬಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು ಅಧ್ಯಯನದ ಉದ್ದೇಶವಾಗಿದೆ ಎಂಬುದನ್ನು ಮನದಟ್ಟು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.
ಜಾತಿ ಸಮೀಕ್ಷೆಯ ಪರಿಣಾಮಗಳನ್ನು ವಿಶ್ಲೇಷಿಸಲು ವೀರಶೈವ-ಲಿಂಗಾಯತ ಮಹಾಸಭಾ ಏಪ್ರಿಲ್ 15 ಅಥವಾ 16 ರಂದು ಸಮುದಾಯದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಮತ್ತು ಹಿರಿಯ ವ್ಯಕ್ತಿಗಳ ತುರ್ತು ಸಮಾವೇಶಕ್ಕೆ ಕರೆ ನೀಡಿದೆ ಎಂದು ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದ್ದಾರೆ.
ನಾವು ಕಾಂತರಾಜ್ ವರದಿಯನ್ನು ವಿರೋಧಿಸುತ್ತೇವೆ. ಇದು ಅವೈಜ್ಞಾನಿಕ. ಸರ್ಕಾರದ ವೀರಶೈವ-ಲಿಂಗಾಯತ ಸಚಿವರನ್ನು ಭೇಟಿ ಮಾಡಿ, ವರದಿಯಿಂದ ಎದುರಾಗುವ ಅಪಾಯಗಳ ಕುರಿತು ವಿವರಿಸಿದ್ದೇವೆ. ನಮ್ಮ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಯಾದರೆ, ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದು ಮುಂದಿನ ರಾಜಕೀಯ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.
ಅಕ್ಟೋಬರ್-ನವೆಂಬರ್‌ನಲ್ಲಿ ಸಂಭವನೀಯ ನಾಯಕತ್ವ ಬದಲಾವಣೆಗೆ ಮುಂಚಿತವಾಗಿ ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದ್ದಾರೆಯೇ ಎಂದು ರಾಜಕೀಯ ವಿಶ್ಲೇಷಕರು ಊಹಿಸುತ್ತಿದ್ದಾರೆ. ಈ ದಿಟ್ಟ ಕ್ರಮದಿಂದ ಸಿದ್ದರಾಮಯ್ಯ ಅವರ ಸ್ಥಾನಮಾನ ಮತ್ತಷ್ಟು ಭದ್ರವಾಗಲಿಗೆ ಎಂದು ಹಲವರ ಅಭಿಪ್ರಾಯ, ಇದರಿಂದ ಅವರನ್ನು ಸಿಎಂ ಹುದ್ದೆಯಿಂದ ತೆಗೆದುಹಾಕುವ ಯಾವುದೇ ಮಾತು ರಾಜಕೀಯವಾಗಿ ಅಸಾಧ್ಯವಾಗುತ್ತದೆ ಎಂದಿದ್ದಾರೆ.
1994 ರಲ್ಲಿ, ವೀರಪ್ಪ ಮೊಯಿಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ವೆಂಕಟಸ್ವಾಮಿ ವರದಿಯ ನಂತರ ಅಂದಿನ ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿಯಿತು. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಹಿಂದುಳಿದ ಸಮುದಾಯಗಳು ಮತ್ತು ಅಹಿಂದ ಬಣವು ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿದೆ ಮತ್ತು ಹೆಚ್ಚು ಶಕ್ತಿಶಾಲಿಯಾಗಿದೆ, ಸಿದ್ದರಾಮಯ್ಯನವರ ಬೆನ್ನೆಲುಬಾಗಿ ನಿಂತಿದೆ ಎಂದು ಹಿರಿಯ ಹಿಂದುಳಿದ ಸಮುದಾಯದ ನಾಯಕರೊಬ್ಬರು ತಿಳಿಸಿದ್ದಾರೆ.
Advertisement