ಚುನಾವಣೆ ಕಳ್ಳಾಟ ಆರೋಪ: ಕಾಂಗ್ರೆಸ್-BJP ನಡುವೆ ವಾಕ್ಸಮರ

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎಂಬುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ದಾಖಲೆಗಳ ಸಹಿತ ದೇಶದ ಜನರ ಮುಂದಿಟ್ಟಿದ್ದಾರೆ.
File photo
ಬಿಜೆಪಿ, ಕಾಂಗ್ರೆಸ್ ಧ್ವಜದ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಚುನಾವಣೆ ಕಳ್ಳಾಟ ಆರೋಪ ಮಾಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ಸಮರ ಶುರುವಾಗಿದೆ.

ಒಂದು ವರ್ಷದ ನಂತರ ಪತ್ರಿಕಾಗೋಷ್ಠಿ ನಡೆಸುವ ಬದಲು 45 ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಲ್ಲವೇಕೆ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದು, ಇದು ಮತ್ತೊಂದು ನಾಟಕ ಎಂದು ಬಣ್ಣಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎಂಬುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ದಾಖಲೆಗಳ ಸಹಿತ ದೇಶದ ಜನರ ಮುಂದಿಟ್ಟಿದ್ದಾರೆ. ಈ ಎಲ್ಲ ಮಾಹಿತಿಗಳು ಚುನಾವಣಾ ಆಯೋಗವೇ ನೀಡಿದ ದಾಖಲೆಗಳಾಗಿವೆ. ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕವಾದ ಜನಾಕ್ರೋಶವಿದ್ದರೂ ಅವರು ಹೇಗೆ ಮತಗಳ್ಳತನದ ಮೂಲಕ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಯಿತು? ಎನ್ನುವುದಕ್ಕೆ ರಾಹುಲ್‌ ಗಾಂಧಿ ಬಿಡುಗಡೆ ಮಾಡಿರುವ ದಾಖಲೆಗಳೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಚುನಾವಣಾ ಆಯೋಗದ ದುರುಪಯೋಗ, ಮತ ಕಳವು ಮತ್ತು ಅಧಿಕಾರ ದುರ್ಬಳಕೆಯ ಮೂಲಕ ಪ್ರಧಾನಿಯಾಗಿರುವ ಮೋದಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಇಲ್ಲ. ಈ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷ ದೇಶಾದ್ಯಂತ ಧ್ವನಿಯೆತ್ತಿ, ಬಿಜೆಪಿಯ ಈ ಎಲ್ಲ ಅನಾಚಾರಗಳನ್ನು ಪ್ರತಿಯೊಬ್ಬರಿಗೂ ಅರ್ಥ ಮಾಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ದಾಖಲೆಗಳನ್ನು ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸುದೀರ್ಘ 6 ತಿಂಗಳ ಕಾಲ ಹಲವು ಮಂದಿ ಅಧ್ಯಯನ ನಡೆಸಿ, ಮತಗಳ್ಳತನದ ಇಂಚಿಂಚೂ ಮಾಹಿತಿಯನ್ನು ಪತ್ತೆ ಹಚ್ಚಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಕೇವಲ ಮೂರುವರೆ ಲಕ್ಷ ಮತದಾರರಿರುವ ಮಹದೇವಪುರ ಕ್ಷೇತ್ರದಲ್ಲಿ 1ಲಕ್ಷದ 250 ಮತಗಳನ್ನು ಅಕ್ರಮವಾಗಿ ಪಡೆದುಕೊಂಡು ಚುನಾವಣೆಯಲ್ಲಿ ಜಯಿಸಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 5 ರೀತಿಯಲ್ಲಿ ಚುನಾವಣಾ ಅಕ್ರಮ ಎಸಗಲಾಗಿದೆ.

File photo
ಮಹಾರಾಷ್ಟ್ರ, ಕರ್ನಾಟಕದಲ್ಲಿ "ಮತಗಳ್ಳತನ": ರಾಹುಲ್‌ ಗಾಂಧಿಯಿಂದ ಸ್ಫೋಟಕ ದಾಖಲೆ ಬಿಡುಗಡೆ; Video

ಒಟ್ಟು 11,965 ಮಂದಿ ನಕಲಿ ಮತದಾರರು ಈ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ. ಒಬ್ಬನೇ ಮತದಾರ ನಾಲ್ಕಾರು ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವುದು, ಒಬ್ಬನೇ ಮತದಾರ ಈ ಕ್ಷೇತ್ರದ ಜತೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕೂಡ ಮತ ಚಲಾವಣೆ ಮಾಡಿರುವುದು. ಹೀಗೆ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ.

ಒಟ್ಟು 40,009 ಮಂದಿ ನಕಲಿ ವಿಳಾಸ ಹೊಂದಿರುವ ಮತದಾರರನ್ನು ಈ ಕ್ಷೇತ್ರದಲ್ಲಿ ಪತ್ತೆ ಮಾಡಲಾಗಿದೆ. ಮನೆಯ ನಂಬರ್‌ '0' ಎಂದು ನಮೂದಾಗಿರುವ ಸಾವಿರಾರು ವಿಳಾಸವೇ ಇಲ್ಲದ ಮತದಾರರು, ತಂದೆ ಮತ್ತು ಪತಿಯ ಹೆಸರು ಇರುವ ಜಾಗದಲ್ಲಿ ಅರ್ಥವೇ ಇಲ್ಲದಂತೆ ಮನಸೋಇಚ್ಛೆ ಇಂಗ್ಲಿಷ್‌ ಅಕ್ಷರಗಳನ್ನು ನಮೂದಿಸಿರುವುದು ಮತ್ತು ಅಸ್ತಿತ್ವದಲ್ಲಿ ಇಲ್ಲದ ವಿಳಾಸಗಳನ್ನು ನೀಡಿರುವುದು. ಹೀಗೆ ನಕಲಿ ವಿಳಾಸ ನೀಡಿ ಮತಗಳ್ಳತನ ನಡೆಸಲಾಗಿದೆ.

ಒಟ್ಟು 10,452 ಮಂದಿ ಮತದಾರರು ಎಲ್ಲರೂ ಒಟ್ಟಿಗೆ ಬೆರಳೆಣಿಕೆಯಷ್ಟು ಸಂಖ್ಯೆಯ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ. ಸಿಂಗಲ್‌ ಬೆಡ್‌ ರೂಂ ಮನೆಯ ವಿಳಾಸ ನೀಡಿ 80 ಜನ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. 68 ಮಂದಿ ಮತದಾರರ ಗುರುತಿನ ಚೀಟಿಯಲ್ಲಿ ಒಂದು ಖಾಸಗಿ ಕ್ಲಬ್‌ ನ ವಿಳಾಸವಿದೆ. ಈ ಬಗ್ಗೆ ಅಲ್ಲಿ ವಿಚಾರಣೆ ನಡೆಸಿದಾಗ ಗುರುತಿನ ಚೀಟಿ ಹೊಂದಿರುವ ಯಾರೊಬ್ಬರೂ ಅಲ್ಲಿ ವಾಸವಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ.

ಒಟ್ಟು ಈ ಕ್ಷೇತ್ರದಲ್ಲಿ 4,132 ಮಂದಿಯ ಗುರುತಿನ ಚೀಟಿಯಲ್ಲಿ ಫೋಟೋಗಳೇ ಲಭ್ಯವಿಲ್ಲ ಅಥವಾ ಫೋಟೋಗಳನ್ನು ಗುರುತಿಸಲು ಸಾಧ್ಯವಾಗದಂತೆ ಅತ್ಯಂತ ಚಿಕ್ಕದಾಗಿ ನಮೂದಿಸಲಾಗಿದೆ. ಅಂದರೆ ಗುರುತೇ ಹಿಡಿಯಲಾಗದವರು ಕೂಡ ಮತದಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ 33,692 ಮಂದಿಯ ವಯಸ್ಸು 60 ರಿಂದ 90 ವರ್ಷಕ್ಕೂ ಮೇಲ್ಪಟ್ಟಿದೆ. ಹೊಸ ಅಥವಾ ಯುವ ಮತದಾರರು ನರೇಂದ್ರ ಮೋದಿಗೆ ಮತ ನೀಡುತ್ತಾರೆ ಎಂಬ ಮಾತನ್ನು ಆಗಾಗ್ಗೆ ಬಿಜೆಪಿಯವರೇ ಹೇಳುತ್ತಿರುತ್ತಾರೆ. ವಾಸ್ತವದಲ್ಲಿ 98 ವರ್ಷ, 89 ವರ್ಷದ ವಯೋವೃದ್ಧರು ಮೊದಲ ಬಾರಿಗೆ ಚುನಾವಣೆಯಲ್ಲಿ ಮತದಾನ ಮಾಡಿರುವುದು ಈ ಹಗರಣದ ಆಳ, ಅಗಲವನ್ನು ತೋರಿಸುತ್ತದೆ.

File photo
ಮತಗಳ್ಳತನ ಆರೋಪ: ಅಫಿಡವಿಟ್ ನೊಂದಿಗೆ ದಾಖಲೆ ಸಲ್ಲಿಸಿ; ರಾಹುಲ್ ಗಾಂಧಿಗೆ ಕರ್ನಾಟಕ CEO ಸೂಚನೆ

ರಾಹುಲ್‌ ಗಾಂಧಿ ಕೇಳಿದ ಮತದಾರರ ಎಲೆಕ್ಟ್ರಾನಿಕ್ ಮಾಹಿತಿ ಮತ್ತು ಸಿಸಿ ಟಿವಿ ದಾಖಲೆಗಳನ್ನು ನೀಡಿ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದರೆ ಈ ಹಗರಣವನ್ನು ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲು ಸಾಧ್ಯವಿತ್ತು. ಮಾಹಿತಿ ಮುಚ್ಚಿಡುವ ಏಕೈಕ ಉದ್ದೇಶದೊಂದಿಗೆ ಚುನಾವಣಾ ಆಯೋಗವು ತನ್ನ ನಿಯಮಗಳನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿಕೊಂಡಿದೆ. ಇದು ಮಹದೇವಪುರ ಕ್ಷೇತ್ರಕ್ಕೆ ಸೀಮಿತವಾದ ಹಗರಣವಲ್ಲ, ಇಡೀ ದೇಶದಲ್ಲೇ ಇದೇ ಮಾದರಿಯ ಮತಗಳ್ಳತನ ಮಾಡಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಆದರೆ ಇನ್ನೂ ಒಂದೇ ಒಂದು ಸಾಕ್ಷ್ಯ ನೀಡಸು ಅವರಿಗೆ ಸಾಧ್ಯವಾಗುತ್ತಿಲ್ಲ. ಮಹಾದೇವಪುರ ಕ್ಷೇತ್ರದ ಮೇಲೆ ರಾಹುಲ್ ಗಾಂಧಿ ಅವರಿಗೆ ಅನುಮಾನ ಬಂದಿದೆ. ಸರ್ವಜ್ಞ ನಗರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ. ಅಲ್ಲಿ ಮತಗಳ ಪ್ರಮಾಣವೂ ಹೆಚ್ಚಾಗಿದೆ. ಮತ ಯಾಕೆ ಹೆಚ್ಚಾಗಿದೆ ಎನ್ನುವ ಅನುಮಾನಕ್ಕೆ ಅಲ್ಲೂ ಪರಿಶೀಲನೆ ಮಾಡಲಿ. ಒಂದು ವರ್ಷದ ನಂತರ ಪತ್ರಿಕಾಗೋಷ್ಠಿ ನಡೆಸುವ ಬದಲು 45 ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿಲ್ಲವೇಕೆ? ಇದು ಮತ್ತೊಂದು ನಾಟಕವಷ್ಟೇ ಎಂದು ವ್ಯಂಗ್ಯವಾಡಿದರು.

ಮಹದೇವಪುರದಲ್ಲಿ ಮತ ಕಳ್ಳತನ ಆರೋಪ ಮಾಡುವ ಮೂಲಕ ರಾಹುಲ್ ಗಾಂಧಿ ಜನರನ್ನು ವಿಶೇಷವಾಗಿ ಬಿಜೆಪಿಗೆ ಮತ ಹಾಕಿದ ಸಾವಿರಾರು ಹಿಂದೂಗಳನ್ನು ಅವಮಾನಿಸಿದ್ದಾರೆ. "ರಾಹುಲ್ ಗಾಂಧಿ ಹಿಂದೂ ಪ್ರಾಬಲ್ಯದ ಕ್ಷೇತ್ರವಾದ ಮಹದೇವಪುರದಲ್ಲಿ 1,00,250 ಮತ ಕಳ್ಳತನ ಆರೋಪ ಮಾಡುತ್ತಿದ್ದಾರೆ, ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಶಿವಾಜಿನಗರದಲ್ಲಿ ಅಲ್ಲ. ಹಿಂದೂಗಳು ಬಿಜೆಪಿಗೆ ಮತ ಹಾಕಿದರೆ ಅದನ್ನು ವಂಚನೆ ಎಂದು ಕರೆಯಲಾಗುತ್ತದೆ. ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕಿದರೆ ಅದನ್ನು ಜಾತ್ಯತೀತತೆ ಎಂದು ಕರೆಯಲಾಗುತ್ತದೆ. ಈ ಬೂಟಾಟಿಕೆ ಇನ್ನು ಮುಂದೆ ಮತದಾರರನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು,

ಬಿಜೆಪಿ ಕುಶಲತೆಯಿಂದ ಮಹದೇವಪುರವನ್ನು ಗೆದ್ದಿಲ್ಲ. ಹಿಂದೂಗಳು ವಂಶ ರಾಜಕೀಯ, ಓಲೈಕೆ ಮತ್ತು ಹಕ್ಕುಗಳ ವಿರುದ್ಧ ನಿರ್ಣಾಯಕವಾಗಿ ಮತ ಚಲಾಯಿಸಿದ್ದರಿಂದ ನಾವು ಗೆದ್ದಿದ್ದೇವೆ. ಇದರಿಂದ ರಾಹುಲ್ ಗಾಂಧಿ ಕಲಿಯಬೇಕು. ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳು ಕಾಂಗ್ರೆಸ್ ಆಸ್ತಿಯಲ್ಲ. ಮತದಾರರು ಸರ್ವೋಚ್ಚರು. ಜನಾದೇಶವನ್ನು ಸ್ವೀಕರಿಸಿ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಮತ ಕಳ್ಳತನವನ್ನು ಆರಂಭಿಸಿದ್ದೇ ಕಾಂಗ್ರೆಸ್. ಮತಗಳ್ಳತನದಿಂದ ಡಾ. ಬಿ.ಆರ್. ಅಂಬೇಡ್ಕರ್ ಚುನಾವಣೆಯಲ್ಲಿ 13,000 ಮತಗಳಿಂದ ಸೋಲು ಕಂಡಿದ್ದರು. 75,000 ಮತಗಳನ್ನು ಅಮಾನ್ಯವೆಂದು ಘೋಷಿಸಲಾಗಿತ್ತು. ಕರ್ನಾಟಕದಲ್ಲಿ ಮತ ಕಳ್ಳತನ ನಡೆದಿದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ. ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗುತ್ತಿರಲಿಲ್ಲ ಎಂದರು.

ಇದೇ ವೇಳೆ ರಾಹುಲ್ ಗಾಂಧಿಯನ್ನು ಅಪಕ್ವ ರಾಜಕಾರಣಿ ಎಂದು ಕರೆದ ಅವರು, ರಾಹುಲ್ ಅವರನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com