

ಬೆಂಗಳೂರು: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಕೂಡ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ಸೋಮವಾರದಿಂದ ಬೆಳಗಾವಿಯಲ್ಲಿ ಪ್ರಾರಂಭವಾದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಮೆಕ್ಕೆಜೋಳ ಸಮಸ್ಯೆಗೆ ಸಂಬಂಧಿಸಿದಂತೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರು ಈಗಾಗಲೇ ಸರ್ಕಾರಕ್ಕೆ ಹೊರೆಯಾಗುವಂತಹ ನಿರ್ಧಾರವನ್ನು ಕೈಗೊಂಡಿದ್ದೇವೆ. ಅದೇ ರೀತಿ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೂ ರಾಜ್ಯ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸಿದೆ. ಇನ್ನೇನಿದ್ದರೂ ಕೇಂದ್ರ ಸರ್ಕಾರದ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ದೃಷ್ಟಿಹರಿಸಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಮನ್ವಯದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಎಲ್ಲದರ ಬೆಲೆಯೂ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆಯೇ ಹೊರತು, ರಾಜ್ಯ ಸರ್ಕಾರವಲ್ಲ. ಹೀಗಾಗಿ ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಈ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನೆರವಾಗಬೇಕು ಎಂದು ಒತ್ತಾಯಿಸಿದರು.
ಎಲ್ಲವನ್ನೂ ರಾಜ್ಯ ಸರ್ಕಾರವೇ ನಿಭಾಯಿಸುವುದಾದರೆ ಕೇಂದ್ರ ಸರ್ಕಾರದ ಪಾತ್ರವೇನು? ಕೇಂದ್ರ ಸರ್ಕಾರ ಯಾವ ವಿಚಾರವಾಗಿಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಾವು ಸಾಧ್ಯವಾದಷ್ಟು ರೈತರಿಗೆ ಪರಿಹಾರ ಒದಗಿಸಲು ಸಿದ್ಧ. ಆದರೆ ಕೇಂದ್ರ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿ. ಈ ನಿಟ್ಟಿನಲ್ಲಿ ನಾವು ಬೆಳಗಾವಿ ಅಧಿವೇಶನ ಸದ್ಭಳಕೆ ಮಾಡಿಕೊಳ್ಳೋಣ ಎಂದರು.
ರಾಜ್ಯ ಬಿಜೆಪಿ ಸಂಸದರು ಇಲ್ಲಿಯವರೆಗೆ ಉತ್ತರ ಕರ್ನಾಟಕವೂ ಸೇರಿದಂತೆ ಸಮಗ್ರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಏಕೆ ಮಾತನಾಡುತ್ತಿಲ್ಲ? ಕರ್ನಾಟಕದ ಇತಿಹಾಸದಲ್ಲಿ ಇದುವರೆಗೂ ಯಾರೂ ಕೂಡ ನಾವು ಮಾಡಿದಷ್ಟು ಕೆಲಸಗಳನ್ನು ಇಲ್ಲಿಯವರೆಗೆ ಮಾಡಿಲ್ಲ ಎಂದರು.
Advertisement