

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿಯಲ್ಲಿ ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಶನಿವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಸಂದರ್ಭದಲ್ಲೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಈ ವಿಚಾರ ಪ್ರಸ್ತಾಪಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿಲ್ಲ. ಆದರೆ, ರಾಹುಲ್ ಗಾಂಧಿಯ ಆಪ್ತ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು, ಸಿಎಂ ಜೊತೆಚರ್ಚೆ ನಡೆಸಿ ಸಂದೇಶವನ್ನು ರಾಹುಲ್ ಗಾಂಧಿ ತಲುಪಿಸಿದ್ದಾರೆಂದು ತಿಳಿದುಬಂದಿದೆ.
ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎ)ಯನ್ನು ವಿ.ಬಿ–ಜಿ ರಾಮ್ ಜಿ ಎಂದು ಬದಲಾಯಿಸಿರುವ ವಿಚಾರ ಚರ್ಚೆಯಾಗಿದ್ದು. ಇದರಂತ ಜನವರಿ 5ರಿಂದ ದೇಶವ್ಯಾಪಿ ‘ಎಂಎನ್‌ಆರ್‌ಇಜಿಎ ಬಚಾವೋ ಆಂದೋಲನ’ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಸಚಿವರಾದ ಬೈರತಿ ಸುರೇಶ್, ಡಾ. ಹೆಚ್.ಸಿ. ಮಹದೇವಪ್ಪ ಸೇರಿದಂತೆ ತಮ್ಮ ಆಪ್ತ ಸಚಿವರೊಂದಿಗೆ ದೆಹಲಿಗೆ ತೆರಳಿದ್ದ ಸಿಎಂ, ಸಭೆಯಲ್ಲಿ ಭಾಗವಹಿಸಿದ ಬಳಿಕ ಮರಳಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಮಂಗಳವಾರ ಸಂಜೆ ತಿರುವನಂತಪುರಕ್ಕೆ ತೆರಳಲಿರುವ ಸಿದ್ದರಾಮಯ್ಯ ಅವರು, ಬುಧವಾರ ಕೇರಳದ ವಾರ್ಕಳದ ಶಿವಗಿರಿ ಮಠದಲ್ಲಿ ಶ್ರೀನಾರಾಯಣ ಧರ್ಮ ಸಂಗಮ್ ಟ್ರಸ್ಟ್ ಆಯೋಜಿಸಿರುವ 93ನೇ ಶಿವಗಿರಿ ತೀರ್ಥಯಾತ್ರಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ವೇಳೆ ಕೆ.ಸಿ. ವೇಣುಗೋಪಾಲ್ ಅವರನ್ನೂ ಮತ್ತೊಮ್ಮೆ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಹುಲ್ ಗಾಂಧಿಯವರು ಭಾನುವಾರ ಯುರೋಪ್ ಪ್ರವಾಸಕ್ಕೆ ತೆರಳುತ್ತಿದ್ದು, ಜನವರಿ 9ರ ನಂತರ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಬಳಿಕ ರಾಹುಲ್ ಗಾಂಧಿಯವರನ್ನು ಸಿದ್ದರಾಮಯ್ಯ ಅವರು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಗುರುವಾರ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದ ಭೋಜನ ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದು, ಈ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹಾಜರಿದ್ದರು.
ಆದರೆ, ಸಿದ್ದರಾಮಯ್ಯ ಆಪ್ತ ಬಣದಲ್ಲಿ ಒಬ್ಬರಾಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಈ ಭೋಜನ ಕೂಟದಲ್ಲಿ ಭಾಗವಹಿಸಿರಲಿಲ್ಲ.
ಏತನ್ಮಧ್ಯೆ ದೆಹಲಿಗೆ ಹೊರಡುವ ಮೊದಲು ಸಿಎಂ ಅವರು ಸಚಿವರಾದ ಜಮೀರ್ ಅಹ್ಮದ್ ಖಾನ್, ಎನ್. ಚೆಲುವರಾಯಸ್ವಾಮಿ ಹಾಗೂ ಡಾ. ಎಂ.ಸಿ. ಸುಧಾಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ
Advertisement