

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿದೆ ಸಿಎಂ-ಡಿಸಿಎಂ ಸ್ಥಾನ ಸಿಗಬೇಕೆಂದು ಅವರ ಬೆಂಬಲಿಗರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ಈ ಕುರಿತು ಕೈ ಪಾಳಯದಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಈ ಹಗ್ಗಜಗ್ಗಾಟದಲ್ಲಿ ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿದ್ದರಾಮಯ್ಯ ಬಣದ ಬೆಂಬಲ ಹೊಂದಿರುವ ಪರಮೇಶ್ವರ್ ಅವರು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಮುಂದಾಗಿದ್ದು, ಡಿಸೆಂಬರ್ 26ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೂ ಮುನ್ನ ಅವರು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನೂ ಭೇಟಿಯಾಗುವ ಸಾಧ್ಯತೆಗಳಿದ್ದು, ಪರಮೇಶ್ವರ್ ಅವರು ಸೋನಿಯಾ ಗಾಂಧಿಯವರೊಂದಿಗೆ ಉತ್ತಮ ಸಂಬಂಧವಿರುವ ಹಿನ್ನೆಲೆಯಲ್ಲಿ ಈ ಭೇಟಿ ತೀವ್ರ ಕುತೂಹಲ ಸೃಷ್ಟಿಸಿದೆ.
ಇತ್ತೀಚಿನ ಕೆಲ ತಿಂಗಳುಗಳಿಂದ ಪರಮೇಶ್ವರ್ ಅವರು ದೆಹಲಿಗೆ ಭೇಟಿ ನೀಡಿರಲಿಲ್ಲ. ಆದರೂ ಅವರ ಬೆಂಬಲಿಗರು ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ದೊರಕಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಗ್ಗ ಜಗ್ಗಾಟದಲ್ಲಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಾಧ್ಯವಾಗದಿದ್ದರೆ, ಉಪಮುಖ್ಯಮಂತ್ರಿ ಹುದ್ದೆ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಕೂಡ ದಲಿತ ಕೋಟಾದಡಿ ಬಲವಾದ ಸ್ಪರ್ಧಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು ನೀವು (ಮಾಧ್ಯಮಗಳು) ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರುಗಳನ್ನು ಮುಂದಿಟ್ಟುಕೊಂಡಿದ್ದೀರಿ. ಆದರೆ, ನಾನು ಈಗಾಗಲೇ ಹಲವು ಬಾರಿ ಹೇಳಿದಂತೆ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆಂದು ಹೇಳಿದರು.
ರಾಜ್ಯ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಗೊಂದಲವನ್ನು ಹೈಕಮಾಂಡ್ ಶೀಘ್ರದಲ್ಲೇ ಬಗೆಹರಿಸಬೇಕು. “ಫೆಬ್ರವರಿ 2026ರಲ್ಲಿ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ನಾಯಕತ್ವದ ಗೊಂದಲ ಕೊನೆಗೊಳ್ಳಬೇಕು ಎಂದು ತಿಳಿಸಿದರು.
ಹೈಕಮಾಂಡ್ ಇಂತಹ ಅನೇಕ ಪರಿಸ್ಥಿತಿಗಳನ್ನು ಎದುರಿಸಿದೆ. ಇಚ್ಛಿಸಿದರೆ ಕ್ಷಣಾರ್ಧದಲ್ಲೇ ಸಮಸ್ಯೆ ಬಗೆಹರಿಸಬಲ್ಲದು. ಆದರೆ, ಸರಿಯಾದ ಸಮಯಕ್ಕಾಗಿ ಕಾಯುತ್ತಿರುವಂತೆ ಕಾಣುತ್ತದೆ ಎಂದರು.
ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ಪರಿಸ್ಥಿತಿ ಎದುರಾದರೆ ಮಾತ್ರ ದೆಹಲಿಗೆ ಹೋಗುತ್ತೇನೆ. ಅತೀವ್ರ ಚಳಿ, ಮಾಲಿನ್ಯದಿಂದ ಆರೋಗ್ಯ ಹದಗೆಡಿಸಿಕೊಳ್ಳಲು ಬಯಸುವುದಿಲ್ಲ ಎಂದು ತಿಳಿಸಿದರು.
Advertisement