ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!
ಬೆಳಗಾವಿ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬಿಕ್ಕಟ್ಟಿನ ಸಮಸ್ಯೆಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬುಧವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ರಾಜಕೀಯ ಅಸ್ಥಿರತೆ ಹಾಗೂ ಸಿಎಂ ಕುರ್ಚಿ ಬಗ್ಗೆ ಸಾರ್ವಜನಿಕರ ಚರ್ಚೆಯಿಂದ ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಆರ್. ಅಶೋಕ್, ನನ್ನ ಕಣ್ಣೆದುರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಳಿತಿದ್ದಾರೆ. ಆದರೆ ಪದೇ ಪದೇ ಕಾಂಗ್ರೆಸ್ ನಲ್ಲಿ ನಾಯಕತ್ವದ ಬಗ್ಗೆಯೇ ಗಲಾಟೆ ನಡೆಯುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿಯವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ 'ಮುಖ್ಯಮಂತ್ರಿ' ಎಂದು ಸ್ವಾಗತಿಸಿ ಹಾಕಿದ್ದ ಮೆಸೇಜ್ ಅನ್ನು ಉಲ್ಲೇಖಿಸಿ ಆರ್. ಅಶೋಕ್ ಕಾಲೆಳೆದರು. 'ಕಣ್ತಪ್ಪಿನಿಂದ ಆಗಿದೆ ಎಂದು ಸಮರ್ಥನೆ ಕೊಡಲಾಗುತ್ತಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಬೇಕು' ಎಂದು ಆರ್ ಅಶೋಕ್ ಆಗ್ರಹಿಸಿದರು.
"ಬೈರತಿ ಕಿಂಗ್ ಅಲೈವ್: ಸಿಎಂ ಕುರ್ಚಿ ವಿಚಾರವಾಗಿ ಕಾಂಗ್ರೆಸ್ ನಾಯಕರು ಪದೇ ಪದೇ ಯಾಕೆ ಹೇಳಿಕೆ ನೀಡ್ತಾರೆ ಎಂದು ಪ್ರಶ್ನಿಸಿದ ಆರ್. ಅಶೋಕ್, ಬೈರತಿ ಸುರೇಶ್ ಕೂಡ 'ಕಿಂಗ್ ಅಲೈವ್' (King is Alive) ಅಂತಾರೆ. ರಾಜ್ಯದಲ್ಲಿ ಈ ವಿಚಾರದಲ್ಲಿ ಡೌಟ್ ಬಂದಿದೆ. ಇದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಆಡಳಿತ ಯಂತ್ರ ಕುಸಿದು ಹೋಗಿದೆ' ಎಂದು ಆರೋಪಿಸಿದರು.
ಪ್ರಮುಖ ವಿಷಯದಿಂದ ಬೇರೆಡೆಗೆ ಚರ್ಚೆ ಹೋಗದಂತೆ ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ನಾನು ಯಾಕೆ ನಾಯಕತ್ವ ವಿಚಾರವಾಗಿ ಮಾತನಾಡಬಾರದು. ಸಿದ್ದರಾಮಯ್ಯ ನಾಯಕತ್ವ ಬಗ್ಗೆ ಮಾತನಾಡುತ್ತಿಲ್ಲ. ನಾಯಕತ್ವದ ಸಮಸ್ಯೆ ಇದ್ದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುವುದಿಲ್ಲ ಎಂದರು.
ಕೆರಳಿದ ಬೈರತಿ ಸುರೇಶ್: ತಮ್ಮ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಚಿವ ಬೈರತಿ ಸುರೇಶ್ ಅವರು ಆರ್ ಅಶೋಕ್‌ಗೆ ತಿರುಗೇಟು ನೀಡಿದರು. 'ಹೌದು, ನಾನು ಕಿಂಗ್ ಈಸ್ ಅಲೈವ್ ಅಂತ ಹೇಳಿದ್ದೆ. ಮುಖ್ಯಮಂತ್ರಿ ಇದ್ದಾರೆ, ಹೈಕಮಾಂಡ್ ಇದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ನಿಯತ್ತು. ನಾನು ಸಿದ್ದರಾಮಯ್ಯ ಸಾಹೇಬ್ರಿಗೆ ನಿಯತ್ತು. ಮೊದಲು ನಿಮ್ಮ ತಟ್ಟೆಯ ಹೆಗ್ಗಣ ನೋಡಿಕೊಳ್ಳಿ. ಸುಮ್ಮನೆ ಏನೇನೋ ಮಾತಾಡಬೇಡಿ. ನಿಮ್ಮ ಅಧ್ಯಕ್ಷರನ್ನೇ ಚೇಂಜ್ ಮಾಡ್ತೇವೆ ಅಂತಿದ್ದೀರಲ್ಲ, ಮೊದಲು ನಿಮ್ಮದನ್ನ ಸರಿಮಾಡಿ' ಎಂದು ಗುಡುಗಿದರು.
ಈ ಹಂತದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ನಿಮ್ಮ ಅವಧಿಯಲ್ಲಿ ಐವರನ್ನ ಚೇಂಜ್ ಮಾಡಿದ್ರಿ. ಯಡಿಯೂರಪ್ಪನವರನ್ನ ಕೆಳಗಿಳಿಸಿದ್ರಿ' ಎಂದು ನೆನಪಿಸಿ ಆರ್ ಅಶೋಕ್ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ಹೆಚ್ ಸಿ ಬಾಲಕೃಷ್ಣ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದರು.
ಶ್ವೇತಪತ್ರ ಹೊರಡಿಸಲು ಆಗ್ರಹ: ಸಮರ್ಥ ನಾಯಕತ್ವವು ಉತ್ತರ ಕರ್ನಾಟಕ ಮತ್ತು ಇಡೀ ರಾಜ್ಯಕ್ಕೆ ಒಳ್ಳೆಯದನ್ನು ಮಾಡುತ್ತದೆ ಎಂದು ಪ್ರತಿಪಾದಿಸಿದ ಅಶೋಕ್, ಸರ್ಕಾರ ಇಲ್ಲಿಯವರೆಗೂ ಉತ್ತರ ಕರ್ನಾಟಕದ ಜನರಿಗೆ ನೀಡಿದ ಭರವಸೆಗಳು ಮತ್ತು ಅವುಗಳಲ್ಲಿ ಎಷ್ಟನ್ನು ಈಡೇರಿಸಲಾಗಿದೆ ಎಂಬುದರ ಕುರಿತು "ಶ್ವೇತಪತ್ರ" ಹೊರಡಿಸಬೇಕು. ಪ್ರಾದೇಶಿಕ ಅಸಮಾನತೆ ಕುರಿತು ಎರಡು ದಶಕಗಳಷ್ಟು ಹಳೆಯದಾದ ಡಿ.ಎಂ ನಂಜುಂಡಪ್ಪ ಸಮಿತಿ ವರದಿ ಆಧರಿಸಿ ಖರ್ಚು ಮಾಡಿರುವ ಹಣದ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಒತ್ತಾಯಿಸಿದರು.


