

ನವದೆಹಲಿ/ಬೆಂಗಳೂರು: ಮತಗಳ್ಳತನ ಕುರಿತ ತಮ್ಮ ಹೇಳಿಕೆಯನ್ನು ತಿರುಚಿ ತಪ್ಪಾದ ಅರ್ಥದಲ್ಲಿ ವರದಿ ನೀಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದು, ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿರಾಕರಿಸಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಡಿಕೆ.ಶಿವಕುಮಾರ್ ಅವರು, ಅಧಿಕೃತ ಕೆಲಸ ಮೇರೆಗೆ ದೆಹಲಿಗೆ ಬಂದಿದ್ದೇನೆ. ನನ್ನ ಇಲಾಖೆಗಳ ಬಾಕಿ ಕೆಲಸಗಳ ಕುರಿತು ಕೇಂದ್ರ ಸಚಿವರ ಭೇಟಿ ಮಾಡಲು ಬಂದಿದ್ದೇನೆಯೇ ವಿನಃ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲು ಬಂದಿಲ್ಲ. 2 ದಿನಗಳಲ್ಲಿ ಪಕ್ಷದ ಹೈಕಮಾಂಡ್ ಭೇಟಿ ಮಾಡುವ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಫಲತೆಗೆ ಕಾರಣಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರ ಚುನಾವಣಾ ಪ್ರಾಧಿಕಾರ (ಸಿಇಎ) ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ನೇತೃತ್ವದ ಸಮಿತಿ ಈಗಾಗಲೇ ಚರ್ಚೆ ನಡೆಸಿದೆ ಎಂದು ಹೇಳಿದರು.
ರಾಜ್ಯದ ನಾಯಕರು ಕೂಡ ಮಿಸ್ತ್ರಿ ನೇತೃತ್ವದ ಸಮಿತಿ ಬಳಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. “ಕಾರಣಗಳು ಏನು ಎಂಬುದು ಸಮಿತಿಗೆ ತಿಳಿದಿದೆ. ಈ ವಿಷಯವನ್ನು ಪಕ್ಷದ ಉನ್ನತ ನಾಯಕತ್ವ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ನೇಮಕ ಮತ್ತು ಮತದಾರರ ಪಟ್ಟಿ ಪರಿಶೀಲನೆ ವಿಷಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಎತ್ತಿಹಿಡಿಯುತ್ತಿರುವ ‘ವೋಟ್ ಚೋರಿ’ ಇವೆರಡೂ ವಿಭಿನ್ನ ವಿಚಾರಗಳಾಗಿವೆ ಎಂದರು.
ಇದೇ ವೇಳೆ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕುರಿತು ಮಾತನಾಡಿ, “ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ನಾನು ಅವರನ್ನು ಭೇಟಿಯಾದೆ. ನನ್ನಂತೆ ಅನೇಕ ನಾಯಕರು ಅವರನ್ನು ಭೇಟಿ ಮಾಡುತ್ತಾರೆ. ಇದರಲ್ಲಿ ರಾಜಕೀಯ ಅರ್ಥವಿಲ್ಲ ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ವಿಚಾರ ರಾಜ್ಯ ಮಟ್ಟದ ವಿಷಯವಾಗಿದ್ದು, ಅದನ್ನು ರಾಜ್ಯದ ನಾಯಕರು ತಾವೇ ಪರಿಹರಿಸಿಕೊಳ್ಳಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ, ಎಲ್ಲ ಗೊಂದಲಗಳಿಗೆ ತೆರೆ ಬೀಳಬೇಕ. ಎಲ್ಲಾ ನಾಯಕರು ಖರ್ಗೆ ಅವರ ಹೇಳಿಕೆಯನ್ನು ಪಾಲಿಸಬೇಕು ಎಂದು ಹೇಳಿದರು.
ಇದಲ್ಲದೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಕಾರ್ಯಕರ್ತರ ಶ್ರಮದ ಫಲ ಎಂಬ ಖರ್ಗೆ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಆ ಶ್ರಮವನ್ನು ಗುರುತಿಸಿ ನಿಗಮ ಮತ್ತು ಮಂಡಳಿಗಳಂತಹ ಹುದ್ದೆಗಳ ಮೂಲಕ ಕಾರ್ಯಕರ್ತರಿಗೆ ಗೌರವ ನೀಡಬೇಕು ಎಂದು ಹೇಳಿದರು
Advertisement