CM ಕುರ್ಚಿ ಕದನ: ಸುರ್ಜೇವಾಲಾರನ್ನು Sideline ಮಾಡಿತೇ ಹೈಕಮಾಂಡ್? ಇದ್ದಕ್ಕಿದ್ದಂತೆ ಸೈಲೆಂಟಾಗಿದ್ದೇಕೆ ಸಮನ್ವಯಕಾರ?
ಬೆಂಗಳೂರು: ರಾಜ್ಯದಲ್ಲಿನ ಸಣ್ಣಪುಟ್ಟ ವಿಷಯಗಳಿಗೂ ಪ್ರತ್ಯಕ್ಷವಾಗುತ್ತಿದ್ದ ಹಾಗೂ ಸರಣಿ ಸಭೆ ನಡೆಸಿ ಸ್ವತಃ ಶಾಸಕರು, ಸಚಿವರ ಅಹವಾಲುಗಳನ್ನು ಆಲಿಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಾಯಕತ್ವ ಬಿಕ್ಕಟ್ಟಿನಂತಹ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದರೂ, ಮೌನಕ್ಕೆ ಜಾರಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಅಧಿಕಾರ ಸಮತೋಲನ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುರ್ಜೇವಾಲಾ ಅವರು, ಸ್ವಯಂಪ್ರೇರಿತವಾಗಿ ಈ ವಿಚಾರದಲ್ಲಿ ಮೌನ ತಾಳಲು ನಿರ್ಧಾರ ಕೈಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ನಾಯಕತ್ವ ವಿಚಾರ ಸಂಬಂಧ ಸುರ್ಜೇವಾಲಾ ಅವರು ಈಗಾಗಲೇ ಹೈಕಮಾಂಡ್'ಗೆ 2 ಬಾರಿ ಪತ್ರ ಬರೆದಿದ್ದರು. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಹಾಗೂ ತಮ್ಮ ಪ್ರಭಾವ ಕುಗ್ಗುತ್ತಿರುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ವಿಚಾರದಿಂದ ದೂರ ಸರಿದಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲೂ ಸೂರ್ಜೆವಾಲಾ ಅವರು ಭಾಗಿಯಾಗದಿರುವುದು ಈ ಚರ್ಚೆಗಳಿಗೆ ಇಂಬು ನೀಡುತ್ತಿವೆ.
ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸುರ್ಜೇವಾಲಾ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೆ ಕೆ.ಸಿ. ವೇಣುಗೋಪಾಲ್ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿರುವುದು ಕಂಡು ಬಂದಿತ್ತು. ವೇಣುಗೋಪಾಲ್ ಅವರು ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದರು.
ಸುರಜೇವಾಲಾ ಅವರ ಆಪ್ತ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ ಈಗಾಗಲೇ ಅಧಿಕಾರದಲ್ಲಿದ್ದು, ಉತ್ತಮ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ, ಅವರು ಜಾರ್ಖಂಡ್‌ನಂತಹ ಇತರೆ ರಾಜ್ಯಗಳತ್ತ ಹೆಚ್ಚಿನ ಗಮನ ಹರಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ಮಾತನಾಡಿ, ರಾಜ್ಯದಲ್ಲಿ ನಾಯಕತ್ವದ ಗೊಂದಲ ತೀವ್ರವಾಗಿದ್ದು, ಈ ವಿಚಾರದಲ್ಲಿ ಸುರಜೇವಾಲಾ ಅವರು ಸಂಪೂರ್ಣವಾಗಿ ಸ್ವಯಂ ಇಚ್ಛೆಯಿಂದ ದೂರ ಉಳಿದಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಸಿದ್ದು ಆಪ್ತರು ಸುರ್ಜೇವಾಲಾ ಅವರು ಪಕ್ಷಪಾತ ಮಾಡುತ್ತಿದ್ದಾರೆಂದು ಹೈಕಮಾಂಡ್'ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸುರ್ಜೇವಾಲಾ ಅವರನ್ನು ಸೈಡ್ ಲೈನ್ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಅಸಮಾಧಾನಗೊಂಡಿದ್ದು, ಸ್ವಯಂಪ್ರೇರಿತರಾಗಿ ರಾಜ್ಯ ರಾಜಕೀಯ ವಿಚಾರದಿಂದ ದೂರ ಸರಿಯಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.

