

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕುಸ್ತಿ ಕದನ ನಡೆಯುತ್ತಿರುವ ನಡುವಲ್ಲೇ ರಾಜ್ಯ ಬಿಜೆಪಿಯಲ್ಲೂ ರೆಬೆಲ್ಸ್ ಟೀಮ್ ಮತ್ತೆ ಸಕ್ರಿಯವಾಗಿದೆ.
ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕುಮಾರ್ ಬಂಗಾರಪ್ಪ, ಶ್ರೀಮಂತ್ ಪಾಟೀಲ್, ಬಿ.ವಿ. ನಾಯಕ್, ಬಿ.ಪಿ. ಹರೀಶ್, ಮಾಜಿ ಸಂಸದ ಸಿದ್ದೇಶ್ವರ ಮತ್ತು ಜೆಡಿಎಸ್‌ನ ಎನ್.ಆರ್. ಸಂತೋಷ್ ಸೇರಿದಂತೆ ಹಲವು ರೆಬೆಲ್ ನಾಯಕರು ದೆಹಲಿಗೆ ತೆರಳಿದ್ದಾರೆ.
ಮಂಗಳವಾರ ದೆಹಲಿ ತಲುಪಿರುವ ಬಂಡಾಯ ನಾಯಕರ ಗುಂಪು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದು, ರಾಜ್ಯ ಬಿಜೆಪಿಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲು ಮುಂದಾಗಿದ್ದಾರೆ.
ಇಷ್ಟು ದಿನ ಸೈಲೆಂಟ್ ಆಗಿದ್ದ ರೆಬೆಲ್ಸ್ ತಂಡವು ರಾಜ್ಯ ನಾಯಕತ್ವದ ವಿರುದ್ಧ ತಮ್ಮ ಅಸಮಾಧಾನವನ್ನು ಹೈಕಮಾಂಡ್ ಮುಂದೆ ಮಂಡಿಸಲು ಮತ್ತೆ ಆಕ್ಟಿವ್ ಆಗಿದ್ದಾರೆ.
ಈ ನಡುವೆ ಬಂಡಾಯ ನಾಯಕರ ದೆಹಲಿ ಭೇಟಿಗೆ ಬಿಜೆಪಿ ಹಿರಿಯ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದ್ದು, ಇದ್ದಕ್ಕಿದ್ದಂತೆ ಬಂಡಾಯಕ್ಕೆ ಕಾರಣ ಕುರಿತು ಪ್ರಶ್ನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಕೇಂದ್ರ ನಾಯಕತ್ವಕ್ಕೆ ಹತ್ತಿರ ಇರುವ ನಾಯಕರು ಮಾತನಾಡಿದ್ದು, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಸಲು ಹೈಕಮಾಂಡ್ ನಿರ್ಧರಿಸಿರಬಹುದು. ಹೀಗಾಗಿ, ಮನವಿಗಾಗಿ ದೆಹಲಿಗೆ ಬಂದಿರಬಹುದು ಎಂದು ಹೇಳಿದ್ದಾರೆ.
ಈ ನಡುವೆ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ವಿಜಯೇಂದ್ರ ಅವರು ನಿರಾಕರಿಸಿದ್ದಾರೆ. ಬಂಡಾಯದಿಂದ ಈಗಾಗಲೇ ಕೆಲ ನಾಯಕರು ಭಾರೀ ಬೆಲೆ ತೆತ್ತಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂದು ಬಿಜೆಪಿ ಶಾಸಕ ಬಸನಗೊಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಈ ಮೂಲಕ ಭಿನ್ನಮತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರವಾನಿಸಿದೆ.
ಇತರೆ ಪಕ್ಷಗಳಿಂದ ಬಿಜೆಪಿಗೆ ಬಂದ ಕೆಲ ನಾಯಕರೇ ಪಕ್ಷದ ವಿರುದ್ಧ ಹೆಚ್ಚು ಬಂಡಾಯ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಕುಮಾರ್ ಬಂಗಾರಪ್ಪ ಇಬ್ಬರೂ ಕಾಂಗ್ರೆಸ್‌ನಿಂದ ಬಂದವರಾಗಿದ್ದಾರೆ. ಕುಮಾರ್ ಬಂಗಾರಪ್ಪ ಅವರು ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರರಾಗಿದ್ದರೆ, ಅವರ ಸಹೋದರ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ನಲ್ಲಿ ಸಚಿವರಾಗಿ ಉಳಿದಿದ್ದಾರೆಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ದೆಹಲಿಯಲ್ಲಿ ಬಂಡಾಯ ನಾಯಕರು ಒಟ್ಟುಗೂಡಿದ್ದು, ಕೇಂದ್ರ ನಾಯಕರು ಅವರ ಅಸಮಾಧಾನವನ್ನು ಆಲಿಸುತ್ತಾರೋ ಅಥವಾ ವಿಜಯೇಂದ್ರ ಅವರನ್ನು ಬೆಂಬಲಿಸಲು ಎಂಬುದರ ಕುರಿತು ಕುತೂಹಲಗಳು ಮೂಡತೊಡಗಿವೆ.
ಒಂದು ವೇಳೆ ಹೈಕಮಾಂಡ್ ವಿಜಯೇಂದ್ರ ಅವರಿಗೆ ಬೆಂಬಲ ನೀಡಿದ್ದೇ ಆದರೆ, ಇದು ಮುಂಬರುವ ದಿನಗಳಲ್ಲಿ ಹೆಚ್ಚಿನ ಪಕ್ಷಾಂತರಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
Advertisement