

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಯೂರೋಪ್ ಪ್ರವಾಸ ತೆರಳಿದ್ದು, ಇದರ ಬೆನ್ನಲ್ಲೇ ಸಿಎಂ ಕುರ್ಚಿಗಾಗಿ ಜಟಾಪಟಿ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಬಣ್ಣ ತಣ್ಣಗಾಗಿದೆ.
ಉಭಯ ನಾಯಕರ ಆಪ್ತರು ಪರಸ್ಪರ ಟೀಕೆಯಲ್ಲಿ ತೊಡಗದಂತೆ ನಿರ್ಧಾರ ಕೈಗೊಂಡಿರುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೂ, ಒಳಗೊಳಳಗೆ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಜನವರಿ 9ರಂದು ರಾಹುಲ್ ಗಾಂಧಿಯವರು ವಾಪಸ್ಸಾಗಲಿದ್ದು, ನಂತರ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಎರಡೂ ಬಣಗಳು ಸಿದ್ಧತೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಸಿದ್ದರಾಮಯ್ಯ ಅವರ ಆಪ್ತ ಬಳಗ ರಾಹುಲ್ ಗಾಂಧಿಯವಸು ಸಂಪುಟ ಪುನಾರಚನೆಗೆ ಸಹಮತಿ ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿಯೂ ಲಾಬಿ ನಡೆಸುತ್ತಿದ್ದಾರೆ.
ಸಲೀಂ ಅಹ್ಮದ್ ಹಾಗೂ ಜೇವರ್ಗಿ ಶಾಸಕರಾದ ಅಜಯ್ ಧರ್ಮಸಿಂಗ್ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಮಕರ ಸಂಕ್ರಾಂತಿಯ ನಂತರ ಸಚಿವ ಸಂಪುಟ ಪುನಾರಚನೆ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಜನವರಿ 6 ರಂದು ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಅವರ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆ ಇರುವುದರಿಂದ, ಅವರ ಬೆಂಬಲಿಗರು ಈ ಸಂದರ್ಭವನ್ನು ಅದ್ಧೂರಿಯಾಗಿ ಆಚರಿಸಲು ಸಜ್ಜಾಗುತ್ತಿದ್ದಾರೆ.
ಯುವ ಅಹಿಂದ ಸದಸ್ಯರು ಬೆಂಗಳೂರಿನಲ್ಲಿ 10,000 ಕ್ಕೂ ಹೆಚ್ಚು ಜನರಿಗೆ ಔತಣಕೂಟವನ್ನು ಆಯೋಜಿಸಲು ಯೋಜಿಸುತ್ತಿದ್ದಾರೆ, ಇದರಲ್ಲಿ ಸಿದ್ದರಾಮಯ್ಯ ಅವರ ನೆಚ್ಚಿನ ಖಾದ್ಯ 'ನಾಟಿ ಕೋಳಿ' (ಕಂಟ್ರಿ ಚಿಕನ್) ಸಾರನ್ನು ಮೆನುವಿನಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಯುವ ಅಹಿಂದ ಸದಸ್ಯರ ಈ ನಿರ್ಧಾರವನ್ನು ಹಿರಿಯ ನಾಯಕ ಮತ್ತು ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ ಅವರ ಬೆಂಬಲಿಗರು ಬೆಂಬಲಿಸಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಕಡಿಮೆ ಇದೆ ಎಂದು ಸಿದ್ದು ಆಪ್ತ ಬಳಗ ನಂಬಿದೆ.
ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳಲ್ಲಿ ಹಿಂದೂಳಿದ ವರ್ಗದ ನಾಯಕ ಮುಖ್ಯಮಂತ್ರಿಯಾಗಿರುವುದು ಕರ್ನಾಟಕದಲ್ಲಷ್ಟೆ. ಆದ್ದರಿಂದ ಬದಲಾವಣೆ ಅನಿವಾರ್ಯವಾದರೆ ಅಹಿಂದ ಸಮುದಾಯದ ನಾಯಕರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದು, ಈ ನಿಟ್ಟಿನಲ್ಲಿ ಗೃಹ ಸಚಿವ ಡಾ.ಜಿ. ಪಾರಮೇಶ್ವರ್ ಅವರ ಹೆಸರು ಚರ್ಚೆಯಲ್ಲಿದೆ.
ಈ ಮಧ್ಯೆ, ತಾನೂ ಹಿಂದುಳಿದ ವರ್ಗಕ್ಕೆ ಸೇರಿದವನೆಂದು ಹೇಳಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು, ತಮ್ಮ ಕೊಡುಗೆಗಳಿಗೆ ಪ್ರತಿಫಲ ನೀಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.
2023 ರಲ್ಲಿ ಕರ್ನಾಟಕದಲ್ಲಿ ಪಕ್ಷ ಸರ್ಕಾರ ರಚಿಸಿದಾಗ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದವಿತ್ತು ಎಂದು ಪುನರುಚ್ಚರಿಸುತ್ತಿದ್ದಾರೆ. ರಾಹುಲ್ ವಿದೇಶದಿಂದ ಹಿಂದಿರುಗಿದ ನಂತರ ಡಿಕೆ.ಶಿವಕುಮಾರ್ ಅವರ ಬೆಂಬಲಿಗರು ದೆಹಲಿಗೆ ತೆರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Advertisement