ಆಕಾಶ ನೋಡಿ ಉಗಿಯುವ ಪ್ರಯತ್ನ ಬಿಡಿ, ನಿಮ್ಮ ಮುಖವೇ ಕೊಳಕಾದೀತು: ಅಶೋಕ್'ಗೆ ಪ್ರಿಯಾಂಕ್ ಖರ್ಗೆ ಟಾಂಗ್

ನಿಮಗಾಗಿರುವ ನೋವು, ಹತಾಶೆ, ಸಿಟ್ಟು ಎಲ್ಲವೂ ನಮಗೆ ಅರ್ಥವಾಗುತ್ತದೆ, ನಿಮ್ಮ ಪಕ್ಷದವರ ಮೇಲೆ ತೋರಿಸಲಾಗದ ಹತಾಶೆಯನ್ನು ನಮ್ಮ ಮುಂದೆ ತೋರಿಸುತ್ತಿರುವಿರಿ.
Priyank kharge and ashok
ಪ್ರಿಯಾಂಕ್ ಖರ್ಗೆ ಹಾಗೂ ಆರ್.ಅಶೋಕ್
Updated on

ಬೆಂಗಳೂರು: ನಿಮಗಾಗಿರುವ ನೋವು, ಹತಾಶೆ, ಸಿಟ್ಟು ಎಲ್ಲವೂ ನಮಗೆ ಅರ್ಥವಾಗುತ್ತದೆ, ನಿಮ್ಮ ಪಕ್ಷದವರ ಮೇಲೆ ತೋರಿಸಲಾಗದ ಹತಾಶೆಯನ್ನು ನಮ್ಮ ಮುಂದೆ ತೋರಿಸುತ್ತಿರುವಿರಿ. ಆದರೆ, ಆಕಾಶ ನೋಡಿ ಉಗಿಯುವ ಪ್ರಯತ್ನ ಬಿಡಿ, ನಿಮ್ಮ ಮುಖವೇ ಕೊಳಕಾದೀತು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಟಾಂಗ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮಗಾಗಿರುವ ನೋವು, ಹತಾಶೆ, ಸಿಟ್ಟು ಎಲ್ಲವೂ ನಮಗೆ ಅರ್ಥವಾಗುತ್ತದೆ, ನಿಮ್ಮ ಪಕ್ಷದವರ ಮೇಲೆ ತೋರಿಸಲಾಗದ ಹತಾಶೆಯನ್ನು ನಮ್ಮ ಮುಂದೆ ತೋರಿಸುತ್ತಿರುವಿರಿ. ನಿಮ್ಮ ಸಾಮಾಜಿಕ ಜಾಲತಾಣದ ನಿರ್ವಹಣೆಯನ್ನು ಯಾವುದೋ ವಾಟ್ಸಾಪ್ ಯೂನಿವರ್ಸಿಟಿಯನ್ನು ಅವಲಂಬಿಸಿ ಬದುಕುವ ಪರಾವಲಂಬಿ ರೂ.2 ಕ್ರಿಮಿಗಳ ಕೈಗೆ ಕೊಟ್ಟಿದ್ದೀರಿ, ಅಸಂಬದ್ಧಗಳನ್ನು ಬರೆದು ಅವರು ನಿಮ್ಮ ಮರ್ಯಾದೆ ತೆಗೆಯುತ್ತಿದ್ದಾರೆ.

ಪ್ರಿಯದರ್ಶಿನಿ, ರಾಹುಲ್, ಪ್ರಿಯಾಂಕ್ (ಪ್ರಿಯಾಂಕ ಅಲ್ಲ) ಈ ಹೆಸರುಗಳು ಬೌದ್ಧ ಧರ್ಮದ ಪ್ರಭಾವದಿಂದ ಸಿಕ್ಕಿರುವಂತಹವು, ಅಶೋಕ್ ಎಂಬ ಹೆಸರೂ ಕೂಡ ಬೌದ್ಧ ಧರ್ಮವನ್ನು ಜಗತ್ತಿಗೆ ಪ್ರಚಾರ ಮಾಡಿದ ಇತಿಹಾಸ ಪುರುಷನ ಹೆಸರು ಎನ್ನುವುದಾದರೂ ತಿಳಿದಿದೆಯೇ? ಹಿಂದೂ ಧರ್ಮದ ಬಗ್ಗೆಯೇ ಸರಿಯಾಗಿ ತಿಳಿಯದ ತಮಗೆ ಬೌದ್ಧ ಧರ್ಮ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸಾಂವಿಧಾನಿಕ ಸ್ಥಾನವಾದ ಲೋಕಸಭೆಯ ವಿರೋಧ. ಪಕ್ಷದ ನಾಯಕನಿಗೆ ನಾಲಾಯಕ್ ಎಂಬ ಪದ ಬಳಕೆ ಮಾಡಿರುವುದು ನಿಮ್ಮ ತಿಳುವಳಿಕೆಯನ್ನು ತೋರಿಸುತ್ತದೆ, ನೀವೂ ಸಹ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವವರು ಎಂಬ ಪ್ರಜ್ಞೆ ಇಟ್ಟುಕೊಂಡಿದ್ದರೆ ಒಳ್ಳೆಯದಿತ್ತು. ನಾಲಾಯಕ್ ಯಾರು ಎನ್ನುವುದು ನಿರ್ಧಾರವಾಗುವುದು ನಿಮ್ಮಿಂದ ಅಲ್ಲ, ಅವರವರ ನಡವಳಿಕೆಯಿಂದ.

ಚೀನಾ ಅತಿಕ್ರಮಣದ ಬಗ್ಗೆ ಮಾತಾಡಲು ಹೆದರುವವರು, ಗಲಭೆಪೀಡಿತ ಮಣಿಪುರಕ್ಕೆ ಕಾಲಿಡದವರು, ಅಮೇರಿಕಾದ ಹುಕುಂಗೆ ಹೆದರಿ ಆಪರೇಷನ್ ಸಿಂಧೂರ ನಿಲ್ಲಿಸಿದವರು, ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಪದವೂ ಮಾತನಾಡಲಾಗದವರು, ಅಂತರರಾಷ್ಟ್ರೀಯ ಸಂಬಂಧವನ್ನು ಹಾಳುಗೆಡವಿದವರು, ಟ್ರಂಪ್ ಹೆಸರನ್ನು ಪ್ರಸ್ತಾಪಿಸಲು ಹೆದರುವವರು, 11 ವರ್ಷದಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಾಗದವರು ಇವರನ್ನು “ ನಾಲಾಯಕ್” ಎಂದು ಕರೆದರೆ ಸೂಕ್ತವಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

Priyank kharge and ashok
ನಮ್ಮ ಮೆಟ್ರೋ ಫೇಸ್-2 ಉದ್ಘಾಟನೆ ಆಹ್ವಾನ ವಿಚಾರ: ಖರ್ಗೆ-ಆಶೋಕ್ ಜಟಾಪಟಿ; ಹೆಸರು ಸೇರ್ಪಡೆ ನಿಮಗೆ ಸಿಕ್ಕ ಸಮ್ಮಾನವಲ್ಲ, ಭಿಕ್ಷೆ ಅಷ್ಟೇ ಎಂದ ಸಚಿವ

ಖರ್ಗೆ ಸಾಹೇಬರ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ, ಆಕಾಶ ನೋಡಿ ಉಗಿಯುವ ಪ್ರಯತ್ನ ಬಿಡಿ, ನಿಮ್ಮ ಮುಖವೇ ಕೊಳಕಾದೀತು.ಪೋಕ್ಸೋ ಪ್ರಕರಣದ ಆರೋಪಿ ಕಾಲಿಗೆ ಬಿದ್ದು ಕುರ್ಚಿ ಉಳಿಸಿಕೊಳ್ಳಬೇಕಾದ ಹಾಗೂ ನಿಮಗೆ ಏಡ್ಸ್ ಇಂಜಕ್ಷನ್ ಚುಚ್ಚಲು ಪ್ರಯತ್ನಿಸಿದ ಅತ್ಯಾಚಾರ ಆರೋಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಸ್ತಿತ್ವ ಉಳಿಸಿಕೊಳ್ಳಬೇಕಾದ ನಿಮ್ಮ ದಯನೀಯ ಸ್ಥಿತಿಯು ಮರುಕ ಹುಟ್ಟಿಸುತ್ತಿದೆ.

ಪ್ರಧಾನಿ ಕಾರ್ಯಕ್ರಮದಲ್ಲಿ ನಿಮ್ಮನ್ನು ಅವಾಯ್ಡ್ ಮಾಡಿ ತಾವು ಕುರ್ಚಿ ಪಡೆದುಕೊಂಡು ಬೀಗಿದ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅರ್ಹತೆಯಿಂದ ಹುದ್ದೆ ಪಡೆದಿದ್ದಾರೋ ಅಥವಾ ಅಪ್ಪನ ಹೆಸರಿನಿಂದ ಹುದ್ದೆ ಪಡೆದಿದ್ದಾರೋ ಎನ್ನುವುದನ್ನು ಚಿಂತಿಸಿ ಉತ್ತರಿಸಿ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಪೋಸ್ಟ್ ಮಾಡಿದ್ದ ಆರ್.ಅಶೋಕ್ ಅವರು, 83 ವರ್ಷದ ಇಳಿ ವಯಸ್ಸಿನಲ್ಲೂ 55 ವರ್ಷದ ಚಿರಯುವಕ, ನಾಲಾಯಕ್ ರಾಹುಲ್ ಗಾಂಧಿ ಅವರೇ ನಮ್ಮ ನಾಯಕ ಎಂದು ಸಲಾಮು ಹೊಡೆದುಕೊಂಡು ಓಡಾಡುವ ದುಸ್ಥಿತಿ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರಬಾರದಿತ್ತು ಎಂದು ವ್ಯಂಗ್ಯವಾಡಿದ್ದರು.

Priyank kharge and ashok
ನಮ್ಮ ಮೆಟ್ರೋ ಫೇಸ್-2 ಉದ್ಘಾಟನೆ ಆಹ್ವಾನ ವಿಚಾರ: ಖರ್ಗೆ-ಆಶೋಕ್ ಜಟಾಪಟಿ; ಹೆಸರು ಸೇರ್ಪಡೆ ನಿಮಗೆ ಸಿಕ್ಕ ಸಮ್ಮಾನವಲ್ಲ, ಭಿಕ್ಷೆ ಅಷ್ಟೇ ಎಂದ ಸಚಿವ

ತಮ್ಮ ಮಕ್ಕಳಿಗೆಲ್ಲಾ ಪ್ರಿಯದರ್ಶಿನಿ, ಪ್ರಿಯಾಂಕ, ರಾಹುಲ್ ಎಂದು ಹೆಸರಿಟ್ಟು ನಕಲಿ ಗಾಂಧಿ ಕುಟುಂಬಕ್ಕೆ ಎಷ್ಟು ನಿಷ್ಠರಾಗಿದ್ದರೂ ಕರ್ನಾಟಕದ ಅತ್ಯಂತ ಹಿರಿಯ ನಾಯಕರಾದ ನಿಮ್ಮ ತಂದೆಯವರಿಗೆ ಮುಖ್ಯಮಂತ್ರಿ ಸ್ಥಾನ ಇಲ್ಲ. ಮ್ಮ ತಂದೆ ಎಐಸಿಸಿ ಅಧ್ಯಕ್ಷರು ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತಾ ಮೈಮರೆಯಬೇಡಿ, ಸಮಾಧಾನವೂ ಪಟ್ಟುಕೊಳ್ಳಬೇಡಿ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಾನು ಎಐಸಿಸಿ ಅಧ್ಯಕ್ಷ ಆಗುವುದಿಲ್ಲ ಎಂದು ನಕಲಿ ಗಾಂಧಿ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದಕ್ಕೆ ಅನಿವಾರ್ಯವಾಗಿ ನಿಮ್ಮ ತಂದೆಯವರನ್ನು ನಾಮಕಾವಸ್ತೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಒಲ್ಲದ ಮನಸ್ಸಿನಿಂದ ತಂದು ಕೂರಿಸಿದ್ದಾರೆ.

ಒಂದು ನೆನಪಿಟ್ಟುಕೊಳ್ಳಿ. ಏನೇ ಮಾಡಿದರೂ ನೀವು ಮತ್ತು ನಿಮ್ಮ ಕುಟುಂಬ, ನಕಲಿ ಗಾಂಧಿ ಕುಟುಂಬಕ್ಕಿಂತ, ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗಿಂತ ಕೆಳಗೇ ಇದ್ದೀರಿ, ಮುಂದೆಯೂ ಇರುತ್ತೀರಿ. ಒಂದು ವೇಳೆ ಕಾಂಗ್ರೆಸ್ ಪಕ್ಷ ಉಳಿದರೆ, ಬಹುಶಃ ಭವಿಷ್ಯದಲ್ಲೂ ತಾವು ಅವರ ಮಕ್ಕಳಿಗೆ ಸಲಾಮು ಹೊಡೆದುಕೊಂಡು ಜೇವನ ಸಾಗಿಸಬೇಕಾಗಬಹುದು. ನಿಮಗೆ ಸಿಕ್ಕಿರುವ ಸಚಿವ ಸ್ಥಾನವೂ ನಿಮಗೆ ದೊರಕಿದ ಸಮ್ಮಾನವಲ್ಲ ಅಥವಾ ನಿಮ್ಮ ಪ್ರತಿಭೆಗೆ ಸಿಕ್ಕ ಅವಕಾಶವಲ್ಲ, ಅದು ನಿಮ್ಮ ತಂದೆಯವರನ್ನು ಸಮಾಧಾನ ಪಡಿಸುವ ಸಮಾಧಾನಕರ ಬಹುಮಾನ ಅಷ್ಟೇ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com